ಉಡುಪಿ ಜಿಲ್ಲೆಯಲ್ಲಿ ಮಳೆ; 3 ಮನೆಗಳು, ಜಾನುವಾರು ಕೊಟ್ಟಿಗೆಗೆ ಹಾನಿ
ಉಡುಪಿ, ಜು.14: ಉಡುಪಿ ಜಿಲ್ಲೆಯಲ್ಲಿ ಇಂದು ಸಹ ಮುಂಗಾರು ಚುರುಕಾಗಿದ್ದು, ದಿನವಿಡೀ ಮಳೆಮಳೆ ಸುರಿಯುತ್ತಿದೆ. ಹವಾಮಾನ ಇಲಾಖೆ ನಾಳೆಯೂ ಕರಾವಳಿಯ ಜಿಲ್ಲೆಗಳಿಗೆ ಆರೆಂಜ್ ಅಲರ್ಟ್‌ನ್ನು ಘೋಷಿಸಿದ್ದು ಮಳೆ ನಾಳೆಯೂ ಮುಂದುವರಿಯುವ ಸಾಧ್ಯತೆ ಇದೆ. ಅನಂತರದ ಸತತ ನಾಲ್ಕು ದಿನ ಯೆಲ್ಲೋ ಅಲರ್ಟ್‌ನ್ನು ನೀಡಲಾಗಿದೆ.
ಕಳೆದೊಂದು ದಿನದಿಂದ ಗಾಳಿ-ಮಳೆಗೆ ಉಡುಪಿ ಜಿಲ್ಲೆಯಲ್ಲಿ ಮೂರು ಮನೆಗಳಿಗೆ ಸಂಪೂರ್ಣ ಇಲ್ಲವೇ ಭಾಗಶ: ಹಾನಿಯಾಗಿದೆ. ಇದರಿಂದ ಸುಮಾರು ನಾಲ್ಕೂವರೆ ಲಕ್ಷ ರೂ.ಗಳ ನಷ್ಟದ ಅಂದಾಜು ಮಾಡಲಾಗಿದೆ. ಅದೇ ರೀತಿ ದಿನದಲ್ಲಿ ಒಂದು ಜಾನುವಾರು ಕೊಟ್ಟಿಗೆಗೂ ಭಾಗಶ: ಹಾನಿಯಾಗಿದೆ.
ಗೋಪಾಲ ಪೂಜಾರಿ ಮನೆ ಸಂಪೂರ್ಣ ಹಾನಿ: ಗುರುವಾರ ದಿನವಿಡೀ ಸುರಿದ ಮಳೆಗೆ ಬ್ರಹ್ಮಾವರ ತಾಲೂಕು ಚಾಂತಾರು ಗ್ರಾಮದ ರಥಬೀದಿ ಯಲ್ಲಿ ರುವ ಆಂಜನೇಯ ದೇವಸ್ಥಾನದ ಸಮೀಪದ ಮನೆಯೊಂದು ಸಂಪೂರ್ಣವಾಗಿ ಕುಸಿದು ಬಿದ್ದಿದೆ.
ಭಾರೀ ಮಳೆಗೆ ಮನೆಯ ಒಂದು ಭಾಗದ ಗೋಡೆ ಕುಸಿದಿದ್ದು, ಇದರೊಂದಿಗೆ ಇಡೀ ಮನೆಯೇ ಕುಸಿಯಿತು. ಈ ಸಂದರ್ಭದಲ್ಲಿ ಮನೆಯಲ್ಲಿ ಯಾರೂ ಇರಲಿಲ್ಲ ಎನ್ನಲಾಗಿದೆ. ಇದರಿಂದ ಒಟ್ಟು 3.50 ಲಕ್ಷ ರೂ.ನಷ್ಟ ಉಂಟಾಗಿದೆ ಎಂದು ಅಂದಾಜಿಸಲಾಗಿದೆ. ಸ್ಥಳಕ್ಕೆ ಬ್ರಹ್ಮಾವರ ತಹಶೀಲ್ದಾರ್ ರಾಜಶೇಖರಮೂರ್ತಿ ಹಾಗೂ ಕಂದಾಯ ನಿರೀಕ್ಷಕ ಲಕ್ಷ್ಮೀನಾರಾಯಣ ಭೇಟಿ ನೀಡಿ ಪರಿಶೀಲಿಸಿದ್ದಾರೆ.
ಉಳಿದಂತೆ ಬ್ರಹ್ಮಾವರ ತಾಲೂಕಿನ ಹೊಸಾಳದ ಚಂದ್ರ ಎಂಬವರ ಮನೆಯೂ ಗಾಳಿಮಳೆಯಿಂದ ಭಾಗಶ: ಹಾನಿಗೊಂಡಿದ್ದು 50 ಸಾವಿರ ರೂ.ಗಳ ನಷ್ಟದ ಅಂದಾಜು ಮಾಡಲಾಗಿದೆ. ಕಾರ್ಕಳ ತಾಲೂಕು ನಿಟ್ಟೆಯ ಸುಮಿತ್ರಾ ಎಂಬವರ ವಾಸದ ಮನೆ ಗಾಳಿ-ಮಳೆಗೆ ಹಾನಿಗೊಂಡಿದ್ದು 40ಸಾವಿರ ರೂ.ಗಳ ನಷ್ಟದ ಅಂದಾಜು ಮಾಡಲಾಗಿದೆ.
ಬ್ರಹ್ಮಾವರ ತಾಲೂಕು ಪೆಜಮಂಗೂರು ಗ್ರಾಮದ ಲಕ್ಷ್ಮೀ ಆಚಾರ್ತಿ ಇವರ ಮನೆಯ ಜಾನುವಾರು ಕೊಟ್ಟಿಗೆ ಮಳೆಗೆ ಭಾಗಶ: ಕುಸಿದಿದ್ದು ಸುಮಾರು ಹತ್ತು ಸಾವಿರ ರೂ.ಗಳ ನಷ್ಟವಾಗಿರುವುದಾಗಿ ಅಂದಾಜಿಸಲಾಗಿದೆ.
40.1ಮಿ.ಮೀ. ಮಳೆ: ಜಿಲ್ಲೆಯಲ್ಲಿ 24 ಗಂಟೆಗಳ ಅವಧಿಯಲ್ಲಿ ಸರಾಸರಿ 40.1ಮಿ.ಮೀ. ಮಳೆಯಾಗಿರುವುದಾಗಿ ಜಿಲ್ಲಾಧಿಕಾರಿ ಕಚೇರಿಯಿಂದ ತಿಳಿದು ಬಂದಿದೆ.ಬೈಂದೂರಿನಲ್ಲಿ 57.5, ಬ್ರಹ್ಮಾವರದಲ್ಲಿ 49.1, ಉಡುಪಿಯಲ್ಲಿ 46.2, ಕಾಪುವಿನಲ್ಲಿ 36.1, ಹೆಬ್ರಿಯಲ್ಲಿ 33.4 ಹಾಗೂ ಕಾರ್ಕಳದಲ್ಲಿ 23.9 ಮಿ.ಮೀ. ಮಳೆಯಾಗಿರುವುದಾಗಿ ವರದಿ ತಿಳಿಸಿದೆ.
ಉತ್ತಮ ಮಳೆಯಾಗುತ್ತಿರುವುದರಿಂದ ಅಣೆಕಟ್ಟುಗಳಿಗೆ ಹರಿದು ಬರುತ್ತಿರುವ ನೀರಿನ ಪ್ರಮಾಣ ಹೆಚ್ಚಾಗಿದೆ. ಪ್ರಸ್ತುತ ಹಿರಿಯಡ್ಕ ಬಳಿಯ ಬಜೆ ಡ್ಯಾಮ್‌ನ ನೀರಿನ ಮಟ್ಟ 6.03 ಮೀ. ಆಗಿದ್ದರೆ ಕಾರ್ಕಳದ ಮುಂಡ್ಲಿಯ ನೀರಿನ ಮಟ್ಟ 5.87 ಮೀ. ಆಗಿದೆ.