ಆರ್ಥಿಕತೆ ದೃಷ್ಟಿಯಿಂದ ಕೈಮಗ್ಗ ಸುಧಾರಣೆಯಾಗಲಿ: ಡಾ.ಜಗದೀಶ್ ಶೆಟ್ಟಿಗಾರ್
ಉಡುಪಿ: ಕೈಮಗ್ಗ ನೇಕಾರಿಕೆಯ ಪುನಶ್ಚೇತನ ಮತ್ತು ಸುಧಾರಣೆಯನ್ನು ಕೇವಲ ಭಾವನಾತ್ಮಕ ಉದ್ದೇಶವನ್ನು ಇಟ್ಟುಕೊಂಡು ಮಾಡದೆ ಅದಕ್ಕೆ ಮಾರುಕಟ್ಟೆ ಯನ್ನು ಸೃಷ್ಟಿಸಿ ಲಾಭದಾಯಕ ಉದ್ಯಮವನ್ನಾಗಿ ಪರಿಚಯಿಸುವ ಕೆಲಸ ಆಗಬೇಕು ಎಂದು ಆರ್ಥಿಕ ತಜ್ಞ ಡಾ.ಜಗದೀಶ್ ಶೆಟ್ಟಿಗಾರ್ ಹೇಳಿದ್ದಾರೆ.
ಉಡುಪಿ ಪದ್ಮಶಾಲಿ ಪ್ರತಿಷ್ಠಾನದ ಆಶ್ರಯದಲ್ಲಿ ಮುಂದಿನ ಆಗಸ್ಟ್ ತಿಂಗಳಲ್ಲಿ ಉಡುಪಿಯಲ್ಲಿ ಆಯೋಜಿಸಲಿರುವ ಮೂರು ದಿನಗಳ ರಾಷ್ಟ್ರೀಯ ಕೈಮಗ್ಗ ದಿನಾಚರಣೆಯ ಕುರಿತು ರವಿವಾರ ಪೂರ್ವಭಾವಿ ಸಭೆಯಲ್ಲಿ ಭಾಗವಹಿಸಿ ಅವರು ಮಾತನಾಡುತಿದ್ದರು.
ನಗರಸಭಾ ಸದಸ್ಯ ಮಂಜುನಾಥ್ ಮಣಿಪಾಲ, ಕಲ್ಯಾಣಪುರ ದೇವಸ್ಥಾನದ ಪ್ರಧಾನ ಮೊಕ್ತೇಸರ ಜ್ಯೋತಿಪ್ರಸಾದ್ ಶೆಟ್ಟಿಗಾರ್, ಬ್ರಹ್ಮಾವರ ಪ್ರಾಥಮಿಕ ನೇಕಾರ ಸಹಕಾರಿ ಸಂಘದ ಅಧ್ಯಕ್ಷ ಬಾಲಕೃಷ್ಣ ಶೆಟ್ಟಿಗಾರ್, ಕಿನ್ನಿಗೋಳಿ ನೇಕಾರ ಸಂಘದ ಮಾಧವ, ಪ್ರತಿಷ್ಠಾನದ ಗೌರವ ಸಲಹೆಗಾರ ವಿಶ್ವನಾಥ್ ಶೆಟ್ಟಿಗಾರ್ ದೇರೆಬೈಲ್, ಅಶೋಕ್ ಶೆಟ್ಟಿಗಾರ್ ಅಲೆವೂರು, ದತ್ತರಾಜ್ ಶೆಟ್ಟಿಗಾರ್, ಸದಾಶಿವ ಗೋಳಿಜೋರ, ಕೇಶವ ಶೆಟ್ಟಿಗಾರ್, ದೇವರಾಯ ಶೆಟ್ಟಿಗಾರ್, ಕೋಶಾಧಿಕಾರಿ ಶ್ರೀನಿವಾಸ್ ಶೆಟ್ಟಿಗಾರ್ ಬೈಲೂರು ಮೊದಲಾದವರು ಉಪಸ್ಥಿತರಿದ್ದರು.
ಪ್ರತಿಷ್ಠಾನದ ಅಧ್ಯಕ್ಷ ರತ್ನಾಕರ್ ಇಂದ್ರಾಳಿ ಅಧ್ಯಕ್ಷತೆಯನ್ನು ವಹಿಸಿ ಪ್ರಾಸ್ತಾವಿಕ ವಾಗಿ ಮಾತನಾಡಿದರು. ಪ್ರಧಾನ ಕಾರ್ಯದರ್ಶಿ ನರೇಂದ್ರ ಶೆಟ್ಟಿಗಾರ್ ಹೆರ್ಗ ಕಾರ್ಯಕ್ರಮ ನಿರೂಪಿಸಿದರು. ಅವಿನಾಶ್ ಮಾರ್ಪಳ್ಳಿ ವಂದಿಸಿದರು.