ಒತ್ತಿನೆಣೆ: ಜರಿದ ಗುಡ್ಡ; ಒಂದು ಭಾಗದ ಸಂಚಾರ ಸ್ಥಗಿತ
ಬೈಂದೂರು : ಬೈಂದೂರು ಭಾಗದಲ್ಲಿ ಬುಧವಾರ, ಗುರುವಾರ ಸುರಿದ ಬಾರೀ ಮಳೆಗೆ ನದಿ, ತೊರೆಗಳು ತುಂಬಿ ಹರಿಯುತ್ತಿದ್ದು ಬಹುತೇಕ ಕೃಷಿಭೂಮಿ ಜಲಾವೃತಗೊಂಡಿವೆ. ಇಲ್ಲಿನ ರಾಷ್ಟ್ರೀಯ ಹೆದ್ದಾರಿ ಸಮೀಪದಲ್ಲಿ ಒತ್ತಿನೆಣೆ ಗುಡ್ಡ ಜರಿತ ಉಂಟಾಗಿದ್ದು, ಹೆದ್ದಾರಿ ಮೇಲ್ಗಡೆ ಮಣ್ಣು ಉರುಳಿದ ಪರಿಣಾಮ ಒಂದು ಭಾಗದ ಸಂಚಾರವನ್ನು ಸ್ಥಗಿತಗೊಳಿಸಲಾಗಿದೆ.
ಗುಡ್ಡದ ಮೇಲ್ಬಾಗದಲ್ಲಿ ಬಂಡೆಯೊಂದು ಉರುಳುವ ಅಪಾಯ ತಲೆದೋರಿದ್ದು, ಬೈಂದೂರು ಅಗ್ನಿಶಾಮಕ ದಳದ ಸಹಕಾರದಲ್ಲಿ ನೀರು ಸಿಂಪಡಿಸಿ ಬಂಡೆ ಉರುಳಿಸುವ ಪ್ರಯತ್ನ ನಡೆಸಲಾಗಿತ್ತು. ನಿರಂತರವಾಗಿ ಮಳೆ ಮುಂದುವರಿದರೆ ಮತ್ತಷ್ಟು ಗುಡ್ಡ ಕುಸಿಯುವ ಭೀತಿಯಿದೆ.
ಕೆಲವರ್ಷಗಳ ಹಿಂದೆ ಕುಸಿತ ಸಂಭವಿಸಿದ ವೇಳೆ ಒತ್ತಿನೆಣೆ ತಿರುವಿನ ಬಳಿ ಸಿಮೆಂಟ್ ಪ್ಲಾಸ್ಟಿಕ್ ಅಳವಡಿಸಿದ್ದು ಬಹುತೇಕ ಕಡೆ ಬಿರುಕು ಬಿಟ್ಟಿದೆ. ಈ ಭಾಗ ದಲ್ಲೂ ಕೂಡ ಕುಸಿಯುವ ಆತಂಕ ಇದೆ.
ರಾಷ್ಟ್ರೀಯ ಹೆದ್ದಾರಿ ಮೇಲ್ಗಡೆ ಗುಡ್ಡದ ಕೆಸರು ನೀರು ಹರಿಯುತ್ತಿದೆ. ಈ ಹಿಂದೆ ಕೂಡ ಇದೇ ಭಾಗದಲ್ಲಿ ಕುಸಿತ ಉಂಟಾಗಿತ್ತು. ತಾತ್ಕಾಲಿಕವಾಗಿ ಗುಡ್ಡದ ಸಮೀಪದ ಹೆದ್ದಾರಿ ಸಂಚಾರ ಬಂದ್ ಮಾಡಲಾಗಿದ್ದು, ಹೆದ್ದಾರಿ ಕಾಮಗಾರಿ ಗುತ್ತಿಗೆ ಕಂಪೆನಿ ಐ.ಆರ್.ಬಿ, ಆರಕ್ಷಕ ಇಲಾಖೆ ಮುಂದಾಳತ್ವದಲ್ಲಿ ಸುರಕ್ಷತಾ ಕ್ರಮ ಕೈಗೊಳ್ಳಲಾಗುತ್ತಿದೆ.
ಸ್ಥಳಕ್ಕೆ ಬೈಂದೂರು ವೃತ್ತ ನಿರೀಕ್ಷಕ ಸಂತೋಷ ಕಾಯ್ಕಿಣಿ, ಠಾಣಾಧಿಕಾರಿ ನಿರಂಜನ ಗೌಡ, ಕ್ರೈಂ ಎಸ್.ಐ ಮಹೇಶ್ ಕಂಬಿ, ಪೊಲೀಸ್ ಸಿಬಂದಿಗಳು, ಅಗ್ನಿಶಾಮಕ ದಳದವರು ಈ ಸಂದರ್ಭದಲ್ಲಿ ಹಾಜರಿದ್ದರು.