ಅನಾಥ ಮಕ್ಕಳಿಗೆ ಮೀಸಲಾತಿ ನೀಡಲು ಸರಕಾರ ಒಪ್ಪಿಗೆ: ಜೆ.ಪಿ.ಹೆಗ್ಡೆ
ರಾಜ್ಯ ಹಿಂದುಳಿದ ವರ್ಗಗಳ ಆಯೋಗದ ಸಭೆ
ಉಡುಪಿ, ಜೂ.20: ತಂದೆ-ತಾಯಂದಿರಿಲ್ಲದ ಅನಾಥ ಮಕ್ಕಳಿಗೂ ಶೇ.1ರಷ್ಟು ಮೀಸಲಾತಿ ಒದಗಿಸುವ ಆಯೋಗದ ಶಿಫಾರಸ್ಸನ್ನು ಹಿಂದಿನ ಸರಕಾರ ಒಪ್ಪಿಕೊಂಡಿದ್ದು, ಅದನ್ನು ಅನುಷ್ಠಾನಗೊಳಿಸಲು ಸರಕಾರ ಮುಂದಾಗಿದೆ ಎಂದು ಕರ್ನಾಟಕ ರಾಜ್ಯ ಹಿಂದುಳಿದ ವರ್ಗಗಳ ಆಯೋಗದ ಅಧ್ಯಕ್ಷ ಕೆ.ಜಯಪ್ರಕಾಶ್ ಹೆಗ್ಡೆ ತಿಳಿಸಿದ್ದಾರೆ.
ಮಣಿಪಾಲದಲ್ಲಿರುವ ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ಇಂದು ನಡೆದ ಆಯೋಗದ ಸಭೆಯಲ್ಲಿ ಉಡುಪಿ ಜಿಲ್ಲೆ ಯಲ್ಲಿ ಹಿಂದುಳಿದ ಜಾತಿ ಮತ್ತು ಸಮುದಾಯದ ಪ್ರಗತಿ ಪರಿಶೀಲನೆ, ಸಮಸ್ಯೆಗಳ ಕುರಿತು ಚರ್ಚೆ ನಡೆಸಿದ ಬಳಿಕ ಕರೆದ ಸುದ್ದಿಗೋಷ್ಠಿಯಲ್ಲಿ ಅವರು ಮಾತನಾಡುತಿದ್ದರು.
ನನ್ನ ನೇತೃತ್ವದ ಆಯೋಗ ಇದುವರೆಗೆ ಒಟ್ಟು 34 ವರದಿಗಳನ್ನು ಸರಕಾರಕ್ಕೆ ನೀಡಿದೆ. ಇವುಗಳಲ್ಲಿ ಅನಾಥ ಮಕ್ಕಳಿಗೆ ಮೀಸಲಾತಿ ಕಲ್ಪಿಸುವ ವರದಿ ಪ್ರಮುಖವಾಗಿತ್ತು. ಬಾಲ್ಯದಲ್ಲೇ ತಂದೆ-ತಾಯಿ ಇಬ್ಬರನ್ನು ಕಳೆದು ಕೊಂಡ ಅನಾಥ ಮಕ್ಕಳನ್ನು ಅತೀ ಹಿಂದುಳಿದ ವರ್ಗವೆಂದು ಪರಿಗಣಿಸಿ ಶೇ.1ರಷ್ಟು ಮೀಸಲಾತಿ ಒದಗಿಸಬೇಕು.
ತಂದೆ-ತಾಯಿ ಯಾರೆಂದು ತಿಳಿದು ಅವರ ಜಾತಿ ಗೊತ್ತಿದ್ದರೆ, ಅಂಥ ಅನಾಥ ಮಕ್ಕಳಿಗೆ ಅವರ ಜಾತಿಯಲ್ಲೇ ಶೇ.1 ಮೀಸಲಾತಿ ಒದಗಿಸಬೇಕೆಂದು ಆಯೋಗದ ವರದಿಯಲ್ಲಿ ತಿಳಿಸಲಾಗಿದೆ. ಇದರಲ್ಲಿ ಯಾವುದೇ ಬ್ಯಾಕ್ ಲಾಗ್ ಇಡಬಾರದು. ಸಾಕಷ್ಟು ಮಕ್ಕಳ ಸಿಗದಿದ್ದರೆ, ಇತರೆ ಜಾತಿಯವರಿಗೆ ನೀಡಬೇಕು ಎಂದು ವರದಿಯಲ್ಲಿ ಶಿಫಾರಸ್ಸು ಮಾಡಿದ್ದೇವೆ ಎಂದರು.
ಕೇಂದ್ರ ಸರಕಾರದ 2015ರ ಗಝೆಟ್ ನೋಟಿಫಿಕೇಷನ್‌ನಂತೆ ಬೋವಿ ಜನಾಂಗ ಪರಿಶಿಷ್ಟ ಜಾತಿ ಪಟ್ಟಿಯಲ್ಲಿದೆ. ಆದರೆ ಬೋವಿ ಜನಾಂಗದ ಕಲ್ಲು ವಡ್ಡರು ಹಾಗೂ ಮಣ್ಣು ವಡ್ಡರು ಕರ್ನಾಟಕದಲ್ಲಿ ಹಿಂದುಳಿದ ವರ್ಗಗಳ ಪಟ್ಟಿಯಲ್ಲಿದ್ದು, ಇವರಿಗೆ ಜಾತಿ ಪ್ರಮಾಣ ಪತ್ರ ನೀಡುವಲ್ಲಿ ಉಂಟಾಗಿರುವ ಗೊಂದಲ ಸರಿಪಡಿಸುವ ನಿಟ್ಟಿನಲ್ಲಿ ಚರ್ಚೆ ನಡೆಸಿ, ಈ ಪಂಗಡವನ್ನು ಹಿಂದುಳಿದ ವರ್ಗಗಳ ಪಟ್ಟಿಯಿಂದ ಕೈಬಿಟ್ಟು ಪರಿಶಿಷ್ಟ ಜಾತಿ ಪಟ್ಟಿಗೆ ಸೇರಿಸಲು ರಾಜ್ಯ ಸರಕಾರಕ್ಕೆ ಶಿಫಾರಸ್ಸು ಮಾಡಿದ್ದೇವೆ ಎಂದು ಜಯಪ್ರಕಾಶ್ ಹೆಗ್ಡೆ ವಿವರಿಸಿದರು.
ವಿವಿಧ ಜಾತಿಗಳ ಜನರಿಗೆ ಜಾತಿ ಪ್ರಮಾಣ ಪತ್ರ ನೀಡುವ ನಿಟ್ಟಿನಲ್ಲಿ ಉಂಟಾಗಿರುವ ಗೊಂದಲಗಳನ್ನು ಸರಿಪಡಿ ಸುವ ಬಗ್ಗೆ ಸಂಬಂಧಿತ ಅಧಿಕಾರಿಗಳಿಗೆ ಸೂಚನೆಗಳನ್ನು ನೀಡಲಾಗಿದೆ. ಅದೇ ರೀತಿ ಸಿಆರ್ ಸೆಲ್ ಅಧಿಕಾರಿ ಗಳಿಗೂ ಅಗತ್ಯ ನಿರ್ದೇಶನ ನೀಡಲಾಗಿದೆ. ಈ ಬಗ್ಗೆ ಯಾವುದೇ ಸಮಸ್ಯೆ ಕಂಡುಬಂದರೂ ಅವುಗಳ ಇತ್ಯರ್ಥ ಅಂತಿಮವಾಗಿ ಜಿಲ್ಲಾ ಸಮಿತಿ ಯಲ್ಲೇ ಮಾಡುವಂತೆ ತಿಳಿಸಲಾಗಿದೆ ಎಂದರು.
ಉತ್ತರ ಕನ್ನಡ ಜಿಲ್ಲೆಯಲ್ಲಿ ಹೆಚ್ಚಿನ ಸಂಖ್ಯೆಯಲ್ಲಿರುವ ಮೊಗೇರ ಜಾತಿಯ ಹೆಸರು ಪರಿಶಿಷ್ಟ ಜಾತಿ/ ಪ್ರವರ್ಗ-1ರಲ್ಲಿ ಇದ್ದು ಗೊಂದಲ ಉಂಟಾಗಿದೆ. ಇದರ ಬಗ್ಗೆ ಅಧಿಕಾರಿಗಳಿಂದ ವಿವರವಾದ ಮಾಹಿತಿ ಪಡೆಯುತ್ತಿದ್ದೇವೆ. ಹಿಂದುಳಿದ ವರ್ಗಗಳ ಜಾತಿ ಪಟ್ಟಿಯಿಂದ ಮೊಗೇರ ಜಾತಿಯನ್ನು ಕೈಬಿಡಲು ಬೇಡಿಕೆ ಬಂದಿದೆ. ಅದರಂತೆ ಉ.ಕ.ದಲ್ಲಿ ಪ್ರತಿಭಟನೆಯನ್ನು ಮಾಡುತ್ತಿದ್ದಾರೆ. ನಾಳೆ ಅಲ್ಲಿಗೂ ತೆರಳಿ ಪ್ರತಿಭಟನೆ ನಡೆಸುತ್ತಿರುವವರನ್ನು ಭೇಟಿ ಮಾಡಿದ ಬಳಿಕ ಹಿಂದುಳಿದ ವರ್ಗಗಳ ಪಟ್ಟಿಯಿಂದ ತೆಗೆಯುವ ಬಗ್ಗೆ ನಿರ್ಧರಿಸಲಾ ಗುವುದು ಎಂದರು.
ನಾಡವ ಜಾತಿ ವಿಷಯದಲ್ಲೂ ಇದೇ ರೀತಿಯ ಗೊಂದಲವಿದೆ. ಉತ್ತರ ಕನ್ನಡ, ಶಿವಮೊಗ್ಗ ಜಿಲ್ಲೆಗಳಲ್ಲಿ ಇದು ಹಿಂದುಳಿದ ವರ್ಗದ 2ಎ ಅಡಿಯಲ್ಲಿ ಬರುತ್ತದೆ. ಉಡುಪಿಯಲ್ಲಿ ಕೆಲವು ಕಡೆ 2ಎ ಸರ್ಟಿಫಿಕೇಟ್ ನೀಡುತ್ತಾರೆ. ಇಲ್ಲಿ ಕಲ್ಯಾಣಪುರ ಹೊಳೆಯಿಂದ ದಕ್ಷಿಣಕ್ಕೆ ನಾಡವರು ಎಂದರೆ, ಉತ್ತರಕ್ಕೆ ಬಂಟರು ಎಂದು ಕರೆಸಿಕೊಳ್ಳುತ್ತಾರೆ. ಹೀಗಾಗಿ ಈ ಬಗ್ಗೆ ವಿಶೇಷ ಅಧ್ಯಯನದ ಅಗತ್ಯವಿದೆ ಎಂದು ಹೆಗ್ಡೆ ತಿಳಿಸಿದರು.
ಉಡುಪಿ ಜಿಲ್ಲೆಯಲ್ಲಿ ಕುಡುಬಿಯರು ಅಲೆಮಾರಿ ಜನಾಂಗವಾಗಿದ್ದು ಅವರು ಪರಿಶಿಷ್ಟ ಜಾತಿಯನ್ನು ಕೇಳುತಿದ್ದಾರೆ. ಅದೇ ರೀತಿ ಗೊಲ್ಲ ಹಾಗೂ ಜೋಗಿ ಸಮುದಾಯಗಳು ಸಹ ಅಲೆಮಾರಿಯಲ್ಲಿ ಬರುತ್ತವೆ ಎಂದರು. ಲಿಂಗಾಯತ-ವೀರಶೈವರನ್ನು ಅವರ ಎಲ್ಲಾ 46 ಉಪ ಜಾತಿಗಳೊಂದಿಗೆ 3ಬಿಗೆ ಸೇರಿಸಿದ್ದೇವೆ. ಅವರ 2ಎ ಸೇರ್ಪಡೆ ಬೇಡಿಕೆ ರಾಜ್ಯ ಸರಕಾರ ಸುಪ್ರೀಂ ಕೋರ್ಟಿಗೆ ನೀಡಿದ ಭರವಸೆಯಂತೆ ಸಾಧ್ಯವಾಗಿಲ್ಲ ಎಂದರು.
ಹಕ್ಕು ಪತ್ರ ಅಂತಿಮ: ಕೋಡಿ ಕನ್ಯಾಣದಲ್ಲಿ ಹಿಂದುಳಿದ ವರ್ಗದ ಅರ್ಹರಿಗೆ ಹಕ್ಕುಪತ್ರ ವಿತರಣೆ ಪ್ರಕ್ರಿಯೆ ಅಂತಿಮ ಹಂತದಲ್ಲಿದೆ. ದರ ಹೆಚ್ಚಳ(5000ರೂ.) ಇದೆ. ಮಲ್ಪೆಯಲ್ಲಿ ಇರುವಂತೆ(600ರೂ.) ಕಡಿಮೆ ಮಾಡಲು ಸರಕಾರಕ್ಕೆ ಪತ್ರ ಬರೆದಿದ್ದೇವೆ. ಸರಕಾರ ಅಂತಿಮ ತೀರ್ಮಾನ ತೆಗೆದುಕೊಂಡ ಕೂಡಲೇ ಹಕ್ಕುಪತ್ರ ನೀಡಲಾಗುವುದು. ಇನ್ನು ಹಲವು ವಿಷಯಗಳು ನ್ಯಾಯಾಲಯದಲ್ಲಿವೆ ಎಂದರು.
ಹಿಂದುಳಿದ ವರ್ಗಗಳ ಆಯೋಗದ ಸದಸ್ಯರಾದ ಕೆ.ಟಿ. ಸುವರ್ಣ, ಕಲ್ಯಾಣಕುಮಾರ್ ಎಚ್.ಎಸ್., ವಿ.ಎಸ್. ರಾಜಶೇಖರ್, ಅರುಣ್ ಕುಮಾರ್, ಶಾರದ ನಾಯ್ಕ್ ಸುದ್ದಿಗೋಷ್ಠಿಯಲ್ಲಿ ಉಪಸ್ಥಿತರಿದ್ದರು.
ಮೊರಾರ್ಜಿ ವಸತಿ ಶಾಲೆ ಡಿಸಿ, ಸಿಇಒ ಸುಪರ್ದಿಗೆ ಪತ್ರ
ಕರ್ನಾಟಕ ವಸತಿ ಶಿಕ್ಷಣ ಸಂಸ್ಥೆಗಳ ಸಂಘದ(ಕ್ರೈಸ್) ಅಧೀನದ ಮೊರಾರ್ಜಿ ದೇಸಾಯಿ ಸೇರಿದಂತೆ ವಸತಿ ಶಾಲೆಗಳನ್ನು ಹಿಂದುಳಿದ ವರ್ಗಗಳ ಇಲಾಖೆ ಯಿಂದ ನಿರ್ವಹಣೆ ಮಾಡಲಾಗುತ್ತದೆ. ಇದರ ಗುಣಮಟ್ಟ ಸುಧಾರಣೆ ಹಾಗೂ ಉತ್ತಮ ನಿರ್ವಹಣೆಗಾಗಿ ಆಯಾ ಜಿಲ್ಲಾಧಿಕಾರಿ ಮತ್ತು ಜಿ.ಪಂ. ಸಿಇಒಗಳಿಗೆ ಅಧಿಕಾರ ನೀಡಬೇಕು ಎಂಬ ಬಗ್ಗೆ ಸರಕಾರಕ್ಕೆ ಪತ್ರ ಬರೆಯಲಿದ್ದೇವೆ ಎಂದು ಕೆ.ಜಯಪ್ರಕಾಶ್ ಹೆಗ್ಡೆಯವರು ತಿಳಿಸಿದರು.
ಎಲ್ಲರಿಗೂ ಜಾತಿ ಪ್ರಮಾಣ ಪತ್ರ: ಕೆಲವು ಸ್ಕಾಲರ್‌ಶಿಪ್‌ಗಳನ್ನು ಪಡೆಯಲು ಜಾತಿ ಪ್ರಮಾಣ ಪತ್ರ ಕೇಳುವುದ ರಿಂದ ಮೀಸಲಾತಿ ಸೌಲಭ್ಯದೊಳಗೆ ಬಾರದವರಿಗೆ ಹಾಗೂ ಕ್ರೀಮಿ ಲೇಯರ್‌ನವರ ಮಕ್ಕಳಿಗೂ ಜಾತಿ ಪ್ರಮಾಣ ಪತ್ರವನ್ನು ನೀಡುವಂತೆ ಸರಕಾರ ಸೂಚನೆಗಳನ್ನು ನೀಡಿದೆ. ಇದರಿಂದ ಮೀಸಲಾತಿ ಹೊಂದಿಲ್ಲದವರ ಮಕ್ಕಳು ಪ್ರಯೋಜನ ಪಡೆಯಲು ಸಾಧ್ಯ ಎಂದರು.