ಅಪರಾಧ ಪತ್ತೆ ಹಚ್ಚುವಲ್ಲಿ ರಾಜ್ಯ ಪೊಲೀಸ್ ಮುಂಚೂಣಿಯಲ್ಲಿದೆ : ಗೃಹಸಚಿವ ಡಾ.ಜಿ.ಪರಮೇಶ್ವರ್

ಕಲಬುರಗಿ : ಕರ್ನಾಟಕ ರಾಜ್ಯದ ಪೊಲೀಸ್ ಇಲಾಖೆ ಆಧುನಿಕ ತಂತ್ರಜ್ಞಾನವನ್ನು ಅಳವಡಿಸಿಕೊಂಡು ಅಪರಾಧ ಪತ್ತೆ ಮತ್ತು ನಿಯಂತ್ರಣದಲ್ಲಿ ಮುಂಚೂಣಿಯಲ್ಲಿದೆ. ಸೈಬರ್ ಅಪರಾಧಗಳ ತನಿಖೆ ಮತ್ತು ತಂತ್ರಜ್ಞಾನ ಬಳಸಿ ಅಪರಾಧ ಪತ್ತೆ ಹಚ್ಚುವಲ್ಲಿ ಇಲಾಖೆ ಯಶಸ್ವಿಯಾಗಿದೆ ಎಂದು ಗೃಹಸಚಿವ ಡಾ.ಜಿ.ಪರಮೇಶ್ವರ್ ಹೇಳಿದ್ದಾರೆ.
ನಗರದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಇತ್ತೀಚೆಗೆ ಮಂಗಳೂರಿನಲ್ಲಿ ನಡೆದ ಬ್ಯಾಂಕ್ ದರೋಡೆ ಪ್ರಕರಣವನ್ನು ಕೇವಲ 48 ಗಂಟೆಗಳಲ್ಲಿ ಪತ್ತೆ ಹಚ್ಚಿದ್ದು, ಬೀದರ್ನಲ್ಲೂ ನಡೆದ ದರೋಡೆ ಪ್ರಕರಣವನ್ನು ಆಧುನಿಕ ತಂತ್ರಜ್ಞಾನ ಬಳಸಿ ಶೀಘ್ರವಾಗಿ ಪತ್ತೆ ಹಚ್ಚಲಾಗುತ್ತಿದೆ. ಈ ಪ್ರಕರಣಗಳಲ್ಲಿ ಆರೋಪಿಗಳನ್ನು ಎರಡು ಮೂರು ದಿನಗಳಲ್ಲಿ ಬಂಧಿಸಲಾಗಿದೆ ಎಂದರು.
ರಾಜ್ಯದಲ್ಲಿ 1,006 ಪೊಲೀಸ್ ಠಾಣೆಗಳಿದ್ದು, 130 ಕೋಟಿ ರೂ. ವೆಚ್ಚದಲ್ಲಿ ಡ್ಯಾಶ್ಬೋರ್ಡ್ಗಳನ್ನು ಅಳವಡಿಸಲಾಗುತ್ತಿದೆ. ಕಲಬುರಗಿ ಪೊಲೀಸ್ ಇಲಾಖೆ ಈ ಕಾರ್ಯದಲ್ಲಿ ಒಂದು ಹೆಜ್ಜೆ ಮುಂದೆ ಇದ್ದು, ನಗರದ 14 ಪೊಲೀಸ್ ಠಾಣೆಗಳಲ್ಲಿ ಒಟ್ಟು 113 ಕ್ಯಾಮರಾಗಳನ್ನು ಅಳವಡಿಸಲಾಗಿದೆ. ಈ ಕ್ಯಾಮರಾಗಳು 24x7 ಲೈವ್ ನಿಗಾವಹಿಸುತ್ತವೆ, ಇದರಿಂದ ಅಪರಾಧ ಪತ್ತೆ ಹಚ್ಚಲು ಸಹಾಯವಾಗುತ್ತದೆ ಎಂದು ತಿಳಿಸಿದರು.
ಇ-ಆರ್ಎಸ್ಎಸ್ 112 ಎಮರ್ಜನ್ಸಿ ವಾಹನಗಳು ಕಾಲ್ ಬಂದ 9 ನಿಮಿಷಗಳಲ್ಲಿ ಸ್ಪಂದಿಸುತ್ತಿವೆ. ಪ್ರಾರಂಭದಲ್ಲಿ ಸ್ಪಂದನೆ ಸಮಯ 16 ನಿಮಿಷವಾಗಿದ್ದು, ಬೆಂಗಳೂರಿನಲ್ಲಿ 26 ನಿಮಿಷ ಇತ್ತು. ಈಗ ಬೆಂಗಳೂರಿನಲ್ಲಿ 5-6 ನಿಮಿಷಗಳಿಗೆ ಇಳಿಸಲಾಗಿದೆ. ಕಲಬುರಗಿಯಲ್ಲಿ ಈ ವ್ಯವಸ್ಥೆಯನ್ನು ಅಳವಡಿಸಿರುವುದು ಸಂತಸದ ಸಂಗತಿಯಾಗಿದೆ ಎಂದರು.
ಸರ್ಕಾರ ಡ್ರಗ್ಸ್ ಸೇವನೆ ವಿರುದ್ಧ ಗಂಭೀರವಾಗಿದೆ. ಡ್ರಗ್ಸ್ ಸೇವನೆ ಸಂಪೂರ್ಣ ನಿಲ್ಲಿಸಲು ಪೊಲೀಸರು ಬದ್ದರಾಗಿದ್ದಾರೆ. ಡ್ರಗ್ಸ್ ಸೇವನೆ ಮತ್ತು ಮಾರಾಟ ಮಾಡುವವರ ವಿರುದ್ಧ ಕ್ರಮ ಕೈಗೊಳ್ಳಲಾಗುತ್ತಿದೆ. ಕಲಬುರಗಿಯಲ್ಲಿ ಡ್ರಗ್ಸ್ ಎಲ್ಲೂ ಸಿಗಬಾರದು ಎಂದು ಈಗಾಗಲೇ ನಿರ್ದೇಶನ ನೀಡಲಾಗಿದೆ ಎಂದು ಹೇಳಿದರು.
ಕಲಬುರಗಿಯಲ್ಲಿ ಇ-ಚಲನ್ ಜಾರಿಯಾಗಿದೆ. ಟ್ರಾಫಿಕ್ ನಿಯಮಗಳನ್ನು ಉಲ್ಲಂಘಿಸಿದರೆ, ಅವರಿಗೆ ದಂಡ ವಿಧಿಸಲಾಗುತ್ತದೆ ಮತ್ತು ಮನೆಗೆ ದಂಡದ ಬಿಲ್ ಬರುತ್ತದೆ. ದಂಡ ಕಟ್ಟಿಲ್ಲ ಅಂದರೆ ಕೇಸ್ ಮಾಡಲಾಗುತ್ತದೆ. ಇ-ಚಲನ್ ಮೂಲಕ ಅಪರಾಧ ತಪ್ಪಿಸಲು ಮತ್ತು ಆದಾಯ ಹೆಚ್ಚಿಸಲು ಸಹಾಯವಾಗುತ್ತದೆ ಎಂದರು.
ಶೀಘ್ರದಲ್ಲೇ 1,600 ಸಬ್ ಇನ್‌ಸ್ಪೆಕ್ಟರ್‌ಗಳ ನೇಮಕಾತಿ :
ರಾಜ್ಯದಲ್ಲಿ ಪೊಲೀಸ್ ಸಿಬ್ಬಂದಿ ಕೊರತೆ ಇದೆ. 545 ಪಿಎಸ್ಐ ಹಗರಣವನ್ನು ಬಗೆಹರಿಸಿ 545 ಜನರಿಗೆ ಆದೇಶ ನೀಡಲಾಗಿದೆ. ಶೀಘ್ರದಲ್ಲಿ 402 ಹಗರಣವನ್ನು ಬಗೆಹರಿಸಲಾಗುತ್ತದೆ. ಶೀಘ್ರದಲ್ಲಿ 1,600 ಸಬ್ ಇನ್ ಸ್ಪೆಕ್ಟರ್ ಗಳನ್ನು ನೇಮಕ ಮಾಡಲಾಗುತ್ತದೆ. ಕಾನ್ ಸ್ಟೇಬಲ್ ನೇಮಕಾತಿ ಶೀಘ್ರದಲ್ಲಿ ನಡೆಯಲಿದೆ ಎಂದು ಸ್ಪರ್ಧಾಕಾಂಕ್ಷಿಗಳಿಗೆ ಸಿಹಿಸುದ್ದಿ ನೀಡಿದರು.
ಪೊಲೀಸ್ ಇಲಾಖೆ ರಾಜ್ಯದಲ್ಲಿ ಸಮರ್ಥವಾಗಿ ಕೆಲಸ ಮಾಡುತ್ತಿದೆ. ವಿರೋಧ ಪಕ್ಷದವರು ಕಾನೂನು ಸುವ್ಯವಸ್ಥೆ ಹಾಳಾಗಿದೆ ಎಂದು ಹೇಳುವುದು ಸರಿಯಲ್ಲ. ದಾಖಲೆ ಇದ್ದರೆ, ಕೊಡಿ, ತಿದ್ದಿಕೊಳ್ಳುತ್ತೇವೆ. ನಮ್ಮ ರಾಜ್ಯದಲ್ಲಿ ಯಾವುದೇ ಕಾನೂನು ಸುವ್ಯವಸ್ಥೆ ಹಾಳಾಗಿಲ್ಲ. ಪೊಲೀಸ್ ವ್ಯವಸ್ಥೆ ಸರಿಯಾಗಿದೆ. ಅಪರಾಧ ಹತ್ತಿಕ್ಕುವ ಕೆಲಸ ನಿರಂತರವಾಗಿ ಮಾಡಲಾಗುತ್ತಿದೆ. ಕೋಮುಗಲಭೆ ಆಗಿಲ್ಲ ಎಂದು ಸ್ಪಷ್ಟನೆ ನೀಡಿದ್ದಾರೆ.
ಪೊಲೀಸ್ ಗೃಹ ನಿರ್ಮಾಣ ಶುರುವಾಗಿದೆ. ಶೇ.40 ಪೊಲೀಸ್ ಸಿಬ್ಬಂದಿಗೆ ವಸತಿ ಸಿಕ್ಕಿದೆ. ಬಜೆಟ್ನಲ್ಲಿ ನೀಡಲು ಸಿಎಂ ಒಪ್ಪಿದ್ದಾರೆ. ಶೇ.100 ಪೊಲೀಸ್ ಸಿಬ್ಬಂದಿಗೆ ವಸತಿ ಸಿಗುವವರೆಗೆ ಕೆಲಸ ಮಾಡಲಾಗುತ್ತದೆ. ಕಲಬುರಗಿಯಲ್ಲಿ 28 ಗ್ರಾಮಗಳಲ್ಲಿ ಪೊಲೀಸ್ ಠಾಣೆಯೇ ಇಲ್ಲ. 300 ಅಪರಾಧಗಳು ಒಂದೇ ಕಡೆ ಇದ್ದರೆ, ಪೊಲೀಸ್ ಠಾಣೆ ನೀಡಬೇಕು ಎನ್ನುವ ನಿಯಮವಿದೆ. ಪರಿಶೀಲನೆ ಮಾಡಿ, ಎಲ್ಲೆಲ್ಲಿ ಅಗತ್ಯವಿದೆ ಅಲ್ಲಲ್ಲಿ ಪೊಲೀಸ್ ಠಾಣೆ ನೀಡಲಾಗುತ್ತದೆ ಎಂದರು.
ಡ್ಯಾಶ್ ಬೋರ್ಡ್ ಉದ್ಘಾಟನೆ ಮಾಡಿದ ಸಚಿವರು :
ಕಲಬುರಗಿ ಪೊಲೀಸ್ ಆಯುಕ್ತರ ಕಾರ್ಯಾಲಯದಲ್ಲಿ ನೂತನ ಹಾಗೂ ಆಧುನಿಕ ತಂತ್ರಜ್ಞಾನ ಅಳವಡಿಸಿರುವ ಮಾಸ್ಟರ್ ಡ್ಯಾಶ್ ಬೋರ್ಡ್ ಉದ್ಘಾಟನೆ ಮಾಡಲಾಗಿದೆ. ಕಳೆದ ನಾಲ್ಕು ಐದು ತಿಂಗಳಿಂದ ಕಲಬುರಗಿ ಪೊಲೀಸರು ಶ್ರಮವಹಿಸುತ್ತಿದ್ದಾರೆ. ಕಲ್ಯಾಣ ಕರ್ನಾಟಕ ಉತ್ಸವ, ಸಚಿವ ಸಂಪುಟ, ಗಣೇಶ ಉತ್ಸವ ಸೇರಿ ನಿರಂತರ ಕಾರ್ಯಕ್ರಮಗಳನ್ನು ಸಮರ್ಪಕ ಬಂದೋಬಸ್ತ್ ಮಾಡಲಾಗಿದೆ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಶಾಸಕರಾದ ಅಲ್ಲಮಪ್ರಭು ಪಾಟೀಲ್, ಎಂ.ವೈ.ಪಾಟೀಲ್, ನಗರ ಪೊಲೀಸ್ ಆಯುಕ್ತ ಡಾ.ಶರಣಪ್ಪ ಎಸ್.ಡಿ, ಡಿಐಜಿ ಅಜಯ್ ಹಿಲೋರಿ, ಎಸ್ಪಿ ಶ್ರೀನಿವಾಸಲು, ಡಿಸಿಪಿಗಳಾದ ಕನಿಕಾ ಸಿಕ್ರಿವಾಲ್, ಪ್ರವೀಣ್ ನಾಯಕ್ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.