ಸೇಡಂ | ರೈಲ್ವೆ ಗೇಟ್‌ಗೆ ಬಳಿ ಸಿಲುಕಿದ ಆ್ಯಂಬುಲೆನ್ಸ್; ಹೃದಯಾಘಾತಕ್ಕೆ ಒಳಗಾದ ವ್ಯಕ್ತಿ ಮೃತ್ಯು

ಕಲಬುರಗಿ : ತೀವ್ರ ಹೃದಯಾಘಾತವಾದ ವ್ಯಕ್ತಿಯನ್ನು ಹೆಚ್ಚಿನ ಚಿಕಿತ್ಸೆಗಾಗಿ ಕಲಬುರಗಿ ಜಿಲ್ಲಾ ಆಸ್ಪತ್ರೆಗೆ ಸಾಗಿಸುವ ವೇಳೆ ಸೇಡಂ ಪಟ್ಟಣದ ಸಿಮೆಂಟ್ ಕಾರ್ಖಾನೆಗೆ ಗೂಡ್ಸ್ ರೈಲು ತೆರಳಲು ರೈಲ್ವೆ ಗೇಟ್ ಹಾಕಿರುವುದರಿಂದ ʼಗೊಲ್ಡನ್ ಅವರ್ʼ ನಲ್ಲಿ ಆಸ್ಪತ್ರೆಗೆ ತಲುಪುವಲ್ಲಿ ವಿಳಂಬವಾಗಿರುವುದರಿಂದ ವ್ಯಕ್ತಿ ಮೃತಪಟ್ಟಿರುವ ಘಟನೆ ನಡೆದಿದೆ.
ಸೇಡಂ ಪಟ್ಟಣದ ನಿವಾಸಿ ಮುಕ್ತಾರ್ ಪಾಷಾ ಹೃದಯಾಘಾತದಿಂದ ಮೃತಪಟ್ಟ ವ್ಯಕ್ತಿ. ಮುಕ್ತಾರ್ ಪಾಷಾ ತಾಲ್ಲೂಕು ಕ್ರೀಡಾಂಗಣದಲ್ಲಿ ಕ್ರಿಕೆಟ್ ಟೂರ್ನಮೆಂಟ್ ವಿಕ್ಷೀಸಲು ತೆರಳಿದ್ದ ವೇಳೆ ಎದೆನೋವು ಕಾಣಿಸಿಕೊಂಡಿದ್ದು, ತಕ್ಷಣ ಅಲ್ಲಿದ್ದವರು ಸ್ಥಳೀಯ ಆಸ್ಪತ್ರೆಗೆ ಕರೆದೊಯ್ದಿದ್ದಾರೆ. ವೈದ್ಯರು ಹೆಚ್ಚಿನ ಚಿಕಿತ್ಸೆಗಾಗಿ ತಕ್ಷಣ ಕಲಬುರಗಿ ಹೋಗಲು ಹೇಳಿದ್ದರಿಂದ ಆ್ಯಂಬುಲೆನ್ಸ್‌ನಲ್ಲಿ ಕೊಂಡೊಯ್ಯುವಾಗ ರೈಲ್ವೆ ಗೇಟ್ ಎದುರಾಗಿದೆ. ಈ ವೇಳೆ ರೈಲ್ವೆ ಗೇಟ್ ಹಾಕಿರುವುದರಿಂದ 20 ನಿಮಿಷ ಅಲ್ಲೇ ಸಮಯ ಕಳೆದಿರುವುದರಿಂದ ʼಗೊಲ್ಡನ್ ಅವರ್ʼ ನಲ್ಲಿ ಆಸ್ಪತ್ರೆಗೆ ತಲುಪುವಲ್ಲಿ ವಿಫಲವಾಗಿರುವುದರಿಂದ ಮುಕ್ತಾರ್ ಪಾಷಾ ಮೃತಪಟ್ಟಿದ್ದಾನೆ ಎಂದು ತಿಳಿದುಬಂದಿದೆ.
ಪರಿಹಾರಕ್ಕೆ ಆಗ್ರಹಿಸಿ ಪ್ರತಿಭಟನೆ: ವ್ಯಕ್ತಿ ಮೃತಪಟ್ಟಿರುವ ಸುದ್ದಿ ತಿಳಿದು ಸೇಡಂ ಪಟ್ಟಣದ ನಿವಾಸಿಗಳು ಸಿಮೆಂಟ್ ಕಾರ್ಖಾನೆಯ ಮುಖ್ಯ ಗೇಟ್ ಬಂದ್ ಮಾಡಿ ರೈಲ್ವೆ ಹಳಿ ಸ್ಥಳಾಂತರ ಮತ್ತು ಮೃತ ವ್ಯಕ್ತಿಯ ಕುಟುಂಬಕ್ಕೆ ಸರಕಾರಿ ನೌಕರಿ ಹಾಗೂ 50 ಲಕ್ಷ ರೂ. ಪರಿಹಾರ ನೀಡಬೇಕೆಂದು ತಡ ರಾತ್ರಿಯವರೆಗೆ ಪಟ್ಟು ಹಿಡಿದು ಪ್ರತಿಭಟನೆ ನಡೆಸಿದರು.