ಜ.24ರಿಂದ ಅಪ್ಪನ ಕೆರೆ ಉದ್ಯಾನವನದಲ್ಲಿ ಶಿಶಿರೋತ್ಸವ ಸಂಭ್ರಮ: ಕೃಷ್ಣ ಭಾಜಪೇಯಿ

ಕೃಷ್ಣ ಭಾಜಪೇಯಿ
ಕಲಬುರಗಿ: ಕಲಬುರಗಿ ನಗರದ ಹೃದಯ ಭಾಗದಲ್ಲಿರುವ ಶರಣಬಸವೇಶ್ವರ ಕೆರೆ ಉದ್ಯಾನವನದಲ್ಲಿ (ಅಪ್ಪನ ಕೆರೆ) ಇದೇ ಜನವರಿ 24 ರಿಂದ 26 ರವರೆಗೆ ಮೂರು ದಿನಗಳ ಕಾಲ ಶಿಶಿರೋತ್ಸವ ಸಂಭ್ರಮ-2025 ಸಾಂಸ್ಕೃತಿಕ ಕಾರ್ಯಕ್ರಮ ಪ್ರಾಧಿಕಾರದಿಂದ ಆಯೋಜಿಸಲಾಗಿದೆ ಎಂದು ಶರಣಬಸವೇಶ್ವರ ಕೆರೆ ನಿರ್ವಹಣಾ ಪ್ರಾಧಿಕಾರದ ಅಧ್ಯಕ್ಷರಾಗಿರುವ ಪ್ರಾದೇಶಿಕ ಆಯುಕ್ತ ಕೃಷ್ಣ ಭಾಜಪೇಯಿ ತಿಳಿಸಿದ್ದಾರೆ.
ಹೊಸ ವರ್ಷ ಹಾಗೂ ಗಣರಾಜ್ಯೋತ್ಸವ ಸಡಗರದ ಅಂಗವಾಗಿ ಕಲಬುರಗಿ ಜನತೆಗೆ ಸಾಂಸ್ಕೃತಿಕ ಹಬ್ಬ ಇದಾಗಿದ್ದು, ಮೂರು ದಿನಗಳ ಕಾಲ ವೈವಿಧ್ಯಮಯ ಸಾಂಸ್ಕೃತಿಕ ಕಾರ್ಯಕ್ರಮಗಳ ರಂಗೇರಲಿದೆ ಎಂದು ಅವರು ತಿಳಿಸಿದ್ದಾರೆ.
ಕೆರೆಯ ಸುಂದರ ಉದ್ಯಾನವನದಲ್ಲಿ ಮೂರು ದಿನಗಳ ಶಿಶಿರೋತ್ಸವ ಸಂಭ್ರಮದಲ್ಲಿ ಸ್ಥಳೀಯ ಕಲಾವಿದರ ಅಪೂರ್ವ ಸಮಾಗಮವಾಗಲಿದೆ. ಗಾಯನ, ನೃತ್ಯ, ರಸಮಂಜರಿ ಹಾಗೂ ಜಾಗೃತಿ ಕಾರ್ಯಕ್ರಮಗಳೊಂದಿಗೆ ಶಿಶಿರೋತ್ಸವವು ಕಲಾರಸಿಕರ ಮನಸೂರೆಗೊಳಿಸಲಿದ್ದು, ಸಾರ್ವಜನಿಕರು, ಕಲಾ ರಸಿಕರು ಮೂರು ದಿನಗಳ ಕಾಲ ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ಕಾರ್ಯಕ್ರಮ ಯಶಸ್ವಿಗೊಳಿಸಬೇಕೆಂದು ಮನವಿ ಮಾಡಿರುವ ಕೃಷ್ಣ ಭಾಜಪೇಯಿ ಅವರು, ಶಿಶಿರೋತ್ಸವದ ಅಂಗವಾಗಿ ಮೂರು ದಿನಗಳ ಕಾಲ ನೂರಾರು ವೈವಿಧ್ಯಮಯ ಪುಷ್ಪ ಪ್ರದರ್ಶನ ಹಾಗೂ ಮಾರಾಟ ವ್ಯವಸ್ಥೆ ಸಹ ಕಲ್ಪಿಸಲಾಗಿದೆ ಎಂದಿದ್ದಾರೆ.
ಶರಣಬಸವೇಶ್ವರ ಕೆರೆ ನಿರ್ವಹಣಾ ಪ್ರಾಧಿಕಾರ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಹಾಗೂ ಕೆರೆ ನಿರ್ವಹಣಾ ಪ್ರಾಧಿಕಾರ ಅಧೀನದ ವಿವಿಧ ಸಮಿತಿಗಳ ಸಂಯುಕ್ತಾಶ್ರಯದಲ್ಲಿ ಆಯೋಜಿಸಿರುವ ಶಿಶಿರೋತ್ಸವ ಸಂಭ್ರಮ-2025 ಕಾರ್ಯಕ್ರಮವನ್ನು ಕೆರೆ ಉದ್ಯಾನವನದಲ್ಲಿ ಜ.25ರ ಸಾಯಂಕಾಲ 5.30ಕ್ಕೆ ಉದ್ಘಾಟನೆ ಮಾಡಲಾಗುತ್ತಿದ್ದು, ಜ.26 ರಂದು ಸಾಯಂಕಾಲ ಸಾಂಸ್ಕೃತಿಕ ಕಾರ್ಯಕ್ರಮಗಳ ನಂತರ ಸಮಾರೋಪ ಸಮಾರಂಭ ಹಾಗೂ ಪ್ರಶಸ್ತಿ ಪ್ರದಾನ ಸಮಾರಂಭ ನೆರವೇರಲಿದೆ ಎಂದು ಅವರು ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದ್ದಾರೆ.
ಉದ್ಯಾನವನಕ್ಕೆ ಉಚಿತ ಪ್ರವೇಶ:
ಶಿಶಿರೋತ್ಸವ ಸಂಭ್ರಮ ಹಿನ್ನೆಲೆಯಲ್ಲಿ ಜ.24 ರಿಂದ 26ರ ವರೆಗೆ ಪ್ರತಿ ದಿನ ಸಂಜೆ 4.30 ರಿಂದ 7.30 ಗಂಟೆ ವರೆಗೆ ಅಪ್ಪನ ಕೆರೆ ಉದ್ಯಾನವನಕ್ಕೆ ಸಾರ್ವಜನಿಕರಿಗೆ ಉಚಿತ ಪ್ರವೇಶ ಕಲ್ಪಿಸಲಾಗಿದೆ ಎಂದರು ಆರ್.ಸಿ.ಕೃಷ್ಣ ಭಾಜಪೇಯಿ ತಿಳಿಸಿದ್ದಾರೆ.
ಶಿಶಿರೋತ್ಸವ ಸಂಭ್ರಮ-2025ರ ದಿನವಾರು ಕಾರ್ಯಕ್ರಮಗಳ ವಿವರ:
ಜನವರಿ 24ರ ಕಾರ್ಯಕ್ರಮಗಳು:
ಮಧ್ಯಾಹ್ನ 3 ಗಂಟೆಗೆ ಸಂಗಮೇಶ್ವರ ಮಹಿಳಾ ಮಂಡಲದ ಅಧ್ಯಕ್ಷೆ ವೈಶಾಲಿ ದೇಶಮುಖ ಹಾಗೂ ಸಂಧ್ಯಾ ಹೊನಗುಂಟಿಕರ್ ನೇತೃತ್ವದಲ್ಲಿ ಹತ್ತಕ್ಕೂ ಹೆಚ್ಚು ಮಹಿಳೆಯರು ಕೆರೆಯ ಉದ್ಯಾನದಲ್ಲಿ ರಂಗೋಲಿಯ ಚಿತ್ತಾರ ಬಿಡಿಸಲಿದ್ದು, ವಿಶೇಷ ಆಕರ್ಷಣೆಯಾಗಿರಲಿದೆ. ಸಾಯಂಕಾಲ 5.30ಕ್ಕೆ ಶಿಶಿರೋತ್ಸವ ಸಂಭ್ರಮ ಕಾರ್ಯಕ್ರಮದ ಉದ್ಘಾಟನೆ ನೆರವೇರಲಿದೆ. 6 ಗಂಟೆಗೆ ತಬಲಾ ಕಲಾವಿದ ರವೀಂದ್ರ ಕುಲಕರ್ಣಿ ನೇತೃತ್ವದ ಹಂಸದ್ವನಿ ತಬಲಾ ಬಳಗದಿಂದ ತಬಲಾ ನಿನಾದ ಮೂಡಿಬರಲಿದೆ. 6.30ಕ್ಕೆ ಡಾ. ಶುಭಾಂಗಿ ನಿರ್ದೇಶನದಲ್ಲಿ ಓಂಕಾರ ನೃತ್ಯ ಸಾಧನಾ ತಂಡದಿಂದ ನೃತ್ಯ ವೈಭವ, 7 ಗಂಟೆಗೆ ಕರ್ನಾಟಕ ಸಂಗೀತ ಸಾಹಿತ್ಯ ಸಾಂಸ್ಕೃತಿಕ ಸಂಘದ ಅಧ್ಯಕ್ಷ ಬಾಬುರಾವ್ ಕೋಬಾಲ್ ಮತ್ತು ಸಂಗಡಿಗರಿಂದ ಜಾನಪದ ಗೀತೆ ಮೂಡಿಬರಲಿದೆ. ದಿನದ ಕೊನೆಯ ಕಾರ್ಯಕ್ರಮ ಸಂಜೆ 7.30 ರಿಂದ ಲಕ್ಷ್ಮಿ ಅರುಣ್ ಭೀಮಳ್ಳಿ ಅವರಿಂದ ಗಾಯನ ಪ್ರಸ್ತುತವಾಗಲಿದೆ.
ಜನವರಿ 25ರ ಕಾರ್ಯಕ್ರಮಗಳು:
ಎರಡನೆಯ ದಿನದ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಸಂಜೆ 5 ಗಂಟೆಗೆ ಚಾಲನೆ ನೀಡಲಾಗುತ್ತಿದ್ದು, 5.30 ಗಂಟೆಗೆ ಹಿಂದುಸ್ತಾನಿ ಕಲಾವಿದ ವೀರೇಶ್ ಹೂಗಾರ್ ಮತ್ತು ತಂಡದಿಂದ ಶಾಸ್ತ್ರೀಯ ಗಾಯನ, 6 ಗಂಟೆಗೆ ಮೇದಿನಿ ಮತ್ತು ಅವರ ಬಳಗದಿಂದ ಭರತನಾಟ್ಯ ಹಾಗೂ 6.30 ಗಂಟೆಯಿಙದ ಪ್ರತಾಪ್ ಸಿಂಗ್ ತಿವಾರಿ ಮತ್ತು ಸಂಗಡಿಗರಿಂದ ಚಲನಚಿತ್ರ ಗಾಯನದ ರಸಮಂಜರಿ ಕಾರ್ಯಕ್ರಮ ನಡೆಯಲಿದೆ.
ಜನವರಿ 26ರ ಕಾರ್ಯಕ್ರಮಗಳು:
ಗಣರಾಜ್ಯೋತ್ಸವದ ದಿನದಂದು ಸಂಜೆ 4 ಗಂಟೆಗೆ ಜಯತೀರ್ಥ ಕುಲಕರ್ಣಿ ಅವರಿಂದ ಕೊಳಲು ವಾದನ, 4.30 ಗಂಟೆಗೆ ಗೋಪಿ ಕುಲಕರ್ಣಿ ಮತ್ತು ಸಂಗಡಿಗರಿಂದ ಸುಗಮ ಸಂಗೀತ, 5 ಗಂಟೆಗೆ ಕುಸನೂರು ಮಾಳಿಂಗರಾಯ ಮತ್ತು ತಂಡದಿಂದ ಡೊಳ್ಳು ಕುಣಿತ, 5.30 ರಿಂದ ಶ್ರೀಶೈಲ್ ಘೂಳಿ ಮತ್ತು ತಂಡದಿಂದ ಪವಾಡ ರಹಸ್ಯ ಬಯಲು ಕಾರ್ಯಕ್ರಮ, 6 ಗಂಟೆಗೆ ನಾಟ್ಯಂಜಲಿ ನೃತ್ಯ ಕಲಾತಂಡದ ನಿರ್ದೇಶಕಿ ಸಂಧ್ಯಾ ಪುರಂದರ ಭಟ್ ತಂಡದಿಂದ ನೃತ್ಯ ಕಲಾ ವೈಭವ ನಡೆಯಲಿದ್ದು, ಕೊನೆಯದಾಗಿ ಉದ್ಯಾನವನದಲ್ಲಿಯೇ ಶಿಶಿರೋತ್ಸವ ಸಂಭ್ರಮದ ಸಮಾರೋಪ ಸಮಾರಂಭ ಹಾಗೂ ಪ್ರಶಸ್ತಿ ಪ್ರದಾನ ಸಮಾರಂಭ ಜರುಗಲಿದೆ.