ಕುರಿಗಳ ಸರಣಿ ಸಾವು: ಕಲಬುರಗಿಯ ಆಳಂದ ತಾಲೂಕಿನ ಗ್ರಾಮಸ್ಥರಲ್ಲಿ ಆತಂಕ!
ಕಲಬುರಗಿ: ಆಳಂದ ತಾಲೂಕಿನ ಮೋಘಾ ಬಿ. ಗ್ರಾಮದಲ್ಲಿ ಕುರಿಗಳ ಹಠಾತಾಗಿ ಸಾವನ್ನಪ್ಪುತ್ತಿದ್ದು, ಕುರಿಪಾಲಕರಲ್ಲಿ ಭಾರೀ ಆತಂಕ ಸೃಷ್ಟಿಸಿದೆ.
ಕಳೆದ ಮೂರ್ನಾಲ್ಕು ದಿನಗಳಿಂದ ಈ ಗ್ರಾಮದಲ್ಲಿ ಹಲವು ಕುರಿಗಳು ಸಾವನ್ನಪ್ಪಿವೆ. ಗ್ರಾಮದ ಶ್ರೀಮಂತ ನಡಗೇರಿ 1 ಕುರಿ, ಬರಗಾಲಿ ಶಂಕರ ದುದಬಾತೆ 4 ದೊಡ್ಡ ಕುರಿ ಮತ್ತು 4 ಕುರಿಮರಿ ಮೃತಪಟ್ಟಿವೆ. ಬೀರಪ್ಪಾ ಪೂಜಾರಿ 3 ಕುರಿ, ವಿಠ್ಠಲ ಪೂಜಾರಿ 5 ಕುರಿ, ಶ್ರೀಮಂತ ಪೂಜಾರಿ 3 ಕುರಿ, ಹೀಗೆ 30ಕ್ಕೂ ಹೆಚ್ಚು ಕುರಿಗಳು ಬಂದು ಹಠಾತಾಗಿ ಸಾವನ್ನಪ್ಪಿದ್ದು, ಕುರಿ ಪಾಲಕರು ಕಂಗಾಲಾಗಿದ್ದಾರೆ.
ವ್ಯಾಪ್ತಿಯ ಸಂಬಂಧಿತ ಪಶು ವೈದ್ಯರಿಗೆ ದೂರವಾಣಿ ಕರೆ ಮಾಡಿದರೂ ಸ್ವೀಕರಿಸುತ್ತಿಲ್ಲ. ಸಹಾಯಕ ನಿರ್ದೇಶಕ ಡಾ. ಇಂಗಳೆ ಅವರಿಗೆ ಸಂರ್ಕಿಸಿದಾಗ ಸಂಬಂಧಿಸಿದ ಸಿಬ್ಬಂದಿಗೆ ಸಂಪರ್ಕಿಸಿ ಎಂದು ಹೇಳಿದ್ದಾರೆ. ಆದರೆ ಸಂಬಂಧಿಸಿದ ವೈದ್ಯ ದೂರವಾಣಿ ಕರೆ ಸ್ವೀಕರಿಸಿ ಸ್ಥಳಕ್ಕೆ ಬಂದು ಕುರಿಗಳ ಸಾವು ಆಗದಂತೆ ಚಿಕಿತ್ಸೆ ನೀಡಲು ಬರುತ್ತಿಲ್ಲ ಎಂದು ಸಂತ್ರಸ್ತ ಶ್ರೀಮಂತ ನಡಗೇರಿ ಅವರು ಅಳಲು ತೋಡಿಕೊಂಡಿದ್ದಾರೆ.
ಮೋಘಾ ಬಿ. ಗ್ರಾಮ ಹೊರತು ಪಡಿಸಿ ಇನ್ನೂ ಕೆಲವು ಗ್ರಾಮಗಳಲ್ಲೂ ಇದೇ ಪರಿಸ್ಥಿತಿ ಎದುರಾಗಿ ಕುರಿಗಳ ಹಠಾತಾಗಿ ಸಾವನ್ನಪ್ಪುತ್ತಿವೆ ಎಂಬ ವರದಿಗಳ ಕೇಳಿಬರುತ್ತಿವೆ. ಮೋಘಾ ಬಿ. ಗ್ರಾಮಕ್ಕೆ ಸಂಬಂಧಿತ ಪಶು ವೈದ್ಯರು ಭೇಟಿ ನೀಡಿ ಮುಂಜಾಗ್ರತಾ ಚಿಕಿತ್ಸೆ ನೀಡಿ ಕುರಿಗಳ ಸಾವು ತಡೆಯಬೇಕು ಎಂದು ನಡಗೇರಿ ಅವರು ಮನವಿ ಮಾಡಿದ್ದಾರೆ.