ಗ್ರಾಮೀಣ ಪತ್ರಕರ್ತರಿಗೆ ಡಿಜಿಟಲ್ ಮಾಧ್ಯಮದ ಕುರಿತು ತರಬೇತಿ: ಸಚಿವ ಡಾ.ಶರಣಪ್ರಕಾಶ್ ಪಾಟೀಲ್
ʼಕಲ್ಯಾಣ ಕರ್ನಾಟಕ ಮೀಡಿಯಾ ಹಬ್ಬ-2025ʼಕ್ಕೆ ತೆರೆ

ಕಲಬುರಗಿ : ದಿನದಿಂದ ದಿನಕ್ಕೆ ತಂತ್ರಜ್ಞಾನ ಬೆಳೆಯುತ್ತಿರುವುದರಿಂದ ಗ್ರಾಮೀಣ ಪತ್ರಕರ್ತರಲ್ಲಿ ವೃತ್ತಿ ಕೌಶಲ್ಯ ಹೆಚ್ಚಿಸಲು, ಕೌಶಲ್ಯ ಇಲಾಖೆಯಿಂದ ಪೂರಕವಾಗಿ ಡಿಜಿಟಲ್ ಮಾಧ್ಯಮದ ಕೌಶಲ್ಯ ಹೆಚ್ಚಿಸುವ ತರಬೇತಿ ಕಾರ್ಯಕ್ರಮ ಆಯೋಜಿಸಲಾಗುವುದು ಎಂದು ವೈದ್ಯಕೀಯ ಶಿಕ್ಷಣ, ಕೌಶಲ್ಯಾಭಿವೃದ್ಧಿ, ಉದ್ಯಮಶೀಲತೆ ಹಾಗೂ ಜೀವನೋಪಾಯ ಖಾತೆ ಸಚಿವ ಡಾ.ಶರಣಪ್ರಕಾಶ್ ಪಾಟೀಲ್ ಭರವಸೆ ನೀಡಿದರು.
ಮಂಗಳವಾರ ಇಲ್ಲಿನ ಶರಣಬಸವೇಶ್ವರ ವಿಶ್ವ ವಿದ್ಯಾಲಯದ ಆವರಣದ ದೊಡ್ಡಪ್ಪ ಅಪ್ಪ ಸಭಾ ಮಂಟಪದಲ್ಲಿ ನಡೆದ ಕಲ್ಯಾಣ ಕರ್ನಾಟಕ ಮೀಡಿಯಾ ಹಬ್ಬ-2025 ಕಾರ್ಯಕ್ರಮದ ಸಮಾರೋಪ ಸಮಾರಂಭದಲ್ಲಿ ಭಾಗವಹಿಸಿ ಮಾತನಾಡಿದರು.
ಇದಕ್ಕೂ ಮುನ್ನ ಪತ್ರಕರ್ತರಿಗೆ ಡಿಜಿಟಲ್ ಮಾಧ್ಯಮ ನೀಡುವ ತರಬೇತಿ ಕುರಿತು ರಾಜ್ಯ ಮಾಧ್ಯಮ ಅಕಾಡೆಮಿ ಅಧ್ಯಕ್ಷ ಆಯೇಶಾ ಖಾನಂ ಅವರು ಮನವಿ ಪತ್ರ ಸಲ್ಲಿಸಿರುವುದನ್ನು ಉಲ್ಲೇಖಿಸಿ ಆಶ್ವಾಸನೆ ನೀಡಿದ ಅವರು, ಕೌಶಲ್ಯಾಭಿವೃದ್ಧಿ ಇಲಾಖೆಯ ಸರಕಾರದ ಪ್ರಧಾನ ಕಾರ್ಯದರ್ಶಿಗಳೊಂದಿಗೆ ದೂರವಾಣಿಯಲ್ಲಿ ಮಾತನಾಡಿ ಮುಂದಿನ ಆಯವ್ಯಯದಲ್ಲಿ ಘೋಷಣೆಗೆ ಕೂಡಲೆ ಪ್ರಸ್ತಾವನೆ ಸಲ್ಲಿಸುವಂತೆ ಸೂಚಿಸಿದ್ದೇನೆ. ಸಿ.ಎಂ ಅವರನ್ನು ಕಂಡು ಇದನ್ನು ಬಜೆಟ್ನಲ್ಲಿ ಸೇರಿಸಲು ಪ್ರಮಾಣಿಕ ಪ್ರಯತ್ನ ಸಹ ಮಾಡಲಾಗುವುದು ಎಂದರು.
ಕೃತಕ ಬುದ್ದಿಮತ್ತೇ ಪತ್ರಿಕೋದ್ಯಮ ವಿದ್ಯಾರ್ಥಿಗಳಿಗೆ ದೊಡ್ಡ ಸವಾಲಾಗಿದ್ದು, ಇದನ್ನು ಸಮರ್ಥವಾಗಿ ಎದುರಿಸುವ ಅನಿವಾರ್ಯತೆ ಸಹ ನಮ್ಮ ಮುಂದಿದೆ ಎಂದರು.
ಮೈಸೂರನಲ್ಲಿಯೂ ಮೀಡಿಯಾ ಹಬ್ಬ ಆಯೋಜನೆ :
ಕರ್ನಾಟಕ ಮಾಧ್ಯಮ ಅಕಾಡೆಮಿ ಅಧ್ಯಕ್ಷೆ ಆಯೇಷಾ ಖಾನಂ ಅವರು ಮಾತನಾಡಿ, ಮೀಡಿಯಾ ಹಬ್ಬ ಮಾಧ್ಯಮ ಹಾಗೂ ಪತ್ರಿಕೋದ್ಯಮ ವಿದ್ಯಾರ್ಥಿಗಳ ನಡುವಿನ ಸೇತುವೆಯಾಗಿ ಕಾರ್ಯನಿರ್ವಹಿಸಿದೆ. ಮಾಧ್ಯಮ ಅಕಾಡೆಮಿ ಈ ತರಹದ ಕಾರ್ಯಕ್ರಮಗಳನ್ನು ಪತ್ರಿಕೋದ್ಯಮ ವಿದ್ಯಾರ್ಥಿಗಳಿಗಾಗಿ ಹಮ್ಮಿಕೊಳ್ಳುವ ಮೂಲಕ ವಿದ್ಯಾರ್ಥಿಗಳನ್ನು ಉತ್ತಮ ಪತ್ರಕರ್ತರಾಗಿ ಹೊರಹೊಮ್ಮಲ್ಲು ಪ್ರಯತ್ನಿಸುತ್ತಿದೆ ಎಂದ ಅವರು, ಇದೇ ಫೆ.24 ಹಾಗೂ 25 ರಂದು ಮೈಸೂರು ವಿವಿಯಲ್ಲಿಯೂ ಸಹ ಮಾಧ್ಯಮ ಹಬ್ಬ ಹಮ್ಮಿಕೊಳ್ಳಲಾಗಿದೆ ಎಂದು ತಿಳಿಸಿದರು.
ಶರಣಬಸವೇಶ್ವರ ವಿಶ್ವವಿದಾಲಯದ ಆವರಣದಲ್ಲಿ ನಡೆದ ಎರಡು ದಿನಗಳ ಕಲ್ಯಾಣ ಕರ್ನಾಟಕ ಮೀಡಿಯಾ ಹಬ್ಬಕ್ಕೆ ಮಂಗಳವಾರ ತೆರೆ ಬಿದ್ದಿದ್ದು, ವಿವಿಧ ಸ್ಪರ್ಧೇಗಳಲ್ಲಿ ಉತ್ತಮ ಸಾಧನೆ ತೋರುವ ಮೂಲಕ ಆತಿಥ್ಯ ವಹಿಸಿದ ಕಲಬುರಗಿಯ ಶರಣಬಸವೇಶ್ವರ ವಿಶ್ವವಿದ್ಯಾಲಯ ಸಮಗ್ರ ವೀರಾಗ್ರಣಿ ಪ್ರಶಸ್ತಿ ಬಾಚಿಕೊಂಡಿದೆ.
ಕಲಬುರಗಿ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಮಜಹರ್ ಆಲಂ ಖಾನ್ ಅವರು ವಿಜೇತರಿಗೆ ಪ್ರಶಸ್ತಿ ವಿತರಿಸಿದರು. ವಿಜಯಪುರದ ಅಕ್ಕಮಹಾದೇವಿ ರಾಜ್ಯ ಮಹಿಳಾ ವಿಶ್ವವಿದ್ಯಾಲಯವು ರನ್ನರ್ ಅಪ್ ಪ್ರಶಸ್ತಿಗೆ ಪಾತ್ರವಾಯಿತು. ಉಳಿದಂತೆ ವೈಯಕ್ತಿಕ ಮತ್ತು ಗುಂಪು ವಿಭಾಗದ ವಿವಿಧ 10 ಸ್ಪರ್ಧೆಗಳಲ್ಲಿ ವಿಜೇತರಾದ ವಿದ್ಯಾರ್ಥಿ ಮತ್ತು ತಂಡಗಳಿಗೂ ಸ್ಮರಣಿಕೆ, ಪ್ರಮಾಣ ಪತ್ರ ಪ್ರದಾನ ಮಾಡಲಾಯಿತು.
ಸ್ಫರ್ಧಾ ವಿಜೇತರು :
ನೇರ ಪತ್ರಿಕಾಗೋಷ್ಠಿ ಸ್ಪರ್ಧೇಯಲ್ಲಿ ವೀರೇಶಕುಮಾರ ಸಾಲಿಮಠ, ಅನೀಲ ಶಿಂಧೆ ಹಾಗೂ ಬಸವರಾಜ ಕ್ರಮವಾಗಿ ಪ್ರಥಮ, ದ್ವಿತೀಯ ಹಾಗೂ ತೃತೀಯ ಸ್ಥಾನ ಪಡೆದಿದ್ದಾರೆ. ಅದೇ ರೀತಿ ಪಿ.ಟಿ.ಸಿ ಮತ್ತು ವಾಕ್ ಥ್ರೂ ಸ್ಪರ್ಧೇಯಲ್ಲಿ ಜ್ಯೋತಿ, ಯಶಸ್ರಿ ಹಾಗೂ ಈರಣ್ಣಾ, ರೇಡಿಯೋ ಜಾಕಿ ವಿಭಾಗದಲ್ಲಿ ಕಿರಣ, ಸಯಿದಾ ಮಾರಿಯಾ ಹಾಗೂ ವಿಶ್ವನಾಥ ಹಿರೇಮಠ, ಹೆಡ್ಲೈನ್ ರೈಟಿಂಗ್ ಸ್ಫರ್ಧೆಯಲ್ಲಿ ವೀರೇಶಕುಮಾರ ಸಾಲಿಮಠ, ಚೇತನ ಹಾಗೂ ಶಿಲ್ಪಾ ಪವಾರ, ಸ್ಪಾಟ್ ಫೋಟೋಗ್ರಾಫಿಯಲ್ಲಿ ವಿಶ್ವಚೇತನ, ವಿಶ್ವ ಹಾಗೂ ಈಶ್ವರ ಪೂಜಾರಿ, ಸೋಷಿಯಲ್ ಮೀಡಿಯಾ ಕಂಟೆಂಟ್ ರೈಟಿಂಗ್ ವಿಭಾಗದಲ್ಲಿ ವಿದ್ಯಾಶ್ರೀ, ಸುಮಿತ್ ಸಿಕಿಂದರ್ ಹಾಗೂ ಪ್ರಸಾದ, ವೈಶಿಷ್ಟ್ಯ ಬರವಣಿಗೆ ವಿಭಾಗದಲ್ಲಿ ಬಸಮ್ಮ ಹೇರೂರ, ಮಹಾಂತೇಶ ಹಾಗೂ ಕಲ್ಪನಾ, ಜಾಹೀರಾತು ತಯ್ಯಾರಿಕೆ ವಿಭಾಗದಲ್ಲಿ ಈಶ್ವರ, ಮೇಘಾ ಪುಶ್ಪ ಹಾಗೂ ಮಲ್ಲಪ್ಪ ಅವರು ಕ್ರಮವಾಗಿ ಅಗ್ರ ಮೂರು ಪ್ರಶಸ್ತಿ ತಮ್ಮದಾಗಿಸಿಕೊಂಡರು. ರಸಪ್ರಶ್ನೆ ಗುಂಪು ಸ್ಫಧೇಯಲ್ಲಿ ಬಾಗಲಕೋಟೆಯ ಬಸವೇಶ್ವರ ಕಲಾ ಕಾಲೇಜು ವಿನ್ನರ್ ಆಗಿ ಹೊರಹೊಮ್ಮಿದೆ. ರಾಯಚೂರು ವಿ.ವಿ. ಹಾಗೂ ಕೊಪ್ಪಳ ವಿ.ವಿ. ಕ್ರಮವಾಗಿ ಎರಡನೇ ಮತ್ತು ಮೂರನೇ ಸ್ಥಾನಕ್ಕೆ ತೃಪ್ತಿ ಪಡಬೇಕಾಯಿತು.
ಶರಣಬಸವ ವಿಶ್ವವಿದ್ಯಾಲಯದ ಕುಲಸಚಿವ ಡಾ. ಎಸ್.ಜಿ. ಡೊಳ್ಳೆಗೌಡರ್ ಅಧ್ಯಕ್ಷತೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಕರ್ನಾಟಕ ಮಾಧ್ಯಮ ಅಕಾಡೆಮಿಯ ಕಾರ್ಯದರ್ಶಿ ಸಹನಾ ಮಾಜಿ, ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ರಾಜ್ಯ ಉಪಾಧ್ಯಕ್ಷ ಭವಾನಿ ಸಿಂಗ್, ಜಿಲ್ಲಾಧ್ಯಕ್ಷ ಬಾಬುರಾವ್ ಯಡ್ರಾಮಿ ಸೇರಿದಂತೆ ಬೊಧಕ, ಬೋಧಕೇತರ ಸಿಬ್ಬಂದಿಗಳು ಇದ್ದರು.
ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ಉಪನಿರ್ದೇಶಕ ಜಡಿಯಪ್ಪ ಗೆದ್ಲಗಟ್ಟಿ ಸ್ವಾಗತಿಸಿದರು. ಕರ್ನಾಟಕ ಮಾಧ್ಯಮ ಅಕಾಡೆಮಿ ಸದಸ್ಯೆ ಮತ್ತು ಕಾರ್ಯಕ್ರಮದ ಸಂಯೋಜಿಕಿ ರಶ್ಮಿ ಎಸ್. ನಿರೂಪಿಸಿದರು. ಶರಣಬಸವ ವಿಶ್ವವಿದ್ಯಾಲಯದ ಪತ್ರಿಕೋದ್ಯಮ ಮತ್ತು ಸಮೂಹ ಸಂವಹನ ವಿಭಾಗದ ಮುಖ್ಯಸ್ಥ ಟಿ.ವಿ.ಶಿವಾನಂದನ್ ವಂದಿಸಿದರು. ಎರಡು ದಿನಗಳ ಕಾಲ ನಡೆದ ಮೀಡಿಯಾ ಫೆಸ್ಟ್ ನಲ್ಲಿ ಕಲಬುರಗಿ ಮತ್ತು ಬೆಳಗಾವಿ ವಿಭಾಗದ ನೂರಾರು ಸಂಖ್ಯೆಯ ಪತ್ರಿಕೋದ್ಯಮ ವಿದ್ಯಾರ್ಥಿಗಳು ಭಾಗವಹಿಸಿದ್ದರು.