ಮುಸ್ಲಿಂ ವಸತಿ ಶಾಲೆಯಲ್ಲಿ ಬ್ಯಾರಿ ಸಾಹಿತ್ಯ ಕಮ್ಮಟ
ದೇರಳಕಟ್ಟೆ, ಜೂ.25: ಬ್ಯಾರಿ ಲೇಖಕರು ಮತ್ತು ಕಲಾವಿದರ ಕೂಟ (ಮೇಲ್ತೆನೆ) ಇದರ ವತಿಯಿಂದ ಅಸೈ ಮದಕ ಮುಸ್ಲಿಂ ವಸತಿ ಶಾಲೆಯಲ್ಲಿ ಬ್ಯಾರಿ ಸಾಹಿತ್ಯ ಕಮ್ಮಟ ಮತ್ತು ಎಸೆಸೆಲ್ಸಿ ಪರೀಕ್ಷೆಯಲ್ಲಿ ಶೇ.100 ಫಲಿತಾಂಶ ದಾಖಲಿಸಲು ಶ್ರಮಿಸಿದ ವಸತಿ ಶಾಲೆಯ ಪ್ರಾಂಶುಪಾಲರಿಗೆ ಸನ್ಮಾನ ಕಾರ್ಯಕ್ರಮವು ಇತ್ತೀಚೆಗೆ ಜರುಗಿತು.
ಮದನಿ ಪಿಯು ಕಾಲೇಜಿನ ನಿವೃತ್ತ ಪ್ರಾಂಶುಪಾಲ ಇಸ್ಮಾಯೀಲ್ ಟಿ. ಕಾರ್ಯಕ್ರಮ ಉದ್ಘಾಟಿಸಿದರು. ಬಳಿಕ ಮಾತನಾಡಿದ ಅವರು ಪಠ್ಯದೊಂದಿಗೆ ಪಠ್ಯೇತರ ಚಟುವಟಿಕೆಗಳಾದ ಕ್ರೀಡೆ, ಸಾಹಿತ್ಯಕ್ಕೂ ವಿದ್ಯಾರ್ಥಿಗಳು ಹೆಚ್ಚು ಒತ್ತು ಕೊಡಬೇಕಿದೆ ಎಂದರು.
ಸಂಪನ್ಮೂಲ ವ್ಯಕ್ತಿಯಾಗಿದ್ದ ಪತ್ರಕರ್ತ ಹಂಝ ಮಲಾರ್ ಸಾಹಿತ್ಯ ಕಮ್ಮಟ ನಡೆಸಿಕೊಟ್ಟರು. ವಸತಿ ಶಾಲೆಯ ಪ್ರಾಂಶುಪಾಲ ಉಮರಬ್ಬ ಅವರನ್ನು ಕಾರ್ಯಕ್ರಮದಲ್ಲಿ ಸನ್ಮಾನಿಸಲಾಯಿತು.
ಅಭಿನಂದನಾ ಭಾಷಣ ಮಾಡಿದ ಮೇಲ್ತೆನೆಯ ಗೌರವಾಧ್ಯಕ್ಷ ಆಲಿಕುಂಞಿ ಪಾರೆ ರಾಜ್ಯದ ಬೇರೆ ಬೇರೆ ಜಿಲ್ಲೆಗಳ ಮಕ್ಕಳನ್ನು ಒಂದೇ ಕಡೆ ಸೇರಿಸಿ ಅವರ ಅಭಿರುಚಿಗೆ ತಕ್ಕಂತೆ ವ್ಯವಹರಿಸಿಕೊಂಡು ವಿದ್ಯೆ ಕಲಿಸುವುದು ಸುಲಭದ ಮಾತಲ್ಲ. ಆದರೆ ಇಲ್ಲಿನ ಪ್ರಾಂಶುಪಾಲರು, ಶಿಕ್ಷಕ ವೃಂದವು ಮಕ್ಕಳು ಕಲಿಯಲು ಹೆಚ್ಚಿನ ಪ್ರೋತ್ಸಾಹ ನೀಡಿದ್ದಲ್ಲದೆ ಎಸೆಸೆಲ್ಸಿ ಪರೀಕ್ಷೆಯಲ್ಲಿ ಶೇ.100 ಫಲಿತಾಂಶ ದಾಖಲಿಸುವಂತೆ ಮಾಡಿರುವುದು ಶ್ಲಾಘನೀಯ ಎಂದರು.
ಮೇಲ್ತೆನೆಯ ಮಾಜಿ ಅಧ್ಯಕ್ಷ ಮುಹಮ್ಮದ್ ಭಾಷಾ ನಾಟೆಕಲ್, ಸಿದ್ದೀಖ್ ಎಸ್. ರಾಝ್, ಶಿಕ್ಷಕರಾದ ಮಂಜುನಾಥ್ ಭಟ್, ಹಸೀನಾ, ಹನೀಫ್, ಸಿಬ್ಬಂದಿಗಳಾದ ಅಬ್ದುಲ್ ಮಜೀದ್, ಓಸ್ವಾರ್ಲ್ಡ್ ಪಿಂಟೋ, ಉಪಸ್ಥಿತರಿದ್ದರು.
ಮೇಲ್ತೆನೆಯ ಅಧ್ಯಕ್ಷ ಬಶೀರ್ ಕಲ್ಕಟ್ಟ ಅಧ್ಯಕ್ಷತೆ ವಹಿಸಿದ್ದರು. ಮಾಜಿ ಅಧ್ಯಕ್ಷ ಬಶೀರ್ ಅಹ್ಮದ್ ಕಿನ್ಯ ಸ್ವಾಗತಿಸಿದರು. ಶಿಕ್ಷಕ ಮುಹಮ್ಮದ್ ಹನೀಫ್ ವಂದಿಸಿದರು. ಮಾಜಿ ಅಧ್ಯಕ್ಷ ಮನ್ಸೂರ್ ಅಹ್ಮದ್ ಸಾಮಣಿಗೆ ಕಾರ್ಯಕ್ರಮ ನಿರೂಪಿಸಿದರು.