ಮಲ್ಪೆ ಸಮುದ್ರ ತೀರದಲ್ಲಿ ಪಾಚಿ ತ್ಯಾಜ್ಯಗಳ ರಾಶಿ
ಬಿಪರ್‌ಜಾಯ್ ಚಂಡಮಾರುತದ ಪರಿಣಾಮ
ಮಲ್ಪೆ: ಬಿಪರ್‌ಜಾಯ್ ಚಂಡಮಾರುತದಿಂದ ಪರಿಣಾಮವಾಗಿ ಕಡಲು ಪ್ರಕ್ಷುಬ್ದಗೊಂಡು ಭಾರೀ ಗಾತ್ರದ ಅಲೆಗಳು ತೀರಕ್ಕೆ ಅಪ್ಪಳಿಸುತ್ತಿವೆ. ಇದರೊಂದಿಗೆ ಅಪರೂಪದ ಬಿಳಿ ಬಣ್ಣದ ಪಾಚಿಯಂತಹ ವಸ್ತುಗಳು ತೀರಕ್ಕೆ ತೇಲಿ ಬಂದು ರಾಶಿ ಬಿದ್ದಿವೆ.
ಗಾಳಿ ಮರದ ಎಲೆಯ ರೀತಿಯಲ್ಲಿ ಕಂಡುಬಂದಿರುವ ಈ ಪಾಚಿಯು ಅಗಾಧ ಪ್ರಮಾಣದಲ್ಲಿದ್ದು, ಸಾಕಷ್ಟು ಕುತೂಹಲಕ್ಕೆ ಕಾರಣವಾಗಿದೆ. ಇದನ್ನು ಸ್ಥಳೀಯವಾಗಿ ಗಂಗಾದೇವಿಯ ಕೂದಲು ಎಂದು ಕರೆಯಲಾಗುತ್ತದೆ. 10 ವರ್ಷಗಳ ಹಿಂದೆ ಇದೇ ರೀತಿಯ ಪಾಚಿಯಂತಹ ವಸ್ತುಗಳು ತೀರದಲ್ಲಿ ರಾಶಿ ಬಿದ್ದಿತ್ತು. ಆದರೆ ಈ ಬಾರಿ ಹಿಂದೆಗಿಂತ ಹೆಚ್ಚಿನ ಪ್ರಮಾಣದಲ್ಲಿ ಬಂದು ಬಿದ್ದಿವೆ ಎಂದು ಸ್ಥಳೀಯ ಮೀನುಗಾರರು ತಿಳಿಸಿದ್ದಾರೆ.
ಇದರೊಂದಿಗೆ ಸಮುದ್ರದ ಒಡಲು ಸೇರಿದ್ದ ಕಸಕಡ್ಡಿಗಳು, ಪ್ಲಾಸ್ಟಿಕ್ ತ್ಯಾಜ್ಯ ಗಳು, ಬಲೆ, ವಾಹನ ಟಯರ್ ಅಧಿಕ ಪ್ರಮಾಣದಲ್ಲಿ ದಡ ಸೇರಿದೆ. ಇದೀಗ ಈ ವಿಚಾರ ಮಂಗಳೂರು ಮೀನುಗಾರಿಕಾ ಮಹಾವಿದ್ಯಾಲಯದ ಪ್ರಾಧ್ಯಾಪಕರ ಗಮನಕ್ಕೆ ಬಂದಿದ್ದು, ಜೂ.21ರಂದು ಮಲ್ಪೆಗೆ ಆಗಮಿಸಿ ಇದರ ಮಾದರಿಯನ್ನು ಸಂಗ್ರಹಿಸಿ ಹೆಚ್ಚಿನ ಸಂಶೋಧನೆ ಮಾಡುವ ಸಾಧ್ಯತೆ ಇದೆ ಎಂದು ತಿಳಿದು ಬಂದಿದೆ.