ಅಂಗನವಾಡಿ ನೌಕರರ ಸಮಸ್ಯೆ ಪರಿಹಾರಕ್ಕೆ ಆಗ್ರಹಿಸಿ ಧರಣಿ
ಕುಂದಾಪುರ: ಆರೋಗ್ಯ ಇಲಾಖೆಯ ರಾಷ್ಟ್ರೀಯ ಆರೋಗ್ಯ ಅಭಿಯಾನ ಕಾರ್ಯಕ್ರಮದಡಿ ರಾಜ್ಯಾದ್ಯಂತ ಆರೋಗ್ಯ ಪೌಷ್ಠಕ ಸಮೀಕ್ಷೆ ನಡೆಸಲು ಅಂಗನವಾಡಿ ಕಾರ್ಯಕರ್ತೆಯರನ್ನು ಒತ್ತಾಯಿಸುವುದನ್ನು ಕೈ ಬಿಡುವಂತೆ ಹಾಗೂ ಹಲವು ಬೇಡಿಕೆಗಳನ್ನು ಮತ್ತು ಸಮಸ್ಯೆಗಳನ್ನು ಬಗೆಹರಿಸು ವಂತೆ ಆಗ್ರಹಿಸಿ ಕುಂದಾಪುರ ತಾಲೂಕು ಅಂಗನವಾಡಿ ಕಾರ್ಯಕರ್ತೆಯರ ಮತ್ತು ಸಹಾಯಕಿಯ ಸಂಘದ ವತಿಯಿಂದ ಸೋಮವಾರ ಕುಂದಾಪುರದಲ್ಲಿ ಧರಣಿ ನಡೆಸಲಾಯಿತು.
ಉಡುಪಿ ಜಿಲ್ಲಾ ಅಂಗನವಾಡಿ ಕಾರ್ಯಕರ್ತೆಯರ ಮತ್ತು ಸಹಾಯಕಿಯ ಸಂಘದ ಅಧ್ಯಕ್ಷೆ ಫಿಲೊಮಿನಾ ಫೆರ್ನಾಂಡಿಸ್ ಮಾತನಾಡಿ, ಅಂಗನವಾಡಿ ಕೇಂದ್ರಗಳಲ್ಲಿ ಕೆಲಸ ನಿರ್ವಹಿಸುತ್ತಿರುವ ನಮಗೆ ಈವರೆಗೂ ಯಾವುದೇ ಭದ್ರತೆಗಳಿಲ್ಲದೆ ಅತಂತ್ರ ಪರಿಸ್ಥಿತಿಯಲ್ಲಿದ್ದೇವೆ. ಸರಕಾರ ಖಾಯಂ ನೌಕರ ರಾಗಿ ಮಾಡಿದರೆ ಈ ಎಲ್ಲಾ ಸಮಸ್ಯೆ ಏಕಕಾಲದಲ್ಲಿ ಬಗೆಹರಿಸಬಹುದು ಎಂದರು.
ಬೆಲೆ ಏರಿಕೆಯಿಂದ ೧೧೫೦೦ರೂ. ಗೌರವಧನ ಸಾಲುವುದಿಲ್ಲ. ಕಾರ್ಯಕರ್ತೆ ಯರ ಮಕ್ಕಳ ವಿದ್ಯಾಭ್ಯಾಸಕ್ಕಾಗಿ ಸಾಲ ಮಾಡಿಕೊಂಡು ತೀರಿಸಲಾಗದ ಪರಿಸ್ಥಿತಿ ಯಲ್ಲಿದ್ದು ನಿಗದಿತ ಸಮಯಕ್ಕೂ ಗೌರವ ಧನ ನೀಡದೆ ಇರುವುದರಿಂದ ಮನೆ ನಿರ್ವಹಿಸಲು ಕಷ್ಟ. ಆದ್ದರಿಂದ ಕನಿಷ್ಠ ಕೂಲಿ ೨೧ ಸಾವಿರ ರೂ. ಜಾರಿ ಮಾಡ ಬೇಕು ಎಂದು ಅವರು ಒತ್ತಾಯಿಸಿದರು.
ಆರೋಗ್ಯ ಇಲಾಖೆಯ ರಾಷ್ಟ್ರೀಯ ಆರೋಗ್ಯ ಅಭಿಯಾನ ಕಾರ್ಯ ಕ್ರಮದಡಿ ರಾಜ್ಯಾದ್ಯಾಂತ ಆರೋಗ್ಯ ಪೌಷ್ಠಕ ಸಮೀಕ್ಷೆ ನಡೆಸಲು ಅಂಗನವಾಡಿ ಕಾರ್ಯಕರ್ತೆಯರನ್ನು ಅಧಿಕಾರಿಗಳು ಒತ್ತಾಯಿಸುವುದನ್ನು ನಿಲ್ಲಿಸಬೇಕು. ಅಂಗನವಾಡಿ ಕಾರ್ಯಕರ್ತೆಯರು ಯಾವುದೇ ಕಾರಣಕ್ಕೂ ಸರ್ವೇ ಮಾಡುವುದಿಲ್ಲ. ಇಲಾಖಾಧಿಕಾರಿಗಳು ಸರ್ವೇ ಮಾಡದೆ ಇದ್ದಲ್ಲಿ ಗೌರವ ಧನ ತಡೆ ಹಿಡಿಯುವ ಆದೇಶವನ್ನು ಮಾಡಿದ್ದು ತಕ್ಷಣ ಆದೇಶವನ್ನು ಹಿಂಪಡೆಯಬೇಕು ಎಂದು ಅವರು ಆಗ್ರಹಿಸಿದರು.
ಕುಂದಾಪುರ ಶಾಸ್ತ್ರೀ ವೃತ್ತದಿಂದ ಮಳೆಯ ನಡುವೆಯೂ ಪ್ರತಿಭಟನಕಾರರು ಮಿನಿವಿಧಾನಸೌಧದ ತನಕ ತೆರಳಿ ತಹಶಿಲ್ದಾರ್ ಶೋಭಾಲಕ್ಷ್ಮೀ ಅವರಿಗೆ ಮನವಿ ಸಲ್ಲಿಸಿದರು. ಸಂಘದ ಜಿಲ್ಲಾ ಕಾರ್ಯದರ್ಶಿ ಬೇಬಿ ಶೆಟ್ಟಿ ಕರ್ಜೆ, ಕುಂದಾಪುರ ತಾಲೂಕು ಕಾರ್ಯದರ್ಶಿ ನಾಗರತ್ನ ಹವಾಲ್ದಾರ್, ಕೋಶಾಧಿಕಾರಿ ಶೋಭಾ, ಬ್ರಹ್ಮಾವರ ತಾಲೂಕು ಕಾರ್ಯದರ್ಶಿ ನಯನಾ ಪೇತ್ರಿ ಮೊದಲಾದವರು ಉಪಸ್ಥ್ಝಿತರಿದ್ದರು.