ರೈತರ ಜಮೀನುಗಳಿಗೆ ಭೇಟಿ ನೀಡಿ ಸಮೀಕ್ಷೆ ನಡೆಸಿ : ಶಾಸಕ ಬಿ.ಆರ್.ಪಾಟೀಲ್
ಕಲಬುರಗಿ : ತೊಗರಿ ಬೆಳೆ ಒಣಗುತ್ತಿರುವುದರಿಂದ ಎದುರಾಗಿರುವ ದೊಡ್ಡ ಪ್ರಮಾಣದ ಬೆಳೆಹಾನಿ ಕುರಿತಾಗಿ ರೈತರ ಹೊಲಗಳಲ್ಲಿ ಕಂದಾಯ ಮತ್ತು ಕೃಷಿ ಇಲಾಖೆಯ ಜಂಟಿ ಸಮೀಕ್ಷೆ ನಡೆಸಿ ಸಮಗ್ರ ವರದಿ ನೀಡುವಂತೆ ಸರಕಾರದ ಮುಖ್ಯಮಂತ್ರಿಗಳ ಸಲಹೆಗಾರ ಹಾಗೂ ಶಾಸಕ ಬಿ.ಆರ್ ಪಾಟೀಲ್ ಅವರು ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.
ಆಳಂದ ಪಟ್ಟಣದ ತಾಪಂ ಸಭಾಂಗಣದಲ್ಲಿ 2024-25ನೇ ಸಾಲಿನ ಮುಂಗಾರು ಹಂಗಾಮಿನ ಬೆಳೆ ವಿಮೆ ಪ್ರಗತಿ ಪರಿಶೀಲನೆ ಸಭೆಯಲ್ಲಿ ಬೆಳೆ ಹಾನಿ ಸಮೀಕ್ಷೆ ಬೆಳೆ ವಿಮೆ ಕುರಿತು ಅವರು ಮಾತನಾಡಿದರು.
ತಾಲ್ಲೂಕಿನಲ್ಲಿ 63,335 ರೈತರು ಬೆಳೆವಿಮೆ ಮಾಡಿಸಿಕೊಂಡಿದ್ದು, ಇದಕ್ಕೆ 24 ಕೋಟಿ ರೂ. ಪರಿಹಾರ ಮಂಜೂರಾಗಿದೆ. ಈ ನಡುವೆ 22.38 ಕೋಟಿ ರೂ. ಪರಿಹಾರವನ್ನು ಬಿಡುಗಡೆ ಮಾಡಲಾಗಿದೆ. ತೊಗರಿ ಬೆಳೆ ಒಣಗಿರುವ ಬಗ್ಗೆ ಕೃಷಿ ವಿಶ್ವವಿದ್ಯಾಲಯದ ವಿಜ್ಞಾನಿಗಳು ವರದಿ ನೀಡಿದ ನಂತರ ಬೆಳೆ ಹಾನಿಯ ಸಮೀಕ್ಷೆಯ ಅಂಕಿಅಂಶಗಳನ್ನು ಶೀಘ್ರ ನೀಡಬೇಕು ಎಂದರು.
ಕಚೇರಿಯಲ್ಲಿಯೇ ಕುಳಿತು ಪರಿಶೀಲನೆ ನಡೆಸದೆ, ಹಾನಿಯಾದ ಹೋಲಗಳಿಗೆ ಭೇಟಿ ನೀಡಿ ಸಮೀಕ್ಷೆ ನಡೆಸುವುದು ಕಡ್ಡಾಯವಾಗಬೇಕೆಂದು ಶಾಸಕ ಪಾಟೀಲ ಅಧಿಕಾರಿಗಳಿಗೆ ಸೂಚಿಸಿದರು.
ಸಹಾಯಕ ಕೃಷಿ ನಿರ್ದೇಶಕ ಶರಣಗೌಡ ಪಾಟೀಲ ಅವರು ಮಾತನಾಡಿ, ತೊಗರಿ ಹಾನಿಯಾದ ಕುರಿತು ಸರ್ವೆ ಆರಂಭಿಸಲಾಗಿದ್ದು, ಸರ್ವೆ ಬಳಿಕ ಹಾನಿಯಾದ ಅಂಕಿಅoಶಗಳನ್ನು ಕ್ರೋಢಿಕರಿಸಿ ವರದಿ ಸಲ್ಲಿಸಲಾಗುವುದು. ಈ ಕುರಿತು ಬೆಳೆ ವಿಮೆ ಕೈಗೊಂಡವರಿಗೆ ಪರಿಹಾರಕ್ಕೆ ಕ್ರಮ ಕೈಗೊಳ್ಳಲಾಗುತ್ತಿದೆ ಎಂದು ಹೇಳಿದರು.
ಸಭೆಯಲ್ಲಿ ಹಾಜರಿದ್ದ ತಹಶೀಲ್ದಾರ್ ಅಣ್ಣಾರಾವ ಪಾಟೀಲ ಅವರು, ಹಿಂದಿನ ಬೆಳೆ ಹಾನಿಗೆ ಸಂಬoಧಿಸಿದ ಪರಿಹಾರವನ್ನು ರೈತರ ಖಾತೆಗಳಿಗೆ ಜಮಾ ಮಾಡಲಾಗಿದೆ ಎಂದು ಮಾಹಿತಿ ನೀಡಿದರು.
ಈ ಸಂದರ್ಭದಲ್ಲಿ ತಾಪಂ ಇಓ ಮಾನಪ್ಪ ಕಟ್ಟಿಮನಿ, ತೋಟಗಾರಿಕೆ ಹಿರಿಯ ನಿರ್ದೇಶಕ ಸುರೇಂದ್ರನಾಥ ಹೊನ್ನಪ್ಪಗೋಳ, ಶಿವಕುಮಾರ, ಸುನೀಲ್ ಕುಮಾರ ಮತ್ತು ಚಂದ್ರಕಾoತ ಸೇರಿದಂತೆ ಕಂದಾಯ, ಕೃಷಿ ಇಲಾಖೆಯ ಸರ್ವೆ ಸಿಬ್ಬಂದಿಗಳು ಸಭೆಯಲ್ಲಿ ಉಪಸ್ಥಿತರಿದ್ದರು.