ನಿಗದಿತ ಅವಧಿಯಲ್ಲೇ ಸಂಗೀತ, ನೃತ್ಯ, ತಾಳವಾದ್ಯ ಪರೀಕ್ಷೆ ನಡೆಸಲು ಆಗ್ರಹ
ಸಂಗೀತ, ನೃತ್ಯ, ತಾಳವಾದ್ಯ ಸಂಸ್ಥೆಗಳು ಹಾಗೂ ಶಿಕ್ಷಕರ ಜತೆ ಸಂವಾದ
ಮಂಗಳೂರು, ಜು.16: ಸಂಗೀತ, ನೃತ್ಯ, ತಾಳವಾದ್ಯ ಪರೀಕ್ಷೆಯನ್ನು ಎಪ್ರಿಲ್ ಅಥವಾ ಮೇಯಲ್ಲೇ ನಡೆಸುವಂತೆ ಕರ್ನಾಟಕ ಕರಾವಳಿ ನೃತ್ಯಕಲಾ ಪರಿಷತ್‌ನ ಪದಾಧಿಕಾರಿಗಳು ಮೈಸೂರಿನ ಡಾ.ಗಂಗೂಬಾಯಿ ಹಾನಗಲ್ ಸಂಗೀತ ಮತ್ತು ಪ್ರದರ್ಶನಕ ಕಲೆಗಳ ವಿಶ್ವವಿದ್ಯಾನಿಲಯದ ಕುಲಪತಿ ಯನ್ನು ಆಗ್ರಹಿಸಿದ್ದಾರೆ.
ಸಂಗೀತ, ನೃತ್ಯ, ತಾಳವಾದ್ಯ ಸಂಸ್ಥೆಗಳು ಹಾಗೂ ಶಿಕ್ಷಕರ ಜತೆ ನಗರದ ಹಂಪನಕಟ್ಟೆ ವಿವಿ ಕಾಲೇಜು ಸಭಾಂಗಣದಲ್ಲಿ ವಿವಿಯ ಕುಲಪತಿ ಪ್ರೊ.ನಾಗೇಶ್ ವಿ.ಬೆಟ್ಟಕೋಟೆ ಶುಕ್ರವಾರ ನಡೆಸಿದ ಸಂವಾದ ವೇಳೆ ಈ ಆಗ್ರಹ ವ್ಯಕ್ತವಾಗಿದೆ.
ಕರ್ನಾಟಕ ಸೆಕೆಂಡರಿ ಎಜುಕೇಶನ್ ಬೋರ್ಡ್ ಪ್ರತಿ ವರ್ಷ ಎಪ್ರಿಲ್/ಮೇಯಲ್ಲಿ ಸಂಗೀತ, ನೃತ್ಯ, ತಾಳವಾದ್ಯ ಪರೀಕ್ಷೆಗಳನ್ನು ನಡೆಸುತ್ತಿತ್ತು. ಈ ವರ್ಷ ದಿಂದ ಈ ಪರೀಕ್ಷೆ ನಡೆಸುವ ಜವಾಬ್ದಾರಿಯನ್ನು ಡಾ.ಗಂಗೂಬಾಯಿ ಹಾನಗಲ್ ವಿವಿಗೆ ಸರಕಾರ ವಹಿಸಿದೆ. ಹಾಗಾಗಿ ಈ ಬಾರಿಯ ಪರೀಕ್ಷೆಯನ್ನು ಸುಗಮ ಹಾಗೂ ಸುಸೂತ್ರವಾಗಿ ನಡೆಸುವ ಸಲುವಾಗಿ ಕಲಾ ಸಂಸ್ಥೆ ಹಾಗೂ ಶಿಕ್ಷಕರೊಂದಿಗೆ ಸಂವಾದ ನಡೆಸಲಾಗುತ್ತಿದೆ ಎಂದು ಪ್ರೊ.ನಾಗೇಶ್ ಬೆಟ್ಟಕೋಟೆ ಹೇಳಿದರು.
ಈ ವರ್ಷ ಪರೀಕ್ಷೆಗಳು ಸೆಕೆಂಡರಿ ಎಜುಕೇಶನ್ ಬೋರ್ಡ್‌ನ ಪಠ್ಯಕ್ರಮದಲ್ಲೇ ನಡೆಯಲಿದೆ. ಮುಂದಿನ ವರ್ಷದಿಂದ ವಿವಿ ನಿಯಮಗಳಿಗೆ ಅನುಗುಣ ವಾದ ಪಠ್ಯಕ್ರಮವನ್ನು ಸೀನಿಯರ್, ಜೂನಿಯರ್, ವಿದ್ವತ್ ಪೂರ್ವ ಹಾಗೂ ವಿದ್ವತ್ ಪರೀಕ್ಷೆಗಳಿಗೆ ಅಳವಡಿಸಬೇಕಾಗುತ್ತದೆ. ಇದಕ್ಕಾಗಿ ತಜ್ಞರ ಸಮಿತಿ ರಚಿಸಿ ಪಠ್ಯಗಳ ಬದಲಾವಣೆ ಮಾಡಲಾಗುವುದು. ಇದು ವಿವಿ ನಡೆಸುವ ಪರೀಕ್ಷೆಯಾದ ಕಾರಣ ಇದಕ್ಕೆ ಎಲ್ಲ ಕಡೆಯೂ ಮಹತ್ವ ಇದೆ ಎಂದು ವಿವಿಯ ಕುಲಪತಿ ಪ್ರೊ.ನಾಗೇಶ್ ವಿ.ಬೆಟ್ಟಕೋಟೆ ಹೇಳಿದರು.
ಸದ್ಯದ ಮಟ್ಟಿಗೆ ನವೆಂಬರ್/ಡಿಸೆಂಬರ್‌ನಲ್ಲಿ ಸಂಗೀತ, ನೃತ್ಯ ಪರೀಕ್ಷೆ ನಡೆಸಲು ಚಿಂತನೆ ನಡೆಸಲಾಗಿದೆ ಎಂದು ಪ್ರೊ.ನಾಗೇಶ್ ಬೆಟ್ಟಕೋಟೆ ಹೇಳಿ ದರು. ಇದಕ್ಕೆ ಪ್ರತಿಕ್ರಿಯಿಸಿದ ನೃತ್ಯ ಶಿಕ್ಷಕರು ಹಾಗೂ ಪರಿಷತ್‌ನ ಪದಾಧಿಕಾರಿಗಳು, ಈ ಹಿಂದಿನಂತೆ ಎಪ್ರಿಲ್/ ಮೇ ತಿಂಗಳಲ್ಲಿ ಸಂಗೀತ, ನೃತ್ಯ ಪರೀಕ್ಷೆ ನಡೆಸುವುದು ಸೂಕ್ತ. ಈಗ ಪರೀಕ್ಷೆ ನಡೆಸಿದರೆ ಶಾಲಾ ಕಾಲೇಜು ವಿದ್ಯಾರ್ಥಿಗಳ ಪಠ್ಯ ಚಟುವಟಿಕೆಗಳಿಗೆ ಬಹಳ ತೊಂದರೆಯಾಗಲಿದೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.
ನೃತ್ಯಕಲಾ ಪರಿಷತ್ ಅಧ್ಯಕ್ಷ ವಿದ್ವಾನ್ ಯು.ಕೆ.ಪ್ರವೀಣ್ ಪ್ರಾಸ್ತಾವಿಕವಾಗಿ ಮಾತನಾಡಿದರು. ಉಪಾಧ್ಯಕ್ಷೆ ವಿದುಷಿ ರಾಜಶ್ರೀ ಉಳ್ಳಾಲ್ ಸ್ವಾಗತಿಸಿ ದರು. ವಿದ್ವಾನ್ ಚಂದ್ರಶೇಖರ ನಾವಡ ವಂದಿಸಿದರು.