ಬೇಡಿಕೆ ಈಡೇರಿಕೆಗೆ ಆಗ್ರಹಿಸಿ ಅಕ್ಷರ ದಾಸೋಹ ನೌಕರರ ಧರಣಿ
ಉಡುಪಿ, ಜು.11: ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ಕರ್ನಾಟಕ ರಾಜ್ಯ ಅಕ್ಷರ ದಾಸೋಹ ನೌಕರರ ಸಂಘ(ಸಿಐಟಿಯು) ನೇತೃತ್ವ ದಲ್ಲಿ ಅಕ್ಷರದಾಸೋಹ ನೌಕರರು ಉಡುಪಿ ತಾಲೂಕು ಪಂಚಾಯತ್ ಮುಂದೆ ಧರಣಿ ನಡೆಸಿದರು.
2023ರ ಬಜೆಟ್‌ನಲ್ಲಿ ಹಿಂದಿನ ಸರಕಾರ ಘೋಷಿಸಿದಂತೆ ಬಿಸಿಯೂಟ ನೌಕರರಿಗೆ 1,000 ರೂ. ಗೌರವಧನ ಹೆಚ್ಚಳ ಆದೇಶವನ್ನು ಕೂಡಲೇ ಜಾರಿಗೆ ತರಬೇಕು. ಬೆಲೆ ಏರಿಕೆಯ ಆಧಾರದಲ್ಲಿ ವೇತನ ಹೆಚ್ಚಳ 12 ಸಾವಿರ ರೂ. ನೀಡಬೇಕು. ನಿವೃತ್ತಿ ಹೊಂದಿದ ಮತ್ತು ನಿವೃತ್ತಿ ಹೊಂದುತ್ತಿರುವ ನೌಕರರಿಗೆ 1 ಲಕ್ಷ ಪರಿಹಾರ ನೀಡಲು ಆದೇಶಿಸಬೇಕು. ಸಾದಿಲ್ವಾರು ಜಂಟಿ ಖಾತೆ ಜವಾಬ್ದಾರಿ ಮುಖ್ಯ ಅಡುಗೆಯವರಿಗೆ ನೀಡಬೇಕು.
ಅಪಘಾತದಲ್ಲಿ ಮರಣ ಹೊಂದಿದ ಅಡುಗೆ ಸಿಬ್ಬಂದಿಗಳ ಕುಟುಂಬದವರಿಗೆ ಕೆಲಸ ನೀಡಬೇಕು. ಬೇಸಿಗೆ ಮತ್ತು ದಸರಾ ರಜೆಗಳ ವೇತನವನ್ನು ನೀಡ ಬೇಕು. ಬಿಸಿಯೂಟ ಯೋಜನೆ ಯಾವುದೇ ಖಾಸಗಿ ಸಂಸ್ಥೆಗಳಿಗೆ ನೀಡಬಾರದು. ಪ್ರತಿ ಶಾಲೆಯಲ್ಲಿ ಕನಿಷ್ಟ 2 ಜನ ಅಡುಗೆಯವರು ಇರಲೇಬೇಕು. ಬಿಸಿಯೂಟ ನೌಕರರನ್ನು ಡಿ ಗ್ರೂಪ್ ನೌಕರರನ್ನಾಗಿ ಪರಿಗಣಿಸಬೇಕು ಎಂದು ಧರಣಿನಿರತರು ಒತ್ತಾಯಿಸಿದರು.
ಬಳಿಕ ತಾಪಂ ಕಾರ್ಯನಿರ್ವಣಾಧಿಕಾರಿ ಮೂಲಕ ರಾಜ್ಯ ಸರಕಾರಕ್ಕೆ ಮನವಿ ಸಲ್ಲಿಸಲಾಯಿತು. ಧರಣಿಯಲ್ಲಿ ಅಕ್ಷರ ದಾಸೋಹ ಸಂಘದ ಜಿಲ್ಲಾ ಕಾರ್ಯದರ್ಶಿ ಸುನಂದ, ಉಡುಪಿ ತಾಲೂಕು ಮುಖಂಡರಾದ ರೂಪ, ಸುಲೋಚನ, ರತ್ನ, ಕುಸುಮ, ಗಿರಿಜಾ ಹಾಗೂ ಸಿಐಟಿಯು ಜಿಲ್ಲಾ ಕಾರ್ಯದರ್ಶಿ ಕವಿರಾಜ್ ಎಸ್., ಜಿಲ್ಲಾ ಖಜಾಂಚಿ ಶಶಿಧರ ಗೊಲ್ಲ, ಮುಖಂಡರಾದ ಮೋಹನ್ ಉಪಸ್ಥಿತರಿದ್ದರು.
ಕುಂದಾಪುರದಲ್ಲಿ ಧರಣಿ: ಕುಂದಾಪುರ ತಾಲೂಕು ಅಕ್ಷರ ದಾಸೋಹ ನೌಕರರ ಸಂಘ ನೇತೃತ್ವದಲ್ಲಿ ನೌಕರರು ತಮ್ಮ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಕುಂದಾಪುರ ತಾಪಂ ಕಚೇರಿ ಎದುರು ಧರಣಿ ನಡೆಸಿದರು.
ಧರಣಿಯಲ್ಲಿ ಸಿಐಟಿಯು ಮುಖಂಡರಾದ ಎಚ್.ನರಸಿಂಹ, ತಾಲೂಕು ಸಂಚಾಲಕ ಚಂದ್ರಶೇಖರ ವಿ., ಸಂಘದ ಜಿಲ್ಲಾಧ್ಯಕ್ಷೆ ಜಯಶ್ರೀ ಪಡುವರಿ, ಉಪಾಧ್ಯಕ್ಷೆ ಸಿಂಗಾರಿ ನಾವುಂದ, ಕೋಶಾಧಿಕಾರಿ ನಾಗರತ್ನ, ಕಾರ್ಯದರ್ಶಿ ಲತಾ ಹೊಸಂಗಡಿ, ಉಷಾ ಮೊದಲಾದವರು ಉಪಸ್ಥಿತರಿದ್ದರು.