ರಾಜ್ಯದಲ್ಲಿ ಶೇ. 50 ಗ್ಯಾರಂಟಿ ಸರಕಾರ: ಕೋಟ ಶ್ರೀನಿವಾಸ ಪೂಜಾರಿ ವ್ಯಂಗ್ಯ
ಉಡುಪಿ, ಜೂ.30: ರಾಜ್ಯದಲ್ಲಿ ಬಿಪಿಎಲ್ ಕಾರ್ಡ್ ಹೊಂದಿರುವವರಿಗೆ 5 ಕೆಜಿ ಅಕ್ಕಿ ಬದಲು ಹಣ ಕೊಡಲು ರಾಜ್ಯ ಸರಕಾರ ನಿರ್ಧರಿಸಿರುವುದನ್ನು ಮಾಜಿ ಸಚಿವ ಕೋಟ ಶ್ರೀನಿವಾಸ ಪೂಜಾರಿ ಟೀಕಿಸಿದ್ದಾರೆ. ರಾಜ್ಯದಲ್ಲೀಗ ಇರುವುದು 50 ಪರ್ಸೆಂಟ್ ಗ್ಯಾರಂಟಿ ಸರಕಾರ ಎಂದವರು ವ್ಯಂಗ್ಯವಾಡಿದ್ದಾರೆ.
ಕೇಂದ್ರ ಸರಕಾರ ಬಿಪಿಎಲ್ ಇರುವ ಪ್ರತಿಯೊಬ್ಬರಿಗೂ ಐದು ಕೆಜಿ ಅಕ್ಕಿ ನೀಡುತ್ತಿದೆ. ಒಂದು ತಿಂಗಳಿಗೆ ಕೇಂದ್ರ ಸರಕಾರಕ್ಕೆ 18ರಿಂದ 19 ಸಾವಿರ ಕೋಟಿ ಖರ್ಚಾಗುತ್ತದೆ. ತೆಲಂಗಾಣದಲ್ಲಿ ಕೇಂದ್ರ ಸರಕಾರದ ಅಕ್ಕಿ ಎಂದು ರಶೀದಿ ನೀಡುತ್ತಿದ್ದಾರೆ. ಆದ್ರೆ ಸಿದ್ದರಾಮಯ್ಯನವರು ಇದನ್ನು ನಮ್ಮ ಅಕ್ಕಿ ನಮ್ಮ ಅಕ್ಕಿ ಅಂತ ಹೇಳುತ್ತಿದ್ದಾರೆ ಎಂದು ಇಲ್ಲಿ ಮಾತನಾಡುತ್ತಾ ನುಡಿದರು.
ಆಹಾರ ಭದ್ರತಾ ಕಾಯ್ದೆಯನ್ನು ನರೇಂದ್ರ ಮೋದಿ ಸ್ಪಷ್ಟ ರೂಪ ಕೊಟ್ಟು ಅನುಷ್ಠಾನ ಮಾಡಿದ್ದು. ನೀವು ಈಗ ಅಕ್ಕಿ ಸಿಕ್ಕಿಲ್ಲ, ಹಣ ಕೊಡುತ್ತಿದ್ದೇವೆ ಎನ್ನುತ್ತಿದ್ದೀರಿ. ನೀವು 10 ಕೆಜಿ ಅಕ್ಕಿ ಕೊಡುತ್ತೇವೆ ಅಂತ ಹೇಳುವಾಗ ಕೇಂದ್ರದ 5 ಕೆ.ಜಿ ಅಕ್ಕಿ ಸೇರಿ ಅಂತ ಹೇಳಿದ್ದೀರಾ? ಹಾಗಾದ್ರೆ ಕೇಂದ್ರ ನೀಡುವ ಅಕ್ಕಿಗೆ ರಾಜ್ಯದಿಂದ ಹಣ ನೀಡುತ್ತಿದ್ದೀರಾ? ಜನರಿಗೆ ತಪ್ಪು ಮಾಹಿತಿ ಒದಗಿಸಬೇಡಿ ಎಂದರು.
ನೀವು 10 ಕೆಜಿ ಅಕ್ಕಿ ಕೊಡುತ್ತೇವೆ ಅಂದವರು ಹಾಗಾದರೆ 10 ಕೆಜಿ ಅಕ್ಕಿ ಕೊಡಬೇಕಲ್ವಾ.. ನಿಮ್ಮದು 50% ಗ್ಯಾರೆಂಟಿಯಾ. ಈಗ ನಿಮ್ಮದು 50 ಪರ್ಸೆಂಟ್ ಗ್ಯಾರಂಟಿ ಆಯ್ತು. 34 ರೂಪಾಯಿಗೆ ಅಕ್ಕಿ ಬರುವುದಿಲ್ಲ ಅದರಲ್ಲೂ ಹಣ ಉಳಿಸಿಕೊಳ್ಳಲು ಒದ್ದಾಟ ಮಾಡುತ್ತಿದ್ದೀರಿ. ದಯವಿಟ್ಟು ಕರ್ನಾಟಕದ ಜನವನ್ನು ತಪ್ಪು ಹಾದಿಗೆ ಎಳೆಯಬೇಡಿ ಎಂದರು.
ವರ್ಗಾವಣೆ ದಂಧೆ: ರಾಜ್ಯದಲ್ಲಿ ವರ್ಗಾವಣೆ ದಂಧೆ ವಿಪರೀತವಾಗಿದೆ. ಈ ಬಗ್ಗೆ ಮುಖ್ಯಮಂತ್ರಿಗಳು ಮತ್ತು ಡಿಸಿಎಂ ಸ್ಪಷ್ಟನೆ ಕೊಡಬೇಕು. ಭ್ರಷ್ಟಾಚಾರ ರಹಿತ ಆಡಳಿತ ಕೊಡುತ್ತೇವೆ ಎಂದು ಅಧಿಕಾರಕ್ಕೆ ಬಂದ್ರಿ. ಈಗ ರಾಜ್ಯದ ಅಧಿಕಾರಿಗಳು ಬಹಳ ನೋವಿನಿಂದ ಮಾತನಾಡುತ್ತಿದ್ದಾರೆ. ವರ್ಗಾವಣೆಗೆ ಮತ್ತು ವರ್ಗಾವಣೆ ಆಗದಿರಲು ಲಂಚಾವತಾರ ನಡೆಯುತ್ತಿದೆ ಎಂದು ಅಧಿಕಾರಿಗಳು ಹೇಳುತಿದ್ದಾರೆ ಎಂದು ಕೋಟ ಶ್ರೀನಿವಾಸ ಪೂಜಾರಿ ಗಂಭೀರ ಆರೋಪ ಮಾಡಿದರು.