ಉಡುಪಿ ಜಿಲ್ಲೆಯಲ್ಲಿ ಹವಾಮಾನಾಧಾರಿತ ಬೆಳೆವಿಮೆ ಯೋಜನೆ ಜಾರಿಗೊಳಿಸಲು ಆಗ್ರಹ
ಸಾಂದರ್ಭಿಕ ಚಿತ್ರ
ಉಡುಪಿ, ಜೂ.28: ಫಸಲ್ ಬಿಮಾ ವಿಮಾ ಯೋಜನೆಯ ಹವಾಮಾನ ಆಧಾರಿತ ಬೆಳೆಗಳ ವಿಮಾ ಅವಧಿಯು ಕೊನೆಗೊಳ್ಳುತ್ತಿದ್ದರೂ, ಇನ್ನೂ ವಿಮೆ ನವೀಕರಣ ಪ್ರಕ್ರಿಯೆ ಪ್ರಾರಂಭವಾಗಿಲ್ಲ. ಮುಂದಿನ ಸಂಭವನೀಯ ಅತಿವೃಷ್ಟಿ ನಷ್ಟ ಪರಿಹಾರದಿಂದ ರೈತರು ವಂಚಿತರಾಗುವ ಆತಂಕ ಎದುರಾಗಿದೆ ಎಂದು ಉಡುಪಿ ಜಿಲ್ಲಾ ಕೃಷಿಕ ಸಮಾಜದ ಅಧ್ಯಕ್ಷ ಅಶೋಕ್ ಕುಮಾರ್ ಕೊಡ್ಗಿ ರಾಜ್ಯ ಸರಕಾರಕ್ಕೆ ಸಲ್ಲಿಸಿದ ಮನವಿಯಲ್ಲಿ ತಿಳಿಸಿದ್ದಾರೆ.
ಪ್ರಸ್ತುತ ಬೆಲೆಯಲ್ಲಿ, ಮುಂಗಾರು ಆರಂಭವಾಗಿದ್ದರೂ ನಿರೀಕ್ಷಿತ ಪ್ರಮಾಣ ದಲ್ಲಿ ಮಳೆ ಬಿದ್ದಿಲ್ಲ. ವಾಡಿಕೆಗಿಂತ ಕಡಿಮೆ ಮಳೆಯಾಗಿದೆ. ಆದರೆ ಮುಂದಿನ ದಿನಗಳಲ್ಲಿ ಭಾರೀ ಮಳೆ ಬೀಳುವ ಸಾಧ್ಯತೆಗಳಿವೆ. ಬಹುವಾರ್ಷಿಕ ಬೆಳೆಗಳ ವಿಮೆ ಅವಧಿ ಇದೇ ಜೂ.30ಕ್ಕೆ ಕೊನೆಗೊಳ್ಳಲಿದೆ. ಆದರೆ ಇದುವರೆಗೂ ಅರ್ಜಿ ಸಲ್ಲಿಕೆ ಪ್ರಕ್ರಿಯೆಗೆ ತೋಟಗಾರಿಕೆ ಇಲಾಖೆಯ ಮುಖಾಂತರ ಚಾಲನೆ ಪಡೆದು ಕೊಂಡಿಲ್ಲ. ವಿಮಾ ಅವಧಿಯ ಮುಕ್ತಾಯದ ಅನಂತರ ಹಾಗೂ ನವೀಕರಣದ ನಡುವಿನ ದಿನಗಳಲ್ಲಿ, ಅತಿವೃಷ್ಟಿ ಸಂಭವಿಸಿದ್ದರೆ, ಜಿಲ್ಲೆ ಹಾಗೂ ಆರ್ಥಿಕ ನಷ್ಟ ಸಂಭವಿಸಿದಲ್ಲಿ, ರೈತರಿಗೆ ಉಂಟಾಗಬಹುದಾದ ನಷ್ಟಕ್ಕೆ ಯಾವ ರೀತಿ ಪರಿಹಾರ ವಿಮೆಯಿಂದಾಗಿ ಸಿಗಲಿದೆ ಎನ್ನುವ ಪ್ರಶ್ನೆ ರೈತರಲ್ಲಿ ಮೂಡಿದೆ.
ಸಾಮಾನ್ಯವಾಗಿ ಹವಾಮಾನಾಧರಿತ ಬೆಳೆಗಳಿಗೆ ಜೂನ್ ಪ್ರಾರಂಭದಲ್ಲಿ ಅಧಿಸೂಚನೆ ಪೂರ್ಣಗೊಂಡು ವಿಮಾ ನವೀಕರಣಕ್ಕೆ ಅರ್ಜಿ ಕರೆಯಲಾಗುತ್ತಿತ್ತು. ಆದರೆ ಈ ಬಾರಿ ಜೂ.27 ಕಳೆದಿದ್ದರೂ ಇದುವರೆಗೆ ನೋಟಿಫಿಕೇಶನ್ ಆಗಿಲ್ಲ. ಜೂನ್ 27 ಕಳೆದರೂ ಇದುವರೆಗೆ ನೋಟಿಫಿಕೇಶನ್ ಆಗಿಲ್ಲ. ಜೂ.20 ರಂದು ಕೇವಲ ವಾರ್ಷಿಕ ಬೆಳಗಳ ವಿಮಾ ಕಂತು ಪಾವತಿಸಲು ರಾಜ್ಯ ಸರ್ಕಾರದಿಂದ ಅಧಿಸೂಚನೆ ಹೊರಡಿಸಲಾಗಿದ್ದು ಅಡಿಕೆ ಹಾಗೂ ಕಾಳುಮೆಣಸು ಬೆಳೆಗಳಿಗೆ ವಿಮಾ ಕಂತು ಚಾಲನೆಯಾಗದೇ ಇರುವ ಬಗ್ಗೆ ರೈತರಲ್ಲಿ ಅನುಮಾನ ಮೂಡುತ್ತಿದೆ ಎಂದು ಅವರು ಮನವಿಯಲ್ಲಿ ತಿಳಿಸಿದ್ದಾರೆ.