ಫೆ.8ರಂದು ಒಂದು ದಿನದ ದೃಶ್ಯಕಲಾ ಸಾಹಿತ್ಯ ಸಮ್ಮೇಳನ: ತೇಗಲತಿಪ್ಪಿ

ಕಲಬುರಗಿ: ಜಿಲ್ಲೆಯಲ್ಲಿ ಚಿತ್ರಕಲಾವಿದರ ಸಂಖ್ಯೆ ಹೆಚ್ಚಿದೆ. ಅವರಿಗೆ ಪ್ರೋತ್ಸಾಹ ನೀಡುವ ಉದ್ದೇಶದಿಂದ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಫೆಬ್ರವರಿ 8 ರಂದು ನಗರದ ಕನ್ನಡ ಭವನದಲ್ಲಿ ಒಂದು ದಿನದ ದೃಶ್ಯಕಲಾ ಸಾಹಿತ್ಯ ಸಮ್ಮೇಳನವನ್ನು ನಡೆಸಲು ಪರಿಷತ್ತು ನಿರ್ಧರಿಸಲಾಗಿದೆ ಎಂದು ಜಿಲ್ಲಾ ಕಸಾಪ ಅಧ್ಯಕ್ಷ ವಿಜಯಕುಮಾರ ಪಾಟೀಲ ತೇಗಲತಿಪ್ಪಿ ಹೇಳಿದರು.
ನಗರದ ಕನ್ನಡ ಭವನದಲ್ಲಿ ಕವಿ-ಸಾಹಿತಿಗಳು, ಕಲಾವಿದರ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿ, ಪರಿಷತ್ತು ಹೊಸ ಆಲೋಚನೆಗಳಿಂದ ಕೂಡಿದ ಸಮ್ಮೇಳನಗಳು ಏರ್ಪಡಿಸುವ ಮೂಲಕ ಎಲ್ಲಾ ವರ್ಗದ ಕವಿ-ಕಲಾವಿದರಿಗೆ ಪ್ರೋತ್ಸಾಹ ಕೊಡಲಾಗುತ್ತಿದೆ. ಕಲೆ ಮತ್ತು ಸಾಹಿತ್ಯ ಇವೆರಡು ಒಂದು ನಾಣ್ಯದ ಎರಡು ಮುಖಗಳಿದ್ದಂತೆ. ಅಂತಾರಾಷ್ಟ್ರೀಯ ಖ್ಯಾತಿಯ ಅನೇಕ ಚಿತ್ರಕಲಾವಿದರು ಈ ನೆಲದಲ್ಲಿ ಜನಿಸಿ ಸಾಧನೆ ಮಾಡಿದ್ದಾರೆ. ಒಂದು ಚಿತ್ರದಿಂದ ಸಾಹಿತ್ಯದ ಪರಿಲ್ಪನೆಯನ್ನು ಕಟ್ಟಿ ಕೊಡಬಹುದು. ಪ್ರಕೃತಿಯ ಮಡಿಲಲ್ಲಿನ ಅದ್ಭುತ ಕಲ್ಪನೆಯನ್ನು ಅಕ್ಷರಗಳಿಂದ ಪೋಣಿಸಿ ಸಾಹಿತ್ಯ ನಿರೂಪಿಸಬಹುದಾಗಿದೆ.
ಅಂಥ ಪ್ರತಿಭಾವಂತ ಕಲಾವಿದರು ತಮ್ಮ ಚಿತ್ರಗಳ ಮೂಲಕ ಸಾಹಿತ್ಯಕ್ಕೆ ವಿಶೇಷ ಕೊಡುಗೆ ನೀಡುತ್ತಿದ್ದಾರೆ. ಈ ಹಿನ್ನೆಲೆಯಾಗಿ ಜಿಲ್ಲಾ ಕನ್ನಡ ಸಾಹಿತ್ಯ ಸಾಹಿತ್ಯ ಪರಿಷತ್ತಿನ ವತಿಯಿಂದ ಒಂದು ದಿನದ ದೃಶ್ಯಕಲಾ ಸಾಹಿತ್ಯ ಸಮ್ಮೇಳನವನ್ನು ಆಯೋಜಿಸಲು ಸಭೆಯಲ್ಲಿ ನಿರ್ಧಾರ ತೆಗೆದುಕೊಳ್ಳಲಾಗಿದೆ ಎಂದರು.
ಇಂಥ ವಿನೂತನ ಸಾಹಿತ್ಯ ಸಮ್ಮೇಳನ ಪ್ರಪ್ರಥಮ ಬಾರಿಗೆ ಕನ್ನಡ ಸಾಹಿತ್ಯ ಪರಿಷತ್ತಿನ ಆಶ್ರಯದಲ್ಲಿ ನಡೆಸಲು ಉದ್ದೇಶಿಸಲಾಗಿದೆ. ಚಿತ್ರಕಲೆ, ದೃಶ್ಯಕಲೆ ಅಭಿವ್ಯಕ್ತತೆಯ ಮಾಧ್ಯಮವೇ ಸಾಹಿತ್ಯವಾಗಿದೆ. ಇಂತ ಹತ್ತಾರು ವಿಚಾರಗಳ ಕುರಿತು ಚರ್ಚೆ, ಸಂವಾದಗಳ ಮೂಲಕ ಒಂದಿಷ್ಟು ಬೆಳಕು ಚೆಲ್ಲಲು ಮತ್ತು ಜಿಲ್ಲೆಯ ಎಲ್ಲಾ ಚಿತ್ರಕಲಾವಿದರನ್ನು ಒಂದೆಡೆ ಸೇರಿಸಲು ವೇದಿಕೆ ಉಪಯುಕ್ತವಾಗಿದೆ ಎಂದು ಹೇಳಿದರು.
ಮುಂದಿನ ದಿನಗಳಲ್ಲಿ ಸಮ್ಮೇಳನದ ಸರ್ವಾಧ್ಯಕ್ಷರ ಆಯ್ಕೆ, ಕಾರ್ಯಕ್ರಮಗಳ ಕಾರ್ಯಯೋಜನೆ ರೂಪಿಸಲು ವಿವಿಧ ಸಮಿತಿಗಳನ್ನು ರಚಿಸಲಾಗುತ್ತಿದೆ. ಇಂಥ ವಿಶೇಷ ಸಮ್ಮೇಳನಗಳ ಆಯೋಜನೆಯಿಂದ ಪರಿಷತ್ತಿನ ಗೌರವ ಹೆಚ್ಚಿದಂತಾಗುತ್ತಿದೆ ಎಂದು ಅವರು ಅಭಿಪ್ರಾಯ ವ್ಯಕ್ತಪಡಿಸಿದರು.
ಈ ಸಂದರ್ಭದಲ್ಲಿ ಜಿಲ್ಲಾ ಕಸಾಪ ಗೌರವ ಕಾರ್ಯದರ್ಶಿ ಶಿವರಾಜ ಅಂಡಗಿ, ಸಂಚಾಲಕ ಡಾ.ರೆಹಮಾನ್ ಪಟೇಲ್, ರಾಜೇಂದ್ರ ಮಾಡಬೂಳ, ವಿನೋದಕುಮಾರ ಜೇನವೇರಿ, ಪ್ರಭುಲಿಂಗ ಮೂಲಗೆ, ಸಂತೋಷ ಕುಡಳ್ಳಿ, ಸೋಮಶೇಖರಯ್ಯ ಹೊಸಮಠ, ಹಿರಿಯ ಚಿತ್ರಕಲಾವಿದರಾದ ಡಾ. ಎ.ಎಸ್. ಪಾಟೀಲ, ಡಾ. ಎಸ್ ಎಂ ನೀಲಾ, ರಾಜಶೇಖರ ಶ್ಯಾಮಣ್ಣ, ಮಹ್ಮದ್ ಅಯಾಜೋದ್ದೀನ್ ಪಟೇಲ್, ಡಾ. ಶಾಹೇದ ಪಾಷಾ, ಮಂಜುಳಾ ಬಸವರಾಜ ಜಾನೆ, ಬಸವರಾಜ ಉಪ್ಪಿನ್ ಸೇರಿದಂತೆ ಅನೇಕ ಕವಿ-ಕಲಾವಿದರು ಭಾಗವಹಿಸಿದ್ದರು.