ಬಿಜೆಪಿಯ ಕೆಲ ಹಾಲಿ ಸಂಸದರು ನಮ್ಮ ಸಂಪರ್ಕದಲ್ಲಿದ್ದಾರೆ: ಡಿಸಿಎಂ ಡಿ.ಕೆ. ಶಿವಕುಮಾರ್
ಕಲಬುರಗಿ : ಕಾಂಗ್ರೆಸ್ ಸೇರ್ಪಡೆಯಾಗಲು ಬಿಜೆಪಿಯ ಕೆಲ ಹಾಲಿ ಸಂಸದರು ಬಯಸಿದ್ದು, ನಮ್ಮೊಂದಿಗೆ ಸಂಪರ್ಕದಲ್ಲಿದ್ದಾರೆ ಎಂದು ಡಿಸಿಎಂ ಡಿ.ಕೆ. ಶಿವಕುಮಾರ್ ಹೇಳಿದ್ದಾರೆ.
ನಗರದ ಐವಾನ್ ಇ ಶಾಹಿ ಅತಿಥಿ ಗೃಹದಲ್ಲಿ ಬುಧವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಹಲವು ನಾಯಕರು ನಮ್ಮೊಂದಿಗೆ ಸಂಪರ್ಕ ಹೊಂದಿದ್ದು, ಬಹಳಷ್ಟು ಜನ ನಮ್ಮನ್ನು ಭೇಟಿಯಾಗಿದ್ದಾರೆ. ಅವರ ಹೆಸರು ನಾನು ಬಹಿರಂಗ ಪಡಿಸುವುದಿಲ್ಲ ಎಂದರು.
ನಿನ್ನೆ ಜಯಪ್ರಕಾಶ್ ಹೆಗಡೆ, ಎಂ.ಪಿ.ಕುಮಾರಸ್ವಾಮಿ ಕಾಂಗ್ರೆಸ್ ಪಕ್ಷ ಸೇರ್ಪಡೆಯಾಗಿದ್ದಾರೆ. ಅಲ್ಲದೆ, ಬಿಜೆಪಿಯ ಹಾಲಿ ಸಂಸದ ಸದಾನಂದ ಗೌಡ ಪಕ್ಷಕ್ಕೆ ಸೇರ್ಪಡೆಯಾದರೆ ಸ್ವಾಗತ ಮಾಡುತ್ತೇವೆ ಎಂದು ಎಂದು ಹೇಳಿದರು.
ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ 20 ಸ್ಥಾನ ಗೆಲ್ಲಲಿದೆ. ಬಿಜೆಪಿಗೆ ಆಡಳಿತ ವಿರೋಧಿ ಅಲೆ ಕಾಡುತ್ತಿದೆ. ಅದಕ್ಕಾಗಿಯೇ ಬಿಜೆಪಿಯು ಹಾಲಿ 10 ಮಂದಿ ಸಂಸದರನ್ನು ಬದಲಾವಣೆ ಮಾಡುತ್ತಿದ್ದಾರೆ. ಬಿಜೆಪಿಯವರು ಜನರಿಗೆ ಸ್ಪಂದಿಸಿಲ್ಲ ಎಂದು ದೂರಿದರು.
ಬೆಂಗಳೂರು ಸೇರಿದಂತೆ ಹಲವಡೆ ಕುಡಿಯುವ ನೀರಿನ ಸಮಸ್ಯೆಯಾಗುತ್ತಿದೆ. ನಗರದಲ್ಲಿ 70 ಬೋರ್ ವೆಲ್ ಬತ್ತಿ ಹೋಗಿವೆ. ಆದರೂ ಕೂಡ ಕಾವೇರಿ ನೀರು ಸಮರ್ಪಕವಾಗಿ ಸರಬರಾಜು ಮಾಡಲಾಗುತ್ತದೆ. ಯಾರಿಗೂ ತೊಂದರೆಯಾಗದಂತೆ ನೋಡಿಕೊಳ್ಳಲು ಸೂಚಿಸಿದ್ದೆವೆ ಎಂದು ಹೇಳಿದರು.
ಸಂಸದ ಅನಂತಕುಮಾರ್ ಹೆಗಡೆ ಸಂವಿಧಾನ ಬದಲಾವಣೆ ಬಗ್ಗೆ ಮಾತನಾಡುತ್ತಾರೆ. ಇದಕ್ಕೆ ಮೋದಿಯವರು ಇಲ್ಲಿಯವರೆಗೆ ಮಾತನಾಡಿಲ್ಲ. ಅದರ ಅರ್ಥ ಮೌನಂ ಸಮ್ಮತಿ ಲಕ್ಷಣಂ ಅಂತ. ಹೆಗಡೆಯವರ ಹೇಳಿಕೆ, ಬಿಜೆಪಿ ಹೇಳಿಕೆಯಾಗಿದೆ ಎಂದು ವಾಗ್ದಾಳಿ ಮಾಡಿದರು.