ಅಪ್ರಾಪ್ತರ ಕೈಗೆ ವಾಹನ ನೀಡಬೇಡಿ : ಎಸಿಪಿ ಗೀತಾ ಕುಲಕರ್ಣಿ
ಮಂಗಳೂರು, ಜು.2: ಪೋಷಕರು ಅಪ್ರಾಪ್ತ ವಯಸ್ಸಿನ ಮಕ್ಕಳ ಕೈಗೆ ತಮ್ಮ ವಾಹನ ಕೊಡುವ ಮುನ್ನ ಅದರಿಂದಾಗುವ ಪರಿಣಾಮದ ಕುರಿತು ಯೋಚಿಸಬೇಕು. ವಾಹನ ಚಲಾಯಿಸಿ ಅದರಿಂದ ಅವಘಡ ಸಂಭವಿಸಿದರೆ ಅಥವಾ ಪೊಲೀಸರ ಕೈಗೆ ಸಿಕ್ಕಿಬಿದ್ದರೆ ಆರ್‌ಸಿ ಯಾರ ಹೆಸರಿನಲ್ಲಿದೆಯೋ ಅವರ ವಿರುದ್ಧ ಪ್ರಕರಣ ದಾಖಲು ಮಾಡಲಾಗುವುದು ಎಂದು ಸಂಚಾರ ವಿಭಾಗದ ಎಸಿಪಿ ಗೀತಾ ಕುಲಕರ್ಣಿ ಹೇಳಿದ್ದಾರೆ.
ಮಂಗಳೂರು ಕಮಿಷನರೇಟ್ ವ್ಯಾಪ್ತಿಯ ಜಪ್ಪಿನಮೊಗರಿನ ಮಂಗಳೂರು ದಕ್ಷಿಣ ಸಂಚಾರ ಠಾಣೆಯಲ್ಲಿ ರವಿವಾರ ನಡೆದ ‘ಅಪ್ರಾಪ್ತ ವಯಸ್ಸಿನ ವಾಹನ ಸವಾರರ ಹೆತ್ತವರಿಗೆ ಮಾಹಿತಿ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದರು.
ಕಳೆದ ವಾರ ಮೇರಿಹಿಲ್‌ನಲ್ಲಿ ಇಬ್ಬರು ಅಪ್ರಾಪ್ತ ವಯಸ್ಸಿನ ಬಾಲಕರು ಸ್ಕೂಟರ್ ಅಪಘಾತದಲ್ಲಿ ಮೃತಪಟ್ಟ ಘಟನೆಯ ಬಗ್ಗೆ ಉಲ್ಲೇಖಿಸಿದ ಅವರು, ಈ ಘಟನೆಗೆ ಸಂಬಂಧಿಸಿದಂತೆ ಸ್ಕೂಟರ್ ಚಲಾಯಿಸುತ್ತಿದ್ದ ಬಾಲಕನ ತಂದೆಯ ಮೇಲೆ ಕೇಸ್ ದಾಖಲಿಸಲಾಗಿದೆ. ಒಂದು ಕಡೆ ಮಗನನ್ನು ಕಳೆದುಕೊಂಡ ನೋವು, ಇನ್ನೊಂದು ಕಡೆ ಕೇಸ್ ಎರಡನ್ನೂ ಅನುಭವಿಸಬೇಕಾದ ಅನಿವಾರ್ಯತೆ ಹೆತ್ತವರಿಗೆ ಬಂದಿದೆ. ಹಾಗಾಗಿ ಮಕ್ಕಳಿಗೆ ವಾಹನ ಕೊಡುವ ಮುನ್ನ ಯೋಚನೆ ಮಾಡಬೇಕು ಎಂದರು.
ಈಗಾಗಲೇ ಶಾಲೆಗಳಿಗೆ ಭೇಟಿ ನೀಡಿ ಅಪ್ರಾಪ್ತರು ವಾಹನ ಚಲಾಯಿಸುವುದರಿಂದ ಆಗುವ ಸಮಸ್ಯೆಗಳ ಕುರಿತಂತೆ ವಿವರಿಸವ ಕೆಲಸಗಳು ಪೊಲೀಸ ರಿಂದ ನಡೆಯುತ್ತಿದೆ. ಅಪರಾಧ ತಡೆ ಮಾಸಾಚರಣೆ ಸಂದರ್ಭವೂ ಈ ಬಗ್ಗೆ ವಿವರಿಸಲಾಗುತ್ತಿದೆ ಎಂದು ಅವರು ಹೇಳಿದರು.
ಹೆತ್ತವರ ಮಾತು ಕೇಳುವಂತೆ ಮಕ್ಕಳನ್ನು ಬಾಲ್ಯದಿಂದಲೇ ಬೆಳೆಸಬೇಕು. ಒಂದು ವೇಳೆ ಮಾತು ಕೇಳುವುದೇ ಇಲ್ಲ ಎಂದಾದರೆ ಹತ್ತಿರದ ಪೊಲೀಸರಿಗೆ ಮಾಹಿತಿ ನೀಡಿದರೆ ಅವರು ಮನವೊಲಿಸುವ ಕೆಲಸ ಮಾಡಲಿದ್ದಾರೆ ಎಂದರು.
ಪೊಲೀಸ್ ನಿರೀಕ್ಷಕ ರಮೇಶ್ ಎಚ್.ಹಾನಾಪುರ ಅವರು ಮಾತನಾಡಿ, ಒಂದು ಪ್ರಾಣ ಹೋದರೆ ಮರಳಿ ಪಡೆಯಲು ಸಾಧ್ಯವಿಲ್ಲ. ಆದ್ದರಿಂದ ದುರ್ಘ ಟನೆಗಳು ನಡೆಯುವ ಮುನ್ನವೇ ತಡೆಯುವ ನಿಟ್ಟಿನಲ್ಲಿ ನಾವು ಯೋಚಿಸಬೇಕು. ಸಾರ್ವಜನಿಕರೂ ಈ ನಿಟ್ಟಿನಲ್ಲಿ ಪೊಲೀಸರೊಂದಿಗೆ ಸಹಕರಿಸಬೇಕು ಎಂದರು.
ಅಪ್ರಾಪ್ತ ವಯಸ್ಸಿನ ಮಕ್ಕಳ ಹೆತ್ತವರು, ಠಾಣಾ ವ್ಯಾಪ್ತಿಯ ಸಾರ್ವಜನಿಕರು ಉಪಸ್ಥಿತರಿದ್ದರು.
ಕೌನ್ಸ್ಸೆಲಿಂಗ್: ಡ್ರಗ್ಸ್ ಸೇವಿಸಿದ ಆರೋಪದಲ್ಲಿ ಪೊಲೀಸರ ಕೈಗೆ ಸಿಕ್ಕಿ ಬಿದ್ದವರಿಗೆ ತಜ್ಞರಿಂದ ಕೌನ್ಸ್ಸೆಲಿಂಗ್ , ಮಾದಕ ವಸ್ತು ಸೇವನೆಯ ದುಷ್ಪರಿಣಾಮ ಕುರಿತು ಸಂವಾದ ಕಾರ್ಯಕ್ರಮ ಮಂಗಳೂರು ಕಮಿಷನರೇಟ್ ವ್ಯಾಪ್ತಿಯ ವಿವಿಧ ಪೊಲೀಸ್ ಠಾಣೆಗಳ ವ್ಯಾಪ್ತಿಯಲ್ಲಿ ನಡೆಯಿತು. ವೈದ್ಯರು, ಮನಶ್ಶಾಸ್ತ್ರಜ್ಞರು, ಎಫ್‌ಎಸ್‌ಎಲ್ ತಜ್ಞರು, ಪೊಲೀಸ್ ಅಧಿಕಾರಿಗಳು ಮಾದಕ ವ್ಯಸನಿಗಳಿಗೆ ಮಾರ್ಗದರ್ಶನ ನೀಡಿದರು. ಒಟ್ಟು 160 ಮಂದಿ ಈ ಕೌನ್ಸೆಂಗ್‌ನಲ್ಲಿ ಪಾಲ್ಗೊಂಡಿದ್ದರು.