ಉಡುಪಿ ಜಿಲ್ಲೆಯಲ್ಲಿ ಮಳೆಯಿಂದ 5 ಮನೆಗಳು, ಕೊಟ್ಟಿಗೆಗೆ ಹಾನಿ
ಉಡುಪಿ, ಜು.11: ಜಿಲ್ಲೆಯಲ್ಲಿ ಮುಂಗಾರು ಮಳೆ ಸಾಕಷ್ಟು ದುರ್ಬಲ ಗೊಂಡಿದೆ. ಎರಡು ದಿನಗಳಿಂದ ಮಳೆ ವಿರಳವಾಗಿದ್ದು, ಸಂಜೆಯ ಬಳಿಕ ಕೆಲವೊಮ್ಮೆ ಜೋರಾಗಿ ಬರುತ್ತಿದೆ. ಕಳೆದ 24 ಗಂಟೆಗಳಲ್ಲಿ ಜಿಲ್ಲೆಯಲ್ಲಿ 10.4 ಮಿ.ಮೀ. ಮಳೆಯಾಗಿದೆ.
ಉಡುಪಿಯಲ್ಲಿ 18.0ಮಿ.ಮೀ, ಕಾಪುವಿನಲ್ಲಿ 16.5, ಕಾರ್ಕಳ 13.2, ಬೈಂದೂರು 11.5, ಬ್ರಹ್ಮಾವರ 11.1, ಹೆಬ್ರಿ 6.9 ಹಾಗೂ ಕುಂದಾಪುರ 4.6ಮಿ.ಮೀ. ಮಳೆಯಾಗಿದೆ. ಈ ಅವಧಿಯಲ್ಲಿ ಜಿಲ್ಲೆಯಲ್ಲಿ ಐದು ಮನೆಗಳು ಹಾಗೂ ಒಂದು ಜಾನುವಾರು ಕೊಟ್ಟಿಗೆಗೆ ಹಾನಿಯಾಗಿದೆ.
ಉಡುಪಿ ತಾಲೂಕು ಪಡುತೋನ್ಸೆಯ ರವೀಂದ್ರ ಭಟ್ ಅವರ ಮನೆಗೆ ಭಾಗಶ: ಹಾನಿಯಾಗಿದ್ದು 1.50 ಲಕ್ಷರೂ.ನಷ್ಟ ಸಂಭವಿಸಿದೆ. ಕಾರ್ಕಳ ತಾಲೂಕು ಮುಡಾರಿನ ಮಹಾಬಲ ಮೇರ ಅವರ ವಾಸ್ತವ್ಯದ ಮನೆ ಹಾನಿ ಗೊಂಡಿದ್ದು 50ಸಾವಿರ, ಕುಂದಾಪುರ ಹೆಮ್ಮಾಡಿಯ ಪ್ರಕಾಶನ್ ನಾಯ್ಕ್ ಅವರ ಮನೆಯ ಮೇಲ್ಚಾವಣಿ ಹಾನಿಗೊಂಡು 25 ಸಾವಿರ ಹಾಗೂ ಕಾಪು ತಾಲೂಕಿನ ಏಣಗುಡ್ಡೆಯ ಲಲಿತ ಪೂಜಾರಿ ಮನೆಗೆ 25 ಸಾವಿರ ಹಾಗೂ ಮೂಡಬೆಟ್ಟು ರಾಜೀವಿ ಎಂಬವರ ಮನೆಗೆ 20 ಸಾವಿರ ರೂ.ನಷ್ಟ ಸಂಭವಿಸಿದೆ.
ಬ್ರಹ್ಮಾವರ ತಾಲೂಕು ಗುಂಡ್ಮಿಯ ಪ್ರೇಮ ಮರಕಾಸ್ತಿ ಎಂಬವರ ಮನೆಯ ಜಾನುವಾರು ಕೊಟ್ಟಿಗೆ ಗಾಳಿ-ಮಳೆಯಿಂದ ಭಾಗಶ: ಹಾನಿಗೊಂಡು 25 ಸಾವಿರ ರೂ.ನಷ್ಟವಾಗಿರುವ ಬಗ್ಗೆ ವರದಿ ಬಂದಿದೆ.
ಜಿಲ್ಲೆಯಲ್ಲಿ ನಾಳೆಯಿಂದ ನಾಲ್ಕು ದಿನಗಳ ಕಾಲ ಯೆಲ್ಲೋ ಅಲರ್ಟ್ ಘೋಷಿಸಲಾಗಿದೆ. ಆ ಬಳಿಕ ಹಗುರದಿಂದ ಸಾಧಾರಣ ಮಳೆಯ ಮುನ್ಸೂಚನೆ ನೀಡಲಾಗಿದೆ. ಜಿಲ್ಲೆಯ ಬಜೆ ಅಣೆಕಟ್ಟಿನಲ್ಲಿ ನೀರಿನ ಮಟ್ಟ 5.64ಮೀ. ಆಗಿದ್ದರೆ, ಕಾರ್ಕಳದ ಮುಂಡ್ಲಿಯಲ್ಲಿ 4.57ಮೀ. ನೀರಿದೆ.