ದ್ವಿತೀಯ ಪಿಯುಸಿ ಪರೀಕ್ಷೆ-1 | ಜಿಲ್ಲೆಯ 51 ಪರೀಕ್ಷಾ ಕೇಂದ್ರಗಳ ಮೇಲೆ ವೆಬ್ ಕಾಸ್ಟಿಂಗ್ ಮೂಲಕ ನಿಗಾ : ಭಂವರ್ ಸಿಂಗ್ ಮೀನಾ

ಕಲಬುರಗಿ: ಪ್ರಸಕ್ತ 2024-25ನೇ ಶೈಕ್ಷಣಿಕ ವರ್ಷದ ದ್ವಿತೀಯ ಪಿ.ಯು.ಸಿ. ಪರೀಕ್ಷೆ-1 ಶನಿವಾರದಿಂದ ಆರಂಭಗೊಂಡಿದ್ದು, ನಕಲು ತಡೆಯುವ ನಿಟ್ಟಿನಲ್ಲಿ ಜಿಲ್ಲೆಯ 51 ಪರೀಕ್ಷಾ ಕೇಂದ್ರಗಳ ಮೇಲೆ ಇದೇ ಪ್ರಥಮ ಬಾರಿಗೆ ವೆಬ್ ಕಾಸ್ಟಿಂಗ್ ಮೂಲಕ ನಿಗಾ ಇಡಲಾಗಿದೆ ಎಂದು ಜಿಲ್ಲಾ ಪಂಚಾಯತ್ ಸಿ.ಇ.ಓ ಭಂವರ್ ಸಿಂಗ್ ಮೀನಾ ತಿಳಿಸಿದರು.
ಶನಿವಾರ ಜಿಲ್ಲಾ ಪಂಚಾಯತ್ ಕಚೇರಿಯಲ್ಲಿ ಸ್ಥಾಪಿಸಲಾಗಿರುವ ವೆಬ್ ಕಾಸ್ಟಿಂಗ್ ರೂಂ ವೀಕ್ಷಿಸಿದ ಅವರು, ಕಲಬುರಗಿ ನಗರದಲ್ಲಿ 25 ಮತ್ತು ತಾಲೂಕು ಪ್ರಾಂತ್ಯದಲ್ಲಿ 26 ಸೇರಿ 51 ಪರೀಕ್ಷಾ ಕೇಂದ್ರಗಳನ್ನಯ ಸ್ಥಾಪಿಸಿದೆ. ಇಲ್ಲಿ ಈ ವರ್ಷ ರೆಗ್ಯೂಲರ್ ಆಗಿ 27,994 ಮತ್ತು ಖಾಸಗಿಯಾಗಿ 741 ವಿದ್ಯಾರ್ಥಿಗಳು ಪರೀಕ್ಷೆ ಬರೆಯಲಿದ್ದಾರೆ. ಇನ್ನು 2,683 ಪುನರಾವರ್ತಿತ ಅಭ್ಯರ್ಥಿಗಳು, ಫಲಿತಾಂಶ ಹೆಚ್ಚಳಕ್ಕೆ 31 ಜನ ಪರೀಕ್ಷೆ ಬರೆಯುತ್ತಿದ್ದಾರೆ. 51 ಕೇಂದ್ರಗಳ 765 ಕೊಠಡಿಯಲ್ಲಿ 1,284 ಸಿ.ಸಿ.ಟಿ.ವಿ. ಕ್ಯಾಮರಾ ಅಳವಡಿಸಿದ್ದು, ಇಲ್ಲಿಂದ ಪ್ರತಿ ಕೇಂದ್ರದ ಕೋಣೆಗಳನ್ನು ನೇರವಾಗಿ ವೀಕ್ಷಿಸಲಾಗುತ್ತಿದೆ ಎಂದರು.
ಇದಕ್ಕಾಗಿ 10 ಜನ ಪ್ರೋಗ್ರಾಮರ್ ಗಳನ್ನು ನೇಮಿಸಲಾಗಿದೆ. ಪ್ರತಿಯೊಬ್ಬರಿಗೆ 5 ಕೇಂದ್ರಗಳನ್ನು ಹಂಚಿಕೆ ಮಾಡಿದ್ದು, ಅವರುಗಳು ಆ ಕೇಂದ್ರದ ಮೇಲೆ ತೀವ್ರ ನಿಗಾ ವಹಿಸಿದ್ದಾರೆ. ಇದಲ್ಲದೆ ಒಂದು ದೊಡ್ಡ ಸ್ಕ್ರೀನ್ ಅಳವಡಿಸಿದೆ. ಯಾವುದೇ ನಕಲು ಅಥವಾ ಇತರೆ ಅಹಿತಕರ ಘಟನೆ ನಡೆದಲ್ಲಿ ಕೂಡಲೆ ಸ್ಥಳೀಯ ಪರೀಕ್ಷಾ ಕೇಂದ್ರದ ಅಧೀಕ್ಷಕರು, ಸ್ಥಳೀಯ ನಿರೀಕ್ಷಣಾಧಿಕಾರಿಗಳ ಗಮನಕ್ಕೆ ತರಲಾಗುವುದು ಎಂದು ಸಿ.ಇ.ಓ ಭಂವರ್ ಸಿಂಗ್ ಮೀನಾ ತಿಳಿಸಿದರು.