ಪುತ್ತಿಗೆ ಪರ್ಯಾಯ ಕಟ್ಟಿಗೆ ಮುಹೂರ್ತ ಸಂಪನ್ನ
ಉಡುಪಿ, ಜೂ.26: 2024ರ ಜ.18ರಂದು ನಡೆಯುವ ಪುತ್ತಿಗೆ ಶ್ರೀಗಳ ಪರ್ಯಾಯಕ್ಕೆ ಪೂರ್ವಭಾವಿಯಾಗಿ ನಡೆಯುವ ಮುಹೂರ್ತಗಳಲ್ಲಿ ಮೂರನೇ ಯದಾದ ಕಟ್ಟಿಗೆ ಸಂಗ್ರಹ ಮುಹೂರ್ತವು ಸೋಮವಾರ ಶ್ರೀಕೃಷ್ಣಮಠದ ಕಟ್ಟಿಗೆ ರಥವಿರುವ ಸ್ಥಳದಲ್ಲಿ ಸಂಪನ್ನಗೊಂಡಿತು.
ವಿದ್ವಾನ್ ಹೆರ್ಗ ವೇದವ್ಯಾಸ ಭಟ್ ಹಾಗೂ ರಾಘವೇಂದ್ರ ಕೊಡಂಚರ ನೇತೃತ್ವದಲ್ಲಿ ಧಾರ್ಮಿಕ ವಿಧಿವಿಧಾನಗಳು ನಡೆದವು. ಪುತ್ತಿಗೆ ಮಠದ ಪಟ್ಟದ ದೇವರು ಶ್ರೀ ಉಪೇಂದ್ರವಿಠಲನಲ್ಲಿ ಪ್ರಾರ್ಥನೆಯ ಬಳಿಕ ಚಂದ್ರಮೌಳೀಶ್ವರ ಹಾಗೂ ಅನಂತೇಶ್ವರ, ಶ್ರೀಕೃಷ್ಣಮಠದಲ್ಲಿ ಪ್ರಾರ್ಥನೆ ಸಲ್ಲಿಸಿ ನವಗ್ರಹದಾನ ವನ್ನು ಈ ಸಂದರ್ಭದಲ್ಲಿ ನಡೆಸಲಾಯಿತು.
ಕೃಷ್ಣಮಠದ ಪದ್ಮನಾಭ ಮೇಸ್ತ್ರಿ ನೇತೃತ್ವದಲ್ಲಿ ಕಟ್ಟಿಗೆಯನ್ನು ಸಂಗ್ರಹಿಸುವ ಪ್ರಕ್ರಿಯೆಗೆ ಚಾಲನೆ ನೀಡಲಾಯಿತು. ಅಷ್ಟಮಠದ ಪ್ರತಿನಿಧಿಗಳು, ಆನೆಗುಡ್ಡೆ ದೇವಸ್ಥಾನದ ಅರ್ಚಕರಾದ ಸೂರ್ಯನಾರಾಯಣ ಉಪಾಧ್ಯಾಯ, ಶ್ರೀಧರ ಉಪಾಧ್ಯಾಯ, ಕೇಂಜ ಶ್ರೀಧರ ತಂತ್ರಿ, ಬಿ.ಗೋಪಾಲಾಚಾರ್ಯ, ಬ್ರಾಹ್ಮಣ ಸಭೆಯ ಅಧ್ಯಕ್ಷ ಮಂಜುನಾಥ ಉಪಾಧ್ಯಾಯ, ವಿವಿಧ ಸಂಘಸಂಸ್ಥೆಗಳ ಪದಾಧಿಕಾರಿಗಳು ಮತ್ತಿತರ ಗಣ್ಯರು ಉಪಸ್ಥಿತರಿದ್ದರು.
ಈ ಸಂದರ್ಭದಲ್ಲಿ ನೆರೆದ ಗಣ್ಯರಿಗೆ ಸಾಂಕೇತಿಕವಾಗಿ ಸಿದ್ದಿ ತಳಿಯ ವಿಶೇಷ ಹಲಸಿನ ಸಸಿಗಳನ್ನು ವಿತರಿಸಲಾಯಿತು. ಶ್ರೀಮಠದ ದಿವಾನರಾದ ಮುರಳೀಧರ ಆಚಾರ್ಯ, ನಾಗರಾಜ ಆಚಾರ್ಯ, ಶ್ರೀಪಾದರ ಆಪ್ತ ಕಾರ್ಯದರ್ಶಿಗಳಾದ ಪ್ರಸನ್ನಾಚಾರ್ಯ ಮತ್ತಿತರರು ಉಪಸ್ಥಿತರಿದ್ದರು.