ಮುಂದುವರಿದ ಭಾರೀ ಮಳೆ: ಕುಂದಾಪುರದಲ್ಲಿ ನೀರಿಗೆ ಬಿದ್ದು ಇಬ್ಬರು ಮೃತ್ಯು
ತುಂಬಿ ಹರಿಯುತ್ತಿರುವ ನದಿಗಳು
ಉಡುಪಿ, ಜು.5: ಉಡುಪಿ ಜಿಲ್ಲೆಯಾದ್ಯಂತ ಇಂದೂ ಸಹ ಭಾರೀ ಮಳೆ ಮುಂದುವರಿದಿದೆ. ಇದೇ ಮೊದಲ ಬಾರಿಗೆ ಜಿಲ್ಲೆಯ ಎಲ್ಲಾ ನದಿಗಳು ತುಂಬಿ ಹರಿಯುತಿದ್ದು, ಗಾಳಿಯೊಂದಿಗೆ ಮಳೆಯೂ ಇದೇ ಪ್ರಮಾಣದಲ್ಲಿ ಮುಂದುವರಿದರೆ ತಗ್ಗು ಪ್ರದೇಶಗಳೆಲ್ಲಾ ನೀರಿನಿಂದ ತುಂಬಿ ಅಲ್ಲಲ್ಲಿ ನೆರೆಯ ಪರಿಸ್ಥಿತಿ ತಲೆದೋರುವ ಸಾಧ್ಯತೆ ಅಧಿಕವಾಗಿದೆ.
ಜಿಲ್ಲೆಯಲ್ಲಿ ಇದೇ ಮೊದಲ ಬಾರಿ ಒಂದೇ ದಿನದಲ್ಲಿ ಸರಾಸರಿ 12.01 ಸೆ.ಮೀ. ಮಳೆಯಾಗಿದೆ. ಬೈಂದೂರಿನಲ್ಲಿ ಅತ್ಯಧಿಕ 15.16ಸೆ.ಮಿ. (151.6ಮಿ.ಮೀ) ಮಳೆಯಾದರೆ ಉಡುಪಿಯಲ್ಲಿ 13.1ಸೆ.ಮಿ. ಹಾಗೂ ಕಾಪುವಲ್ಲಿ 13.07 ಸೆ.ಮೀ. ಮಳೆಯಾದ ವರದಿ ಬಂದಿದೆ. ಉಳಿದಂತೆ ಕಾರ್ಕಳದಲ್ಲಿ 12.43ಸೆ.ಮೀ., ಹೆಬ್ರಿಯಲ್ಲಿ 11.66ಸೆ.ಮೀ., ಬ್ರಹ್ಮಾವರದಲ್ಲಿ 10.69ಸೆ.ಮಿ. ಹಾಗೂ ಕುಂದಾಪುರದಲ್ಲಿ 9.77ಸೆ.ಮೀ. ಮಳೆಯಾದ ವರದಿಗಳು ಬಂದಿವೆ.
ಭಾರೀ ಮಳೆಯೊಂದಿಗೆ ರಸ್ತೆಯ ಪಕ್ಕದ ಕೆರೆಗೆ ಅಕಸ್ಮಿಕ ಬಿದ್ದು, ಕಾಲುಸಂ ದಾಟುವ ವೇಳೆ ಆಯತಪ್ಪಿ ಬಿದ್ದು ನೀರಿನಲ್ಲಿ ಮುಳುಗಿ ಮೃತಪಟ್ಟ ಎರಡು ಘಟನೆಗಳು ಕುಂದಾಪುರದಿಂದ ವರದಿಯಾಗಿದೆ.
ಮಂಗಳವಾರ ಸಂಜೆ 5:45ರ ಸುಮಾರಿಗೆ ಎಡಮೊಗೆ ಗ್ರಾಮದ ತೊಪ್ಲುಮನೆಯ ಶೇಷಾದ್ರಿ ಐತಾಳ್ (71) ಎಂಬವರು ತೋಟಕ್ಕೆ ತೆರಳಲೆಂದು ಮನೆಯ ಬಳಿ ಇರುವ ಕುಬ್ಜಾ ನದಿಗೆ ಅಡ್ಡಲಾಗಿ ಅಡಿಕೆ ತೋಟದೊಳಗೆ ಹಾಕಿಕೊಂಡಿದ್ದ ತಾತ್ಕಾಲಿಕ ಮರದ ಕಾಲುಸಂಕ ದಾಟುವ ವೇಳೆ ಅಕಸ್ಮಿಕವಾಗಿ ಆಯತಪ್ಪಿ ನದಿಗೆ ಬಿದ್ದು, ನೀರಿನಲ್ಲಿ ಮುಳುಗಿ ಮೃತಪಟ್ಟಿದ್ದಾರೆ. ಎಂಟು ಅಡಿ ಆಳದ ಹರಿಯುವ ನೀರಿನ ಮುಂಡ್ಕನಓಲೆ ಪೊದೆಯ ನೀರಿನಲ್ಲಿ ಮುಳುಗಿದ್ದ ಐತಾಳ್‌ರ ಮೃತದೇಹವನ್ನು ರಾತ್ರಿ 10:45ರ ಸಮಾರಿಗೆ ಮೇಲಕ್ಕೆತ್ತಲಾಯಿತು.
(ಶೇಷಾದ್ರಿ ಐತಾಳ್)
ಅದೇ ರೀತಿ ಮಂಗಳವಾರ ರಾತ್ರಿ 11:30ರ ಸುಮಾರಿಗೆ ಕುಂದಾಪುರ ತಾಲೂಕಿನ ಉಳ್ತೂರು ಗ್ರಾಮದ ದಿನಕರ ಶೆಟ್ಟಿ (53) ಎಂಬವರು ಮನೆಗೆ ಬರುವ ಸಮಯದಲ್ಲಿ ಬೈಕ್ ಸ್ಕಿಡ್ ಆಗಿ ರಸ್ತೆಯ ಪಕ್ಕದಲ್ಲಿರುವ ಕೆರೆಗೆ ಬಿದ್ದು ಮೃತಪಟ್ಟಿರುವುದಾಗಿ ಕುಂದಾಪುರ ತಾಲೂಕು ತಹಶೀಲ್ದಾರರು ತಿಳಿಸಿದ್ದಾರೆ.
ಮಣೂರಿನ ಹೊಟೇಲ್ ಒಂದರಲ್ಲಿ ಕ್ಯಾಶಯರ್ ಆಗಿರುವ ದಿನಕರ ಶೆಟ್ಟಿ ಬೇಳೂರು ಗ್ರಾಮದ ಮೊಗೆಬೆಟ್ಟಿನವರು. ಇವರು ನಿನ್ನೆ ಕೆಲಸ ಮುಗಿಸಿ ಹೆಂಡತಿಯ ಮನೆಯಾದ ಉಳ್ತೂರು ಗ್ರಾಮದ ಮಲ್ಯಾಡಿಗೆ ತೆರಳುತಿದ್ದಾಗ ಮನೆಯ ಬಳಿ ಇರುವ ಕೆರೆ ಮಳೆಯಿಂದ ತುಂಬಿದ್ದು ಪಕ್ಕದ ಮಣ್ಣಿನ ರಸ್ತೆಗೂ ನೀರು ಹರಿಯುತಿದ್ದು ಕತ್ತಲಲ್ಲಿ ಅರಿಯದೇ ನೀರಿನ ಹೊಂಡಕ್ಕೆ ಬೈಕ್ ಸಮೇತ ಬಿದ್ದಿದ್ದಾಗಿ ತಿಳಿದುಬಂದಿದೆ.
15 ಮನೆ ಹಾನಿ ಪ್ರಕರಣ ವರದಿ: ದಿನದ ಭಾರೀ ಗಾಳಿ-ಮಳೆಗೆ ಜಿಲ್ಲೆಯಾದ್ಯಂತ ಸುಮಾರು 15 ಮನೆಗಳಿಗೆ ಭಾಗಶ:ದಿಂದ ಪೂರ್ಣ ಪ್ರಮಾಣದಲ್ಲಿ ಹಾನಿಯಾಗಿರುವ ಕುರಿತೂ ವರದಿಗಳು ಬಂದಿವೆ. ಕುಂದಾಪುರ ತಾಲೂಕಿನಲ್ಲಿ ಆನಗಳ್ಳಿಯ ಜ್ಯೋತಿ ವಿ.ಶೆಟ್ಟಿ, ಕುಂದಾಪುರದ ಹರೀಶ್ ಹಾಗೂ ಕುಳಂಜೆಯ ಪದ್ಮಾವತಿ ಎಂಬವರ ಮನೆಗಳಿಗೆ ಹಾನಿಯಾಗಿದ್ದು ಸುಮಾರು ಒಂದು ಲಕ್ಷ ರೂ.ಗಳಷ್ಟು ನಷ್ಟದ ಅಂದಾಜು ಮಾಡಲಾಗಿದೆ.
ಬ್ರಹ್ಮಾವರ ತಾಲೂಕಿನಲ್ಲಿ ನಾಲ್ಕು ಪ್ರಕರಣಗಳು ವರದಿಯಾಗಿವೆ. ಹಂದಾಡಿ ಗ್ರಾಮದ ಬಾಲಕೃಷ್ಣ ನಾಯಕ್, ಹನೇಹಳ್ಳಿ ಗ್ರಾಮದ ಬಾಬು ಪೂಜಾರಿ, ವಾರಂಬಳ್ಳಿ ಗ್ರಾಮದ ಗಣೇಶ್ ಪ್ರಭು ಹಾಗೂ ಆರೂರು ಗ್ರಾಮದ ಚಂದ್ರಶೇಖರ್ ನಾಯ್ಕ್ ಇವರ ಮನೆಗಳಿಗೆ ಹಾನಿಯಾಗಿದ್ದು ಸುಮಾರು ಎರಡು ಲಕ್ಷ ರೂ. ನಷ್ಟವಾಗಿರುವ ಬಗ್ಗೆ ಮಾಹಿತಿ ಬಂದಿವೆ.
ಕಾರ್ಕಳ ತಾಲೂಕಿನ ಇನ್ನಾ ಗ್ರಾಮದ ಸುರೇಶ್ ಆಚಾರ್ಯರ ಮನೆ ಮೇರೆ ಮರಬಿದ್ದು 20ಸಾವಿರ ರೂ.ನಷ್ಟವಾದರೆ, ಬೈಂದೂರು ತಾಲೂಕಿನಿಂದಲೂ ನಾಲ್ಕು ಮನೆಗಳಿಗೆ ಹಾನಿಯಾದ ವರದಿ ಬಂದಿದೆ. ಯಡ್ತರೆ ಗ್ರಾಮದ ಹೂವಯ್ಯ ಮರಾಟಿ ಮನೆಗೆ 45ಸಾವಿರ ರೂ., ಬೀಚಮ್ಮ ಶೆಡ್ತಿ ಮನೆಗೆ 40,000ರೂ., ಕಿರಿಮಂಜೇಶ್ವರ ಗ್ರಾಮದ ರಮೇಶ್ ಪೂಜಾರಿ ಮನೆಗೆ 35 ಸಾವಿರ ಹಾಗೂ ಕಂಬದಕೋಣೆ ಗ್ರಾಮದ ರಘುರಾಮ ಶೆಟ್ಟಿ ಮನೆಗೆ 60,000ರೂ. ನಷ್ಟವಾದ ಅಂದಾಜು ಮಾಡಲಾಗಿದೆ.
ಕಾಪು ತಾಲೂಕಿನಲ್ಲಿ ತೆಂಕ ಗ್ರಾಮದ ಗಣಪತಿ ಎಂಬವರ ಮನೆ ಮೇಲೆ ಮರಬಿದ್ದು 20ಸಾವಿರ ರೂ.ಗಳಷ್ಟು ಹಾನಿಯಾಗಿದ್ದರೆ, ಉಡುಪಿ ತಾಲೂಕಿನ ಕುಕ್ಕೆಹಳ್ಳಿ ಗ್ರಾಮದ ಕೊರಗ ನಾಯ್ಕ ಹಾಗೂ ಪಡುತೋನ್ಸೆ ಗ್ರಾಮದ ಇಸಾಕ್ ಎಂಬವರ ಮನೆಗೆ ಭಾಗಶ: ಹಾನಿಯಾಗಿ ಒಟ್ಟು 60,000ರೂ.ಗಳಷ್ಟು ನಷ್ದ ಅಂದಾಜು ಮಾಡಲಾಗಿದೆ.
ತೋಟ, ಕೊಟ್ಟಿಗೆಗಳಿಗೆ ಹಾನಿ: ಎರಡು ದಿನಗಳ ಭಾರೀ ಗಾಳಿ- ಮಳೆ ಯಿಂದ ಕುಂದಾಪುರ ತಾಲೂಕು 74 ಉಳ್ಳೂರು ಗ್ರಾಮದ ಸಿದ್ಧ ಎಂಬವರ ಅಡಿಕೆ ತೋಟ ಭಾಗಶ: ಹಾನಿಗೊಂಡಿದೆ. ಶಂಕರನಾರಾಯಣ ಗ್ರಾಮದ ಲಲಿತಾ ಗಾಣಿಗ ಎಂಬುವವರ ಹಾಗೂ ಬ್ರಹ್ಮಾವರ ತಾಲೂಕು ಹಾವಂಜೆಯ ರತಿ ಶೆಡ್ತಿ ಎಂಬವರ ಜಾನುವಾರು ಕೊಟ್ಟಿಗೆಗಳಿಗೂ ಭಾಗಶ: ಹಾನಿಯಾಗಿ ಒಟ್ಟು 40,000ರೂ.ನಷ್ಟವಾಗಿದೆ.
ಆರೆಂಜ್ ಅಲರ್ಟ್: ಗುರುವಾರ ಮತ್ತು ಶುಕ್ರವಾರ ಕರಾವಳಿ ಜಿಲ್ಲೆಗಳಲ್ಲಿ ಆರೆಂಜ್ ಅಲರ್ಟ್‌ನ್ನು ಘೋಷಿಸಲಾಗಿದೆ. ಮುಂದಿನ 24 ಗಂಟೆಗಳಲ್ಲಿ ಬಿರುಗಾಳಿಯ ಸಹಿತ ಮಳೆ ಸುರಿಯುವ ನಿರೀಕ್ಷೆ ಇದೆ. ಗಂಟೆಗೆ 45ರಿಂದ 55 ಕಿ.ಮೀ. ವೇಗದ ಗಾಳಿ ಬೀಸಲಿದ್ದು, ಸಮುದ್ರವು ಪ್ರಕ್ಷುಬ್ಧವಾಗಿರಲಿದೆ. ಎತ್ತರದ ಅಲೆಗಳು ಬರುವ ಸಾಧ್ಯತೆ ಇದ್ದು, ಮೀನುಗಾರರು ಸಮುದ್ರಕ್ಕೆ ತೆರಳದಂತೆ ಸೂಚಿಸಲಾಗಿದೆ.
ಸಂಪರ್ಕ ರಸ್ತೆಗೆ ಹಾನಿ: ಬ್ರಹ್ಮಾವರ ತಾಲೂಕು ಕೋಡಿಬೆಂಗ್ರೆ ಲೈಟ್‌ಹೌಸ್ ಸಮೀಪದಲ್ಲಿ ಸಮುದ್ರ ಕೊರೆತ ಕಂಡುಬಂದಿದೆ. ಸಮುದ್ರದ ಪಕ್ಕದಲ್ಲಿ ನಿರ್ಮಿಸಲಾದ ಸಂಪರ್ಕ ರಸ್ತೆ ಬಹುಪಾಲು ಸಮುದ್ರದ ಪಾಲಾಗಿದೆ. ಮಳೆ ಹಾಗೂ ಕಡಲಬ್ಬರ ಮುಂದುವರಿದರೆ ಇನ್ನಷ್ಟು ಅಪಾಯ ಎದುರಾಗುವ ಸಾಧ್ಯತೆ ಕಂಡುಬಂದಿದೆ.
ಸತತ ಮಳೆಯಿಂದ ಗಂಗೊಳ್ಳಿ ಹಾಗೂ ನಾಡಗುಡ್ಡೆಯಂಗಡಿ ಗ್ರಾಮಗಳಲ್ಲಿ ಅಲ್ಲಲ್ಲಿ ಮರಗಳು ಬಿದ್ದು ಅನೇಕ ವಿದ್ಯುತ್ ಕಂಬಗಳು ಧರಾಶಾಹಿಯಾಗಿವೆ. ಇದರಿಂದ ಪರಿಸರದಲ್ಲಿ ಕೆಲವು ಗಂಟೆಗಳ ಕಾಲ ವಿದ್ಯುತ್ ಪೊರೈಕೆಯಲ್ಲಿ ವ್ಯತ್ಯಯ ಉಂಟಾಗಿತ್ತು.
ಬೈಂದೂರು-ಶಿರೂರು ನಡುವೆ ಗುಡ್ಡ ಕುಸಿತ ಸಂಭವಿಸುತಿದ್ದು, ಇದು ಮುಂದುವರಿದರೆ ರಾಷ್ಟ್ರೀಯ ಹೆದ್ದಾರಿಯಲ್ಲಿ ವಾಹನಗಳ ಸಂಚಾರಕ್ಕೆ ಅಡಚಣೆ ಉಂಟಾಗುವ ಸಾಧ್ಯತೆಯೂ ಕಂಡುಬಂದಿದೆ.