ಬಕ್ರೀದ್ ಹಿನ್ನೆಲೆ: ದ.ಕ. ಜಿಲ್ಲಾಧಿಕಾರಿ ನೇತೃತ್ವದ ಸಮಿತಿ ಸಭೆ
ಮಂಗಳೂರು: ದ.ಕ.ಜಿಲ್ಲೆಯಲ್ಲಿ ಜೂ.29ರಂದು ನಡೆಯುವ ಬಕ್ರೀದ್ ಹಬ್ಬದ ಆಚರಣೆಯ ಸಂದರ್ಭ ಜಾನುವಾರುಗಳನ್ನು ಅನಧಿಕೃತವಾಗಿ ವಧೆ ಮಾಡುವ ಮತ್ತು ಜಾನುವಾರುಗಳನ್ನು ಅಕ್ರಮವಾಗಿ ಸಾಗಾಣಿಕೆ ಮಾಡುವುದನ್ನು ತಡೆಗಟ್ಟುವ ಸಲುವಾಗಿ ದ.ಕ.ಜಿಲ್ಲಾಧಿಕಾರಿ ಮುಲ್ಲೈ ಮುಹಿಲನ್ ನೇತೃತ್ವದಲ್ಲಿ ಸೋಮವಾರ ಜಿಲ್ಲಾಧಿಕಾರಿಯ ಕಚೇರಿಯಲ್ಲಿ ಜಿಲ್ಲಾ ಮಟ್ಟದ ಸಮಿತಿ ಸಭೆ ನಡೆಯಿತು.
ಬಕ್ರೀದ್ ಹಬ್ಬದ ವೇಳೆ ಕಾನೂನು ಸುವ್ಯವಸ್ಥೆ ಹಾಗೂ ಶಾಂತಿಗೆ ಭಂಗ ಬಾರದ ರೀತಿಯಲ್ಲಿ ಕಾರ್ಯನಿರ್ವಹಿಸಬೇಕು.ಪ್ರತಿಯೊಂದು ಇಲಾಖೆಗಳು ಸಮನ್ವಯ ಸಾಧಿಸಬೇಕು. ಅನಧಿಕೃತ ಜಾನುವಾರು ಸಾಗಾಣಿಕೆ ಕಂಡುಬಂದಲ್ಲಿ 112ಕ್ಕೆ ಕರೆ ಮಾಡಿ ಪೊಲೀಸ್ ಇಲಾಖೆಗೆ ಮಾಹಿತಿ ನೀಡಲು ಮತ್ತು ಮಾಹಿತಿದಾರರ ವಿವರವನ್ನು ಗೌಪ್ಯವಾಗಿಡಬೇಕು ಎಂದು ಜಿಲ್ಲಾಧಿಕಾರಿ ಸೂಚಿಸಿದರು.
ಜಾನುವಾರು ಸಾಗಾಣಿಕೆ ಪರವಾನಿಗೆಯ ಆನ್‌ಲೈನ್ ತಂತ್ರಾಂಶದ ಮಾಹಿತಿಯನ್ನು ಪೊಲೀಸ್ ಇಲಾಖೆಯೊಂದಿಗೆ ಹಂಚಿಕೊಂಡು ಅನಧಿಕೃತ ಜಾನುವಾರು ಸಾಗಾಣಿಕೆ ತಡೆಗಟ್ಟಲು ಜಿಲ್ಲಾಧಿಕಾರಿ ಸೂಚಿಸಿದರು.
ಸಭೆಯಲ್ಲಿ ಪೊಲೀಸ್ ಉಪಾಯುಕ್ತ ಅಂಶುಕುಮಾರ್, ಜಿಲ್ಲಾ ಎಸ್ಪಿ ಸಿಬಿ ರಿಷ್ಯಂತ್, ಮಹಾನಗರ ಪಾಲಿಕೆ ಆಯುಕ್ತ ರವಿಕುಮಾರ್ ಎಂ, ದ.ಕ.ಜಿಪಂ ಉಪ ಕಾರ್ಯದರ್ಶಿ ಕೆ. ಆನಂದ ಕುಮಾರ್, ಪಶುಪಾಲನಾ ಇಲಾಖೆಯ ಉಪ ನಿರ್ದೇಶಕ ಡಾ. ಅರುಣ್ ಕುಮಾರ್ ಶೆಟ್ಟಿ ಎನ್., ವಾಯು ಮಾಲಿನ್ಯ ನಿಯಂತ್ರಣ ಮಂಡಳಿಯ ಅಧಿಕಾರಿ ಡಾ. ರವಿ ಡಿ.ಆರ್ ಮತ್ತಿತರರು ಉಪಸ್ಥಿತರಿದ್ದರು.