ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯಿಂದ "ವಾತ್ಸಲ್ಯ" ಮನೆ ಹಸ್ತಾಂತರ
ಬಡವರಿಗೆ ಸೂರು ಕಲ್ಪಿಸಿದ ಶ್ರೀ ಧರ್ಮಸ್ಥಳ ಯೋಜನಾ ಸಂಘ

ಕಲಬುರಗಿ: ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಕಮಲಾಪುರ ಯೋಜನಾ ಕಚೇರಿ ವ್ಯಾಪ್ತಿಯ ರಾಮತೀರ್ಥ ವಲಯದ ಮಾಶಾಸನ ಫಲಾನುಭವಿಗಳಿಗೆ ಜ್ಞಾನವಿಕಾಸ ಕಾರ್ಯಕ್ರಮದಡಿ ವಾತ್ಸಲ್ಯ ಮನೆ ಹಸ್ತಾಂತರಿಸಲಾಯಿತು.
ಇಲ್ಲಿನ ಕೆರೆ ಬೋಸಗ ಗ್ರಾಮದ ನಿವಾಸಿ ನಾಗಮ್ಮ ತೆಲಗಾಣಿ ಅವರಿಗೆ ಶ್ರೀಕ್ಷೇತ್ರ ಧರ್ಮಸ್ಥಳದ ಪರಮ ಪೂಜ್ಯ ಡಾ. ಡಿ.ವೀರೇಂದ್ರ ಹೆಗ್ಗಡೆ ಹಾಗೂ ಜ್ಞಾನವಿಕಾಸ ಕಾರ್ಯಕ್ರಮದ ಅಧ್ಯಕ್ಷರಾದ ಡಾ. ಹೇಮಾವತಿ ವಿ.ಹೆಗ್ಗಡೆ ಅವರ ಮಾರ್ಗದರ್ಶನದಲ್ಲಿ ಜ್ಞಾನ ವಿಕಾಸ ಕಾರ್ಯಕ್ರಮ ವಾತ್ಸಲ್ಯ ಕಾರ್ಯಕ್ರಮದಡಿ ಮನೆ ವಿತರಣೆ ಮಾಡಲಾಯಿತು.
ಇಲ್ಲಿವರೆಗೂ ತಾಲೂಕಿನ 94 ಜನ ಫಲಾನುಭವಿಗಳಿಗೆ ವಾತ್ಸಲ್ಯ ಮಿಕ್ಸ್ ವಿತರಣೆ ಹಾಗೂ ತಿಂಗಳಿಗೆ 1000 ರು.ಗಳ ಮಾಶಾಸನ ನೀಡಲಾಗಿದೆ. ಜತೆಗೆ 94 ಜನ ಫಲಾನುಭವಿಗಳಿಗೆ ಸೀರೆ, ಚಾಪೆ, ದಿಂಬು, ಹೊದಿಕೆ, ಪಾತ್ರೆಗಳ ವಾತ್ಸಲ್ಯ ಕಿಟ್ಟ ವಿತರಣೆ ಮಾಡಲಾಗಿದೆ ಎಂದು ಕಮಲಾಪುರ ತಾಲೂಕು ಕ್ಷೇತ್ರದ ಯೋಜನಾಧಿಕಾರಿ ಕಲ್ಲನಗೌಡ ಪಾಟೀಲ್ ಶಿರಕೋಳ ಪ್ರಾಸ್ತಾವಿಕವಾಗಿ ಮಾತನಾಡಿದರು.
ವಾತ್ಸಲ್ಯ ಮನೆ ಹಸ್ತಾಂತರಿಸಿದ ಕಲಬುರಗಿ ಗ್ರಾಮೀಣ ಸರ್ಕಲ್ ಇನ್ಸ್ಪೆಕ್ಟರ ಸಂತೋಷ್ ತಟ್ಟೆಪಳ್ಳಿ ಮಾತನಾಡಿ, ಶ್ರೀ ಧರ್ಮಸ್ಥಳ ಕ್ಷೇತ್ರ ಅನೇಕ ಸಾಮಾಜಿಕ ಕಾರ್ಯಕ್ರಮ ಮಾಡುತ್ತಿದೆ. ಸಮಾಜದ ಬಗ್ಗೆ ಅಪಾರ ಕಾಳಜಿ ವಹಿಸಿ ಧರ್ಮಸ್ಥಳದ ಧರ್ಮಾಧಿಕಾರಿಗಳು ಮಾಡುವ ಕಾರ್ಯ ನಮ್ಮೆಲ್ಲರಿಗೂ ಪ್ರೇರಣೆ ಮತ್ತು ಮಾದರಿಯಾಗಿದೆ. ಸೂರು ಇಲ್ಲದವರಿಗೆ ಮನೆ ನೀಡುತ್ತಿರುವುದು ಬಹಳ ಸಂತೋಷವಾಗಿದೆ. ಇಂತಹ ಕಾರ್ಯಗಳು ನಿರಂತರವಾಗಿ ಸಾಗಲಿ ಎಂದು ಶುಭ ಹಾರೈಸಿದರು.
ಕಲಬುರಗಿ ಪ್ರಾದೇಶಿಕ ಜ್ಞಾನ ವಿಕಾಸ ವಿಭಾಗದ ಯೋಜನಾಧಿಕಾ ಶಕುಂತಲಾ ಮಾತನಾಡಿ, ಮಾತೋಶ್ರೀ ಹೇಮಾವತಿ ಹೆಗ್ಗಡೆ ಅವರ ಮಾರ್ಗದರ್ಶನದಲ್ಲಿ ಅನೇಕ ಮಹಿಳೆಯರಿಗೆ ಬದುಕಿನಲ್ಲಿ ಆತ್ಮ ಸ್ಥೈರ್ಯ ತುಂಬುವ ಕೆಲಸ ಮಾಡಲಾಗುತ್ತಿದೆ. ನೊಂದ ಮಹಿಳೆಯವರಿಗೆ ಸಾಂತ್ವನ ನೀಡಲಾಗುತ್ತಿದೆ. ವಾತ್ಸಲ್ಯ ಮನೆ ನಿರ್ಮಿಸಿ ನಾಗಮ್ಮ ಇವರಿಗೆ ಮನೆ ಹಸ್ತಾಂತರ ಮಾಡುತ್ತಿದ್ದು ಇದರ ಸಧ್ಬಳಕೆ ಮಾಡಿಕೊಳ್ಳುವಂತೆ ತಿಳಿಸಿದರು.
ಈ ಸಂದರ್ಭದಲ್ಲಿ ಜಿಲ್ಲಾ ಜನಜಾಗೃತಿ ವೇದಿಕೆಯ ಉಪಾಧ್ಯಕ್ಷ ಅನಿಲ ಕುಮಾರ ಡಾಂಗೆ, ಸ್ಥಳೀಯ ರವಿ ನಿಲೂರ, ವಲಯದ ಮೇಲ್ವಿಚಾರಕ ರಾಘವೇಂದ್ರ, ಜ್ಞಾನವಿಕಾಸ ಸಮನ್ವಯಾಧಿಕಾರಿ ಗೀತಾಂಜಲಿ, ಒಕ್ಕೂಟದ ಅಧ್ಯಕ್ಷರು ಮತ್ತು ಪದಾಧಿಕಾರಿಗಳು, ಗುಂಪಿನ ಸದಸ್ಯರು ಇದ್ದರು.
ಸೂರು ಇಲ್ಲದವರಿಗೆ ಸೂರು ಕಲ್ಪಿಸುವ ನಿಟ್ಟಿನಲ್ಲಿ ವಾತ್ಸಲ್ಯ ಮನೆ ನಿರ್ಮಿಸಿ, ಬಡವರಿಗೆ ನೀಡಲಾಗುತ್ತಿದೆ. ಬದವರು ಹಾಗೂ ಮನೆ ಇಲ್ಲದವರಿಗೆ ತಮ್ಮ ಜೀವಿತ ಅವಧಿಯಲ್ಲಿ ಸುಖ ಜೀವನ ನಡೆಸಬೇಕು. ಎಲ್ಲರಂತೆ ಸ್ವಂತ ಮನೆಯಲ್ಲಿ ಜೀವನ ಸಾಗಿಸಬೇಕು ಎಂದು ಮಾತೋಶ್ರೀ ಡಾ. ಹೇಮಾವತಿ ಹೆಗ್ಗಡೆ ಅವರ ಆಶಯದಂತೆ ವಾತ್ಸಲ್ಯ ಮನೆ ಕೊಡಲಾಗುತ್ತಿದೆ.
- ಕಲ್ಲನಗೌಡ ಪಾಟೀಲ್ ಶಿರಕೋಳ, ಯೋಜನಾಧಿಕಾರಿ, ಕಮಲಾಪುರ ತಾಲೂಕು ಕ್ಷೇತ್ರ