ದ.ಕ. ಜಿಲ್ಲೆ: ತಗ್ಗಿದ ಮಳೆಯ ಪ್ರಭಾವ
ಮಂಗಳೂರು, ಜು.9: ದ.ಕ.ಜಿಲ್ಲೆಯಲ್ಲಿ ಮಳೆಯ ಅಬ್ಬರ ಕಡಿಮೆಯಾಗಿದೆ. ರವಿವಾರ ಸಾಧಾರಣ ಮಳೆಯಾಗಿದೆ.
ಕೆಲವು ದಿನಗಳಿಂದ ಕಣ್ಮರೆಯಾಗಿದ್ದ ಬಿಸಿಲು ಮಂಗಳೂರಿನಲ್ಲಿ ಬೆಳಗ್ಗೆ ಸ್ವಲ್ಪ ಹೊತ್ತು ಕಾಣಿಸಿಕೊಂಡಿತ್ತು. ಜಿಲ್ಲಾಡಳಿತ ಇಂದು ಯೆಲ್ಲೊ ಯೆಲರ್ಟ್ ಘೋಷಣೆ ಮಾಡಿದ್ದು, ಜಿಲ್ಲೆಯಲ್ಲಿ 24 ಗಂಟೆಯ ಅವಧಿಯಲ್ಲಿ 56 ಮಿ.ಮೀ ಮಳೆಯಾಗಿದೆ. ಇದು ವಾಡಿಕೆ ಮಳೆಗಿಂತ ಜಾಸ್ತಿಯಾಗಿದೆ(36.7 ಮಿ.ಮೀ)
ಕಳೆದ ಎಪ್ರಿಲ್‌ನಿಂದ ಜು 9ರ ತನಕ 1,071.5 ಮಿ.ಮೀ ಮಳೆಯಾಗಿದೆ. ಕಳೆದ ವರ್ಷಕ್ಕೆ ಹೋಲಿಸಿದರೆ ಮಳೆಯ ಪ್ರಮಾಣ ಕಡಿಮೆ ಈ ಅವಧಿಯಲ್ಲಿ ಕಳೆದ ವರ್ಷ 1,522.2 ಮಳೆಯಾಗಿತ್ತು.
ಮಳೆಯಿಂದಾಗಿ ಈ ವರೆಗೆ 5 ಮಂದಿ ಸಾವಿಗೀಡಾಗಿದ್ದಾರೆ. ಕಳೆದ 24 ಗಂಟೆಗಳ ಅವಧಿಯಲ್ಲಿ ಓರ್ವ ಬಲಿಯಾಗಿದ್ದಾನೆ. 4 ಮಂದಿಗೆ ಗಾಯವಾಗಿದೆ. ಒಂದು ಮನೆಗೆ ಭಾಗಶಃ ಹಾನಿಯಾಗಿದೆ.
24 ಗಂಟೆಗಳ ಅವಧಿಯಲ್ಲಿ ಮೆಸ್ಕಾಂನ 26 ಕಂಬಗಳು ಮುರಿದಿದ್ದು, 1.4 ಕಿ.ಮೀ ಲೈನಿಗೆ ಹಾನಿಯಾಗಿವೆ. ಈ ತನಕ 2,107 ಕಂಬಳು, 48 ಟ್ರಾನ್ಸ್‌ಫಾರ್ಮರ್, 79.54 ಕಿ.ಮೀ ಲೈನಿಗೆ ಹಾನಿಯಾಗಿದೆ ಎಂದು ಅಧಿಕೃತ ಮೂಲಗಳು ತಿಳಿಸಿವೆ. 12 ಸೇತುವೆ, 3,545 ಕಿ.ಮೀ ಎಂಡಿಆರ್ ರಸ್ತೆ, 7,485 ಎಸ್‌ಎಚ್ ರಸ್ತೆಗೆ ಹಾನಿಯಾಗಿದೆ.
ನೀರಿನ ಕಣಿಗೆ ಕಾಲು ಜಾರಿ ಬಿದ್ದು ವ್ಯಕ್ತಿಯೊಬ್ಬರು ಮೃತಪಟ್ಟ ಘಟನೆ ಬಂಟ್ವಾಳ ತಾಲೂಕು ಪುಣಚ ಗ್ರಾಮದ ಪರಿಯಾಲ್ತಡ್ಕ ಎಂಬಲ್ಲಿ ಸಂಭವಿಸಿದೆ.
ಪರಿಯಾಲ್ತಡ್ಕದ ಎಂ.ಕೇಶವ ನಾಯ್ಕ(51) ಮೃತಪಟ್ಟವರು.
ಕೇಶವ ನಾಯ್ಕ ಶನಿವಾರ ರಾತ್ರಿ ತನ್ನ ಮನೆಯ ಕಡೆಗೆ ನಡೆದುಕೊಂಡು ಹೋಗುತ್ತಿರುವಾಗ ಮನೆಯ ಬಳಿಯಿರುವ ನೀರು ಹರಿಯುವ ಕಣಿ ದಾಟುತ್ತಿರುವಾಗ ಆಕಸ್ಮಿಕವಾಗಿ ಕಾಲು ಜಾರಿ ಬಿದ್ದು ಮೇಲೆ ಏಳಲು ಸಾಧ್ಯವಾಗದೆ ಮೃತಪಟ್ಟಿರುತ್ತಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಕೇಶವ ನಾಯ್ಕ ಮೃತಪಟ್ಟ ಘಟನೆ ರವಿವಾರ ಬೆಳಗ್ಗೆ ಬೆಳಕಿಗೆ ಬಂತು ಎನ್ನಲಾಗಿದೆ.
ಈ ಸಂಬಂಧ ಮೃತರ ಸಹೋದರ ಪುಣಚ ಗ್ರಾಮದ ಮಾಯಿಲ ಮೂಲೆ ನಿವಾಸಿ ರಾಮಣ್ಣ ನಾಯ್ಕ ಎಂಬವರು ವಿಟ್ಲ ಪೊಲೀಸರಿಗೆ ದೂರು ನೀಡಿದ್ದಾರೆ.
ಮಳೆಯಿಂದಾಗಿ ಸುಳ್ಯ ಗ್ರಾಮದ ಅಲೆಟ್ಟಿ ಎಂಬಲ್ಲಿ ಹೊಳೆಯ ನೀರಲ್ಲಿ ಕೊಚ್ಚಿ ಹೋಗಿದ್ದ ಕಾಸರಗೋಡಿನ ಹೊಸದುರ್ಗ ಚಿತ್ತಾರಿಕಾಲ್‌ನ ನಿವಾಸಿ ನಾರಾಯಣನ್(47) ಎಂಬವರ ಮೃತದೇಹ ರವಿವಾರ ಮಧ್ಯಾಹ್ನ ಪತ್ತೆಯಾಗಿದೆ.
ಜು.6ರಂದು ಸಂಜೆ 5:15ಕ್ಕೆ ನಾರಾಯಣನ್ ಹೊಳೆ ದಾಟುವಾಗ ನೀರಲ್ಲಿ ಹೊಚ್ಚಿ ಹೋಗಿದ್ದರು. ಘಟನೆ ನಡೆದ ಸ್ಥಳದಿಂದ 4 ಕಿ.ಮೀ ದೂರದಲ್ಲಿ ಮೃತದೇಹ ಪತ್ತೆಯಾಗಿರುವುದಾಗಿ ಪೊಲೀಸರು ತಿಳಿಸಿದ್ದಾರೆ.
ನಾಪತ್ತೆಯಾಗಿದ್ದ ನಾರಾಯಣನ್ ಇವರ ಪತ್ತೆಗೆ ಎಸ್‌ಡಿಆರ್‌ಎಫ್ ಮತ್ತು ಅಗ್ನಿಶಾಮಕದಳ, ಸ್ಥಳೀಯ ಈಜುಗಾರರ ತಂಡ ಮೂರು ದಿನಗಳಿಂದ ಶೋಧ ನಡೆಸಿತ್ತು.