ಅವಶ್ಯಕತೆಯಿದ್ದರೆ ಎನ್‌ಡಿಆರ್‌ಎಫ್ ತಂಡ ಆಗಮನ: ಉಡುಪಿ ಜಿಲ್ಲಾಧಿಕಾರಿ ಕೂರ್ಮಾರಾವ್
ಉಡುಪಿ ನಗರದ ನೆರೆಪೀಡಿತ ಪ್ರದೇಶಗಳಿಗೆ ಎಸ್ಪಿ, ಡಿಸಿ ಭೇಟಿ
ಉಡುಪಿ, ಜು.6: ಉಡುಪಿ ನಗರದ ನೆರೆಪೀಡಿತ ಪ್ರದೇಶಗಳಿಗೆ ಉಡುಪಿ ಜಿಲ್ಲಾಧಿಕಾರಿ ಎಂ.ಕೂರ್ಮಾರಾವ್ ಹಾಗೂ ಜಿಲ್ಲಾ ಪೊಲೀಸ್ ಅಧೀಕ್ಷಕ ಅಕ್ಷಯ್ ಹಾಕೇ ಮಚ್ಚೀಂದ್ರ ಭೇಟಿ ನೀಡಿ ಅಗತ್ಯ ಕ್ರಮಗಳಿಗೆ ಸಂಬಂಧಪಟ್ಟ ಅಧಿಕಾರಿಗಳಿಗೆ ನಿರ್ದೇಶನ ನೀಡಿದರು.
ಬನ್ನಂಜೆ ಮೂಡನಿಡಂಬೂರು ಪ್ರದೇಶಕ್ಕೆ ಆಗಮಿಸಿದ ಜಿಲ್ಲಾಧಿಕಾರಿ, ಸ್ಥಳೀಯ ನಗರಸಭೆ ಸದಸ್ಯೆ ಸವಿತಾ ಹರೀಶ್‌ರಾಂ, ತಹಶೀಲ್ದಾರ್ ಎಸ್.ರವಿ ಅಂಗಡಿ, ನಗರ ಪೊಲೀಸ್ ಠಾಣಾ ನಿರೀಕ್ಷಕ ಮಂಜಪ್ಪ, ಉಡುಪಿ ಅಗ್ನಿಶಾಮಕದಳದ ಸಹಾಯಕ ಠಾಣಾಧಿಕಾರಿ ಮುಹಮ್ಮದ್ ಗೌಸ್, ಗ್ರಾಮ ಲೆಕ್ಕಿಗ ವಿದ್ಯಾ ಅವರಿಂದ ಮಾಹಿತಿಗಳನ್ನು ಪಡೆದುಕೊಂಡರು. ಬಳಿಕ ಸಂತ್ರಸ್ತರೊಂದಿಗೂ ಮಾತುಕತೆ ನಡೆಸಿದರು.
ತದನಂತರ ಮಾಧ್ಯಮದವರೊಂದಿಗೆ ಮಾತನಾಡಿದ ಜಿಲ್ಲಾಧಿಕಾರಿ, ಕಳೆದ ಐದು ದಿನಗಳಿಂದ ನಿರಂತರ ಮಳೆ ಸುರಿಯುತ್ತಿರುವುದರಿಂದ ಎಲ್ಲ ರೀತಿಯ ಮುನ್ನಚ್ಚರಿಕೆ ಕ್ರಮ ತೆಗೆದುಕೊಳ್ಳಲಾಗುತ್ತಿದೆ. ಜಲಾವೃತ್ತಗೊಂಡ ತಗ್ಗು ಪ್ರದೇಶ ಗಳಲ್ಲಿನ ಮನೆಗಳಿಂದ ಕುಟುಂಬಗಳನ್ನು ಅಗತ್ಯ ಬಿದ್ದರೆ ಸ್ಥಳಾಂತರಿಸಲು ಅಗ್ನಿಶಾಮಕದಳ ಹಾಗೂ ಗೃಹರಕ್ಷಕ ದಳ ಮತ್ತು ಸ್ಥಳೀಯಾಡಳಿತಗಳ ಕಾರ್ಯ ಪಡೆಗಳು ಸಜ್ಜಾಗಿವೆ. ಜಿಲ್ಲೆಯ ಇಂತಹ 9 ನೆರೆಪೀಡಿತ ಪ್ರದೇಶಗಳನ್ನು ಗುರುತಿಸಿ ಬೋಟುಗಳನ್ನು ವ್ಯವಸ್ಥೆ ಮಾಡಲಾಗಿದೆ ಎಂದರು.
ನಗರದ ಕಲ್ಸಂಕ ಬೈಲಕೆರೆ, ಬನ್ನಂಜೆ ಮೂಡನಿಡಂಬೂರು ಸಹಿತ ಕೆಲವು ತಗ್ಗು ಪ್ರದೇಶಗಳಲ್ಲಿ ಜಲಾವೃತ್ತಗೊಂಡಿದ್ದು, ಮುಂಜಾಗ್ರತಾ ಕ್ರಮವಾಗಿ ಜನರನ್ನು ಮನವೊಲಿಸಿ ಎತ್ತರ ಪ್ರದೇಶಕ್ಕೆ ಕರೆದುಕೊಂಡು ಹೋಗುವ ಕಾರ್ಯಾಚರಣೆ ನಡೆಸಲಾಗಿದೆ. ಕೆಲವರು ಸಂಬಂಧಿಕರ ಮನೆಗಳಿಗೆ ಮತ್ತು ಇನ್ನು ಕೆಲವರು ಜಿಲ್ಲಾಡಳಿತದಿಂದ ವ್ಯವಸ್ಥೆ ಮಾಡಲಾದ ಕಾಳಜಿ ಕೇಂದ್ರಗಳಲ್ಲಿ ಸುರಕ್ಷಿತವಾಗಿ ದ್ದಾರೆ. ಜಿಲ್ಲೆಯಲ್ಲಿ ಗ್ರಾಮೀಣ ಪ್ರದೇಶಗಳಲ್ಲಿಯೂ ಅಧಿಕಾರಿಗಳು, ಜನಪ್ರತಿಧಿ ಗಳು ಎಲರ್ಟ್ ಆಗಿದ್ದಾರೆ ಎಂದು ಅವರು ತಿಳಿಸಿದರು.
ರಾಷ್ಟ್ರೀಯ ಹಾಗೂ ರಾಜ್ಯ ವಿಪತ್ತು ನಿರ್ವಹಣಾ ಪಡೆಗಳು ನಮ್ಮ ಸಂಪರ್ಕ ದಲ್ಲಿದ್ದು, ಮಂಗಳೂರಿನಲ್ಲಿರುವ ಈ ತಂಡಗಳು ಅವಶ್ಯಕತೆ ಇದ್ದರೆ ಕೂಡಲೇ ಸ್ಪಂದಿಸಲಿದೆ. ಇದರೊಂದಿಗೆ ಸ್ಥಳೀಯವಾಗಿ ಕೆಲವು ಪ್ರದೇಶಗಳಲ್ಲಿ ಮೀನುಗಾರರರು ಹಾಗೂ ಸ್ಥಳೀಯ ಮಟ್ಟದಲ್ಲಿ ತರಬೇತಿ ಪಡೆದ ಆಪ್ತಮಿತ್ರರು ಕೂಡ ಈ ಕಾರ್ಯಾಚರಣೆಯ.ಲ್ಲಿ ತೊಡಗಿಸಿಕೊಳ್ಳುತ್ತಿದ್ದಾರೆ ಎಂದರು.
ಅದೇ ರೀತಿ ಎಸ್ಪಿ ಅಕ್ಷಯ್ ಹಾಕೇ ಮಚ್ಚೀಂದ್ರ ಕಲ್ಸಂಕ, ಬೈಲಕೆರೆ, ಕೊಡವೂರು ಮೊದಲಾದವರು ಜಲಾವೃತ್ತ ಪ್ರದೇಶಗಳಿಗೆ ಭೇಟಿ ನೀಡಿ ರಕ್ಷಣಾ ಕಾರ್ಯಾಚರಣೆ ಬಗ್ಗೆ ಪರಿಶೀಲನೆ ನಡೆಸಿದರು. ಈ ಸಂದರ್ಭದಲ್ಲಿ ಹೆಚ್ಚುವರಿ ಎಸ್ಪಿ ಸಿದ್ಧಲಿಂಗಪ್ಪ, ಡಿವೈಎಸ್ಪಿ ದಿನಕರ ಮೊದಲಾದವರು ಹಾಜರಿದ್ದರು.
‘ಮಳೆಗೆ ಸಂಬಂಧಿಸಿದಂತೆ ಜಿಲ್ಲಾ ಉಸ್ತುವಾರಿ ಸಚಿವರು ಸಂಪರ್ಕಿಸಿ ಎಲ್ಲ ರೀತಿಯ ಮಾಹಿತಿಯನ್ನು ಪಡೆದುಕೊಂಡು ನಿರ್ದೇಶನ ನೀಡುತ್ತಿದ್ದಾರೆ. ಮಳೆಯಿಂದ ಹಾನಿ ಸಂಭವಿಸಿದ ಕುಟುಂಬಗಳಿಗೆ ತುರ್ತಾಗಿ ತಹಶೀಲ್ದಾರ್ ಹಂತದಲ್ಲೇ ಪರಿಹಾರ ನೀಡುವ ಕಾರ್ಯ ಮಾಡಲಾಗುತ್ತಿದೆ. ಇದಕ್ಕೆ ಯಾವುದೇ ಅನುದಾನದ ಕೊರತೆ ಇಲ್ಲ. ಹಾನಿ ಸಂಭವಿಸಿದ ಮನೆಗಳಿಗೆ ತಕ್ಷಣವೇ ಪರಿಹಾರ ನೀಡಲಾಗುವುದು’
-ಕೂರ್ಮಾರಾವ್, ಜಿಲ್ಲಾಧಿಕಾರಿ, ಉಡುಪಿ