ಸುರತ್ಕಲ್ ಪೊಲೀಸ್ ಠಾಣೆಯಲ್ಲಿ ಸಾರ್ವಜನಿಕರಿಂದ ಅಹವಾಲು ಸ್ವೀಕಾರ ಸಭೆ
ಸುರತ್ಕಲ್, ಜೂ.24: ಮಂಗಳೂರು ನಗರ ಪೊಲೀಸ್ ಇಲಾಖೆಯ ವತಿಯಿಂದ ಸಹಾಯಕ ಪೊಲೀಸ್ ಆಯುಕ್ತ ಅನ್ಶು ಕುಮಾರ್ ( ಕಾನೂನು ಮತ್ತು ಸುವ್ಯವಸ್ಥೆ ವಿಭಾಗ) ಅವರ ಅಧ್ಯಕ್ಷತೆಯಲ್ಲಿ ಸುರತ್ಕಲ್ ಪೊಲೀಸ್ ಠಾಣೆಯಲ್ಲಿ ಸಾರ್ವಜನಿಕರಿಂದ ಅಹವಾಲು ಸ್ವೀಕಾರ ಸಭೆ ಶನಿವಾರ ನಡೆಯಿತು.
ಸಭೆಯಲ್ಲಿ ಖಾಸಗಿ ಬಸ್‌ಗಳಿಂದಾಗುತ್ತಿರುವ ಸಮಸ್ಯೆಗಳು, ಮಾದಕ ವ್ಯಸನಿಗಳ ಉಪಟಳ, ರಸ್ತೆಗಳಲ್ಲಿ ಹಂಮ್ಸ್ ಹಾಕುವ ಕುರಿತು ಮತ್ತು ಅಪ್ರಾಪ್ತರು ಮತ್ತು ಕಾಲೇಜು ವಿದ್ಯಾರ್ಥಿಗಳು ಅಪಾಯಕಾರಿ ರೀತಿಯಲ್ಲಿ ದ್ವಿಕಚ್ರ ವಾಹನಗಳನ್ನು ಚಲಾಯಿಸುವ ಕುರಿತು ಸಾರ್ವಜನಿಕರು ಸಹಾಯಕ ಪೊಲೀಸ್ ಆಯುಕ್ತರ ಗಮನ ಸೆಳೆದರು.
ಸಭೆಯಲ್ಲಿ ಮಾತನಾಡಿದ ಹೊಸಬೆಟ್ಟು ನಿವಾಸಿ ನಿಶ್ಮಿತಾ ಅವರು, ಬಸ್‌ಗಳು ಕರ್ಕಶ ಹಾರ್ನ್ ಮಾಡುವುದು ಮತ್ತು ಬಸ್ ಚಾಲಕರು ಮತ್ತು ನಿರ್ವಾಹಕರು ಪ್ರಾಯಾಣಿಕರ ಜೊತೆ ದರ್ಪ ಪ್ರದರ್ಶಿಸುವ ಕುರಿತು ದೂರಿದರು. ಜೊತೆಗೆ ಎಲ್ಲಾ ಬಸ್‌ಗಳಿಗೆ ಒಂದೇ ರೀತಿಯ ಸಣ್ಣ ಪ್ರಮಾಣದ ಹಾರ್ನ್‌ಗಳನ್ನು ಅಳವಡಿಸಬೇಕು ಮತ್ತು ಎಲ್ಲಾ ಅವಾಂತರಗಳಿಗೆ ಕಾರಣವಾಗುವ ಬಸ್ ಟೈಮಿಂಗನ್ನು ತೆಗೆದು ಹಾಕಬೇಕೆಂದು ಆಗ್ರಹಿಸಿದರು. ಅಲ್ಲದೆ, ಬಸ್ ಚಾಲಕರು ಮತ್ತು ನಿರ್ವಾಹಕರಿಂದ ಪ್ರಯಾಣಿಕರಿಗೆ ಆಗುವ ತೊಂದರೆಗಳಿಗೆ ತಕ್ಷಣ ಸ್ಪಂದಿಸುವ ನಿಟ್ಟಿನಲ್ಲಿ ದೂರು ನೀಡಲು ಮತ್ತು ತಕ್ಷಣ ಸ್ಪಂದಿಸಲು ಪೊಲೀಸ್ ಇಲಾಖೆ ಅತೀ ಶಿಘ್ರ ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿದರು.
ಇದಕ್ಕೆ ಸಭೆಯಲ್ಲಿದ್ದ ಸಾರ್ವಜನಿಕರು ಸಹಮತ ವ್ಯಕ್ತ ಪಡಿಸಿದ ಬೆಂಬಲ ಸೂಚಿಸಿದರು.
ಈ ವೇಳೆ ಉತ್ತರಿಸಿದ ಡಿಸಿಪಿ ಅವರು, ಅಂತಹಾ ಸಂದರ್ಭಗಳು ಎದುರಾದಲ್ಲಿ ಬಸ್‌ನ ರಿಜಿಸ್ಟ್ರೇಷನ್ ನಂಬರ್ ಹಾಗೂ ನಡೆದ ಘಟನೆಯ ಕುರಿತು ಬೀಟ್ ಮಟ್ಟದಲ್ಲಿ ಮಾಡಲಾಗಿರುವ ವಾಟ್ಸಾಪ್ ಗ್ರೂಪ್ ಅಥವಾ ಪೊಲೀಸ್ ನಿರೀಕ್ಷಕರ ವಾಟ್ಸಾಪ್ ಸಂಖ್ಯೆಗೆ ಕಳುಹಿಸಬೇಕು ಎಂದ ಅವರು, ಟ್ರಾಫಿಕ್ ಪೊಲೀಸರಿಗೆ ಈ ಕುರಿತು ಶೀಘ್ರ ಕ್ರಮ ಕೈಗೊಳ್ಳಲು ಸೂಚನೆ ನೀಡಲಾಗುವುದು ಎಂದು ನುಡಿದರು.
ಮಾರಿಗುಡಿ ಪ್ರದೇಶದಲ್ಲಿ ತೀರಾ ತಿರುವುವೊಂದಿದ್ದು, ಆ ಭಾಗದಲ್ಲಿ ಅಪಘಾತಗಳು ಹೆಚ್ಚಾಗಿ ಸಂಭಸಿಸುತ್ತಿವೆ. ಈ ಕುರಿತು ವಾಹನ ಸವಾರರಿಗೆ ಮಾರ್ಗದರ್ಶನ ನೀಡುವ ಸೈನ್ ಬೋರ್ಡ್‌ಗಳನ್ನು ಅಳವಡಿಸಬೇಕು. ಮತ್ತು ಪೇಟೆ ಪ್ರದೇಶಗಳಲ್ಲಿ ಎಲ್ಲಾ ವಾಹನಗಳಿಗೆ ವೇಗದ ಪರಿಮಿತಿ 20-30 ಕಿ. ಮೀ. ಅಳವಡಿಸಬೇಕು. ಎಲ್ಲಾ ಬಸ್‌ಗಳ ಒಳಗೆ ಮತ್ತು ಹೊರಗೆ ಕಡ್ಡಾಯವಾಗಿ ಸಿಸಿ ಕ್ಯಾಮರಾಗಳನ್ನು ಅಳವಡಿಸಲು ಕ್ರಮ ಕೈಗೊಳ್ಳಬೇಕೆಂದು ಮನೀಶ್ ಕುಮಾರ್ ಆಗ್ರಹಿಸಿದರು.
ಕೃಷ್ಣಾಪುರ ನಿವಾಸಿ ಹಿದಾಯತ್ ಎಂಬವರು ಮಾತನಾಡಿ, ಕೃಷ್ಣಾಪುರದಲ್ಲಿ ಖಾಸಗಿ ಶಾಲೆ ಕಾಲೆಜುಗಳಿದ್ದು, ಅಪ್ರಾಪ್ತರು ಒಂದು ದ್ವಿಚಕ್ರ ವಾಹನದಲ್ಲಿ ಮೂರು ಮಂದಿ ತೆರಳುವುದು ಅಪಾಯಕಾರಿ ಚಾಲನೆ ಮಾಡುವುದು ಗಮನಕ್ಕೆ ಬರುತ್ತಿದೆ. ಇಲ್ಲಿನ ಲಂಡನ್ ಪಾರ್ಕ್ ಬಳಿ ಮದ್ಯದ ಬಾಟಲಿಗಳ ಸಹಿತ ಕಸಗಳನ್ನು ಎಸೆಯಲಾಗುತ್ತಿದ್ದು, ಈ ಕುರಿತು ಕ್ರಮ ವಹಿಸಬೇಕೆಂದು ಮನವಿ ಮಾಡಿಕೊಂಡರು.
ಸುರತ್ಕಲ್ - ಕಾನ ಮತ್ತು ಕಾನ- ಜನತಾಕಾಲನಿಗೆ ಹೊಸ ರಸ್ತೆ ನಿರ್ಮಾಣ ಮಾಡಲಾಗಿದ್ದು, ಇಲ್ಲಿ ಹಂಮ್ಸ್‌ಗಳಿಲ್ಲದೆ ವಾಹನ ಸವಾರರು, ಲಾರಿ, ಟ್ಯಾಂಕರ್‌ಗಳು ಬೇಕಾ ಬಿಟ್ಟಿಯಾಗಿ ಸಂಚರಿಸುತ್ತವೆ. ಜೊತೆಗೆ ರಸ್ತೆ ನಿರ್ಮಾಣ ಮಾಡಿರುವ ಗುತ್ತಿಗೆ ದಾರರು ಚರಂಡಿ ವ್ಯವಸ್ಥೆಯನ್ನೂ ಮಾಡಿಲ್ಲ. ಹಾಗಾಗಿ ಮಳೆ ನೀರು ರಸ್ತೆಯಲ್ಲೇ ಹರಿಯುತ್ತಿದೆ. ಇದರಿಂದಾಗಿ ದ್ವಿಚಕ್ರ ಸವಾರರು ಮತ್ತು ಶಾಲೆ ಕಾಲೇಜುಗಳಿಗೆ ತೆರಳುವ ವಿದ್ಯಾರ್ಥಿಗಳು, ಕೆಲಸ ಕಾರ್ಯಗಳಿಗೆ ತೆರಳುವ ಮಹಿಳೆಯರು ರಸ್ತೆಯಲ್ಲಿ ನಡೆಯುದೇ ಒಂದು ಸವಾಲಾಗಿ ಪರಿಣಮಿಸಿದೆ. ಒಂದೆಡೆ ವಾಹನಗಳ ಅಪರಿಮಿತ ಓಡಾಟ ಇನ್ನೊಂದೆಡೆ ರಸ್ತೆಯಲ್ಲೆ ಹರಿಯುವ ಕೆಸರು ನೀರಿಗೆ ಶಿಘ್ರ ಪರಿಹಾರ ನೀಡಬೇಕೆಂದು ಕಾನ ನಿವಾಸಿ ಸಲಾಂ ಕಾನ ಒತ್ತಾಯಿಸಿದರು.
ಈ ವೇಳೆ ಉತ್ತರಿಸಿದ ಸುರತ್ಕಲ್ ಪೊಲೀಸ್ ನಿರೀಕ್ಷಕ ಮಹೇಶ್ ಪ್ರಸಾದ್, ಕಾನ- ಜನತಾ ಕಾಲನಿ ರಸ್ತೆಯಲ್ಲಿ ವಸತಿ ಪ್ರದೇಶ ಮತ್ತು ಆದ್ಯತೆಯನ್ನು ಗಮನಿಸಿ ಹಂಮ್ಸ್ ಗಳನ್ನು ನಿರ್ಮಿಸಲಾಗುವುದು. ಸುರತ್ಕಲ್- ಕಾನ ರಸ್ತೆ ಪೂರ್ಣವಾಗಿಲ್ಲದ ಕಾರಣ ಅಲ್ಲಿಯ ವರೆಗೂ ಕಾಯಬೇಕಿದೆ. ಅಲ್ಲಿಯ ವರೆಗೆ ವಾಹನಗಳ ಮಿತಿ ಮೀರಿದ ಸಂಚಾರಕ್ಕೆ ಸೂಕ್ತ ಕ್ರಮಕೈಗೊಳ್ಳಲಾಗುವುದು ಎಂದು ನುಡಿದರು.
"ಕೃಷ್ಣಾಪುರ ಜೂನಿಯರ್ ಕಾಲೇಜು ಬಳಿ ಗಂಜಾ ವ್ಯಸನಿಗಳ ಕಾಟ ಹೆಚ್ಚಾಗುತ್ತಿದೆ. ಈ ಕುರಿತು ಮಸೀದಿಗಳ ಮಟ್ಟದಲ್ಲಿ ಹರ್ಷ ಅವರು ಕಮಿಷನರ್ ಆಗಿದ್ದ ಸಮಯದಲ್ಲಿ ಸಂಘಟನೆಯೊಂದನ್ನು ರೂಪಿಸಿಕೊಂಡು ಕಾರ್ಯಪ್ರವತ್ತರಾಗಿದ್ದೆವು. ಬಳಿಕ ಅಧಿಕಾರಿಗಳ ಬದಲಾವಣೆಯ ಬಳಿಕ ಎಲ್ಲವೂ ನಿಂತಿದೆ. ಈ ಭಾಗದಲ್ಲಿ ಕೇರಳ ರಾಜ್ಯದ ನೋಂದಣಿಯ ಕಾರುಗಳು ಹೆಚ್ಚಾಗಿ ಓಡಾಡುತ್ತಿದ್ದು, ಪೊಲೀಸರು ಕ್ರಮ ವಹಿಸಬೇಕು ಎಂದು ಕೃಷ್ಣಾಪುರ ನಿವಾಸಿ ಅದ್ದು ಎಂಬವರು ಪೊಲೀಸ್ ಉಪ ಆಯುಕ್ತರ ಬಳಿ ಬಿನ್ನಹಿಸಿಕೊಂಡರು".
ಸರಕಾರಿ ಬಸ್‌ಗಳು ಹಿರಿಯ ನಾಗರಿಕರು, ಮಹಿಳೆಯರು ಮತ್ತು ವಿದ್ಯಾರ್ಥಿಗಳಿಗೆ ಭದ್ರತೆಯ ದೃಷ್ಟಿಯಿಂದ ಉತ್ತಮ ಸಾರಿಗೆ ವ್ಯವಸ್ಥೆಯಾಗಿದ್ದು, ಸುರತ್ಕಲ್ ಭಾಗದಲ್ಲಿ ಸರಕಾರಿ ಬಸ್‌ಗಳನ್ನು ಹೆಚ್ಚಸಬೇಕೆಂದು ಮನವಿ ಮಾಡಿಕೊಂಡರು. ಇದಕ್ಕೆ ಉತ್ತರಿಸಿದ ಉಪ ಪೊಲೀಸ್ ಆಯುಕ್ತರು, ಸಾರಿಗೆ ನಿಗಮದ ಅಧಿಕಾರಿಗಳೊಂದಿಗೆ ಚರ್ಚಿಸಿ ಕ್ರಮ ವಹಿಸಲಾಗುವುದು. ಜೊತೆಗೆ ಸಾರ್ವಜನಿಕರೂ ಸಾರಿಗೆ ಇಲಾಖೆಯ ಗಮನಕ್ಕೆ ತರಬೇಕೆಂದು ಹೇಳಿದರು.