ಅಲ್ ಬಿರ್ರ್ ಶಾಲಾ ಆಡಳಿತ ಮಂಡಳಿ-ಶಿಕ್ಷಕಿಯರ ಕಾರ್ಯಾಗಾರ
ಬಿ.ಸಿ. ರೋಡ್: ದಕ್ಷಿಣ ಕನ್ನಡ, ಕೊಡಗು ಜಿಲ್ಲೆಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಅಲ್ ಬಿರ್ರ್ ಶಾಲೆಗಳ ಆಡಳಿತ ಮಂಡಳಿ ಪ್ರತಿನಿಧಿಗಳ ಹಾಗೂ ಶಿಕ್ಷಕಿಯರ ತರಬೇತಿ ಕಾರ್ಯಾಗಾರವು ಬಿ.ಸಿ. ರೋಡ್‌ನ ಲಯನ್ಸ್ ಕ್ಲಬ್ ಸಭಾಂಗಣದಲ್ಲಿ ಗುರುವಾರ ನಡೆಯಿತು.
ಕಾರ್ಯಕ್ರಮವನ್ನು ಉದ್ಘಾಟಿಸಿದ ಅಲ್ ಬಿರ್ರ್ ಸ್ಕೂಲ್ ಆಡಳಿತ ನಿರ್ದೇಶಕ ಕೆ.ಪಿ. ಮುಹಮ್ಮದ್ ತಲಶ್ಶೇರಿ ಮಾತನಾಡಿ, ಸಮಸ್ತ ಕೇರಳ ಇಸ್ಲಾಂ ಮತ ವಿದ್ಯಾಭ್ಯಾಸ ಬೋರ್ಡ್‌ನ ಅಧೀನದಲ್ಲಿ ಕರ್ನಾಟಕದಾದ್ಯಂತ ವಿವಿಧ ಜಿಲ್ಲೆಗಳಲ್ಲಾಗಿ ಅಲ್ ಬಿರ್ರ್ ಶಾಲೆಗಳು ಅತ್ಯಾಧುನಿಕ ಶಿಕ್ಷಣ ವಿಧಾನದ ಮೂಲಕ ಕಾರ್ಯನಿರ್ವಹಿಸುತ್ತಿದ್ದು, ಇದನ್ನು ಇನ್ನಷ್ಟು ಬಲಪಡಿಸಲು ಹಾಗೂ ವಿಸ್ತರಿಸಲು ಕಾರ್ಯಯೋಜನೆಗಳನ್ನು ಸಿದ್ಧಪಡಿಸಲಾಗಿದೆ ಎಂದು ತಿಳಿಸಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಅಲ್ ಬಿರ್ರ್ ಟೀಚರ್ ಟ್ರೈನಿಂಗ್ ಕನ್ವಿನರ್ ಫೈಝಲ್ ಹುದವಿ ಪರದಕ್ಕಾಡ್ ಮಾತನಾಡಿ, ಪುಟಾಣಿಗಳಲ್ಲಿ ಧಾರ್ಮಿಕ ಪ್ರಜ್ಞೆ ಮೂಡಿಸುವ ಮೂಲಕ ಎಳೆ ಪ್ರಾಯದಿಂದಲೇ ನೈತಿಕ ಶಿಕ್ಷಣವನ್ನು ಬೋಧಿಸಲು ಅಲ್‌ಬಿರ್ರ‌್ ಸ್ಕೂಲ್ ಒತ್ತು ನೀಡಲಾಗುತ್ತಿದೆ ಎಂದರು.
ಸಮಸ್ತ ವಿದ್ಯಾಭ್ಯಾಸ ಮಂಡಳಿ ಸದಸ್ಯ ಶರೀಫ್ ಫೈಝಿ ಕಡಬ ಪ್ರಾರ್ಥನೆ ನೆಡಸಿದರು.
ಮುಖ್ಯ ಅತಿಥಿಗಳಾಗಿ ಪಾಲ್ಗೊಂಡಿದ್ದ ಸಮಸ್ತ ವಿದ್ಯಾಭ್ಯಾಸ ಮಂಡಳಿ ಸದಸ್ಯ ರಶೀದ್ ಹಾಜಿ ಪರ್ಲಡ್ಕ, ಅಡ್ಯಾರ್ ಅಲ್‌ಬಿರ್ ಸ್ಕೂಲ್ ಕೋರ್ಡಿನೇಟರ್ ಕೆ.ಎಲ್. ಉಮ್ಮರ್ ದಾರಿಮಿ ಪಟ್ಟೋರಿ, ತರಬೇತುದಾರ ಅಬ್ದುಲ್ ಸಮದ್ ಸಾಲೆತ್ತೂರು, ಕಿಡ್ಸ್ ಮ್ಯಾಗಝೈನ್ ಸಂಪಾದಕ ಯೂಸುಫ್ ಮುಂಡೋಳೆ ಶುಭಹಾರೈಸಿದರು.
ಅಲ್ ಬಿರ್ರ್ ಸ್ಕೂಲ್‌ನ ಸಂಪನ್ಮೂಲ ವ್ಯಕ್ತಿ ರಫೀಕ್ ಮಾಸ್ಟರ್ ಆತೂರು ಅವರು ‘ಆಡಳಿತ ಮಂಡಳಿ-ಶಿಕ್ಷಕಿಯರ ಜವಾಬ್ದಾರಿ’ ವಿಷಯದಲ್ಲಿ ತರಗತಿ ನಡೆಸಿಕೊಟ್ಟರು. ದ.ಕ.ಜಿಲ್ಲಾ ಕೋರ್ಡಿನೇಟರ್ ಶುಕೂರು ದಾರಿಮಿ ಕರಾಯ ಸ್ವಾಗತಿಸಿ, ಅಲ್‌ಬಿರ್ ನವಾಝ್ ವೈತ್ತಲ ವಂದಿಸಿದರು.