ಆಳದ ಬಾವಿಗೆ ಬಿದ್ದ ಸಾಕು ನಾಯಿ ರಕ್ಷಿಸಿದ ಅಗ್ನಿಶಾಮಕ ಸಿಬ್ಬಂದಿ
ಕುಂದಾಪುರ, ಜೂ.26: ಮನೆಯೊಂದರ ಹಿತ್ತಲಿನಲ್ಲಿದ್ದ ಆಳದ ಬಾವಿಗೆ ಬಿದ್ದ ಸಾಕು ನಾಯಿಯನ್ನು ಕುಂದಾಪುರ ಅಗ್ನಿಶಾಮಕ ಸಿಬ್ಬಂದಿ ರಕ್ಷಿಸಿದ ಘಟನೆ ಹಟ್ಟಿಯಂಗಡಿಯ ಕನ್ಯಾಣಗುಡ್ಡೆ ಎಂಬಲ್ಲಿ ಜೂ.25ರಂದು ನಡೆದಿದೆ.
ಸುಮಾರು 45 ಅಡಿ ಆಳ, 20 ಅಡಿ ಅಗಲ ಮತ್ತು 4 ಅಡಿ ನೀರಿದ್ದ ಬಾವಿಗೆ ನೆರೆಮನೆಯ ಸಾಕು ನಾಯಿ ಅಕಸ್ಮಿಕವಾಗಿ ಬಿದ್ದಿತ್ತು. ನಾಯಿಯ ರಕ್ಷಣೆಗೆ ಸ್ಥಳೀಯರು ಅಗ್ನಿಶಾಮಕ ದಳಕ್ಕೆ ಮಾಹಿತಿ ನೀಡಿದರು. ಕೂಡಲೇ ಕುಂದಾಪುರ ಅಗ್ನಿಶಾಮಕ ಠಾಣೆಯ ಪ್ರಭಾರ ಠಾಣಾಧಿಕಾರಿ ಕೃಷ್ಣಾನಂದ ಟಿ. ಗೌಡ, ಪ್ರಮುಖ ಅಗ್ನಿಶಾಮಕ ಬಾಲಕೃಷ್ಣ, ಚಾಲಕ ಬಸವರಾಜ, ಅಗ್ನಿಶಾಮಕ ರಾದ ಕೃಷ್ಣ ನಾಯ್ಕ, ಚಂದ್ರಕಾಂತ ಜೆ.ನಾಯ್ಕ, ದಿನೇಶ ಹಾಗೂ ನವ ಚಾಲಕ ಸಚಿನ್ ಸ್ಥಳಕ್ಕೆ ತೆರಳಿದ್ದರು.
ಬಾವಿಯಲ್ಲಿ ಗಿಡಗಂಟಿಗಳು ಬೆಳೆದು ಬಾವಿಯ ಒಳಗೆ ಮಣ್ಣು ಅಲ್ಲಲ್ಲಿ ಕುಸಿಯುವ ಸ್ಥಿತಿಯಲ್ಲಿದ್ದರೂ ಕೂಡ ಅಗ್ನಿಶಾಮಕ ದಿನೇಶ ಬಾವಿಗೆ ಇಳಿದಿದ್ದು ಭೀತಿಗೊಳಗಾಗಿದ್ದ ನಾಯಿಯ ಎಗರಾಟದಿಂದ ತಪ್ಪಿಸಿಕೊಂಡು ಒಂದು ಗಂಟೆಗೂ ಹೆಚ್ಚು ಕಾಲ ಕಾರ್ಯಾಚರಣೆ ನಡೆಸಿ ರನ್ನಿಂಗ್ ಬೋ ಲೈನ್ ಹಗ್ಗದಿಂದ ಸುರಕ್ಷಿತವಾಗಿ ಮೇಲಕ್ಕೆತ್ತಿದ್ದಾರೆ.