ದ.ಕ.ಜಿಲ್ಲೆಯಲ್ಲಿ ಚುರುಕುಗೊಂಡ ಮುಂಗಾರು
ಮಂಗಳೂರು, ಜೂ.25: ದ.ಕ.ಜಿಲ್ಲೆಯಲ್ಲಿ ಕೆಲವು ದಿನದಿಂದ ದುರ್ಬಲಗೊಂಡಿದ್ದ ಮುಂಗಾರು ರವಿವಾರ ಮತ್ತೆ ಚುರುಕುಗೊಂಡಿವೆ. ಅರಬ್ಬಿ ಸಮುದ್ರದಲ್ಲಿ ಕಾಣಿಸಿಕೊಂಡ ಚಂಡಮಾರುತದ ಪ್ರಭಾವವು ಮುಂಗಾರಿನ ಮೇಲಾಗಿದೆ. ಒಂದಷ್ಟು ಮಳೆಯಾಗಿದ್ದರೂ ನೀರಿನ ಸಮಸ್ಯೆ ಎದುರಿಸುತ್ತಿದ್ದ ಜನರಲ್ಲಿ ಮತ್ತು ಕೃಷಿಕರಲ್ಲಿ ಸಂತಸ ವ್ಯಕ್ತವಾಗಿವೆ.
ಶನಿವಾರ ರಾತ್ರಿಯಿಡೀ ಮಂಗಳೂರು, ಪುತ್ತೂರು, ಸುಳ್ಯ ಮತ್ತಿತರ ಹಲವೆಡೆ ಗುಡುಗು, ಸಿಡಿಲು ಸಹಿತ ಮಳೆಯಾಗಿದ್ದರೆ ರವಿವಾರ ಜಿಲ್ಲೆಯ ಬಹುತೇಕ ಎಲ್ಲಾ ಕಡೆಯೂ ಉತ್ತಮ ಮಳೆಯಾಗಿದೆ.
ನಗರದ ಪಂಪ್‌ವೆಲ್, ಪಡೀಲ್, ಜ್ಯೋತಿ ಮತ್ತಿತರ ನಾನಾ ಭಾಗದಲ್ಲಿ ಮಳೆ ನೀರು ನಿಂತು ಸಂಚಾರಕ್ಕೆ ಸಮಸ್ಯೆಯಾಗಿವೆ. ಅದರಲ್ಲೂ ಜಪ್ಪಿನಮೊಗರು, ಕಡೆಕಾರು ಮತ್ತಿತರ ಕಡೆ ಕೃತಕ ನೆರೆಯಾಗಿವೆ.
ಜಿಲ್ಲೆಯಲ್ಲಿ ಮುಂದಿನ ಮೂರು ದಿನಗಳಲ್ಲಿ ಉತ್ತಮ ಮಳೆಯಾಗುವ ಸಾಧ್ಯತೆಯಿದೆ. ಜೂ.23ರ ರಾತ್ರಿಯಿಂದ ಎನ್‌ಡಿಆರ್‌ಎಫ್ ಹಾಗೂ ಎಸ್‌ಡಿಆರ್‌ಎಫ್ ತಂಡಗಳು ಪುತ್ತೂರು, ಬೆಳ್ತಂಗಡಿ, ಸುಳ್ಯ ಭಾಗದಲ್ಲಿ ಠಿಕಾಣಿ ಹೂಡಿದೆ.
ದ.ಕ. ಜಿಲ್ಲೆಯಲ್ಲಿ ಶನಿವಾರ ಬೆಳಗ್ಗಿನಿಂದ ರವಿವಾರ ಬೆಳಗ್ಗಿನವರೆಗೆ 34.2 ಮಿ.ಮೀ ಸರಾಸರಿ ಮಳೆಯಾಗಿದೆ. ಮಂಗಳೂರಿನಲ್ಲಿ 34.5 ಮಿ.ಮೀ, ಪುತ್ತೂರು 21.1 ಮಿ.ಮೀ, ಸುಳ್ಯ 19.5 ಮಿ.ಮೀ, ಮಂಗಳೂರು ವಿಮಾನ ನಿಲ್ದಾಣ 32.2 ಮಿಮಿ., ಪಣಂಬೂರು 36.6 ಮಿಮಿ. ಮಳೆಯಾಗಿದೆ. ಜಿಲ್ಲೆಯ ನಾನಾ ಕಡೆ ಉತ್ತಮ ಮಳೆಯಾಗುತ್ತಿರುವುದರಿಂದ ಎಎಂಆರ್ ಡ್ಯಾಂ ಸಹಿತ ತುಂಬೆಯ ಡ್ಯಾಂ 2 ಗೇಟ್‌ಗಳನ್ನು ತೆರೆಯಲಾಗಿದೆ.
ರವಿವಾರ ಕರಾವಳಿಯಲ್ಲಿ ಸರಾಸರಿ 28.1 ಡಿಗ್ರಿ ಗರಿಷ್ಠ ಮತ್ತು 23.2 ಕನಿಷ್ಟ ಉಷ್ಣಾಂಶ ದಾಖಲಾಗಿದೆ. ಭಾರತದ ಹವಾಮಾನ ಇಲಾಖೆಯ ಮಾಹಿತಿಯಂತೆ ಕರಾವಳಿಯಲ್ಲಿ ಮುಂದಿನ 48 ಗಂಟೆ ಉತ್ತಮ ಮಳೆಯಾಗಲಿದೆ. ಪಶ್ಚಿಮ ಘಟ್ಟಪ್ರದೇಶದ ತಪ್ಪಲಲ್ಲಿ ಮಳೆ ಪ್ರಮಾಣ ಹೆಚ್ಚಾಗುವ ಸಾಧ್ಯತೆ ಇದೆ ಎಂದು ತಿಳಿಸಿದೆ.
ಕರಾವಳಿಯಲ್ಲಿ ಯೆಲ್ಲೋ ಅಲರ್ಟ್ ಮುಂದುವರಿದಿದ್ದು, ಗಂಟೆಗೆ 44ರಿಂದ 48 ಕಿ.ಮೀ. ವೇಗದಲ್ಲಿ ಬಿರುಗಾಳಿ ಬೀಸುವ ಸಾಧ್ಯತೆ ಇದೆ. ಹಾಗಾಗಿ ಮೀನುಗಾರರು ಸಮುದ್ರಕ್ಕೆ ಇಳಿಯದಂತೆ ಎಚ್ಚರಿಕೆ ನೀಡಲಾಗಿದೆ.