ಅಕ್ರಮ ಅಂಗಡಿ ಕೋಣೆಗಳ ತೆರವಿಗೆ ಒತ್ತಾಯ: ದಸಂಸ ಪ್ರತಿಭಟನೆಯ ಎಚ್ಚರಿಕೆ
ಹೆಬ್ರಿ : ತಾಲೂಕಿನ ಪಡುಕುಡೂರು ಗ್ರಾಮದಲ್ಲಿ ದಲಿತರಿಗಾಗಿ ಮೀಸಲಿಟ್ಟ ಡಿಸಿ ಮನ್ನಾ ಭೂಮಿಯಲ್ಲಿ ಅಕ್ರಮವಾಗಿ ನಿರ್ಮಿಸುತ್ತಿರುವ ಅಂಗಡಿ ಕೋಣೆ ಗಳನ್ನು ಕೂಡಲೇ ತೆರವುಗೊಳಿಸದಿದ್ದರೆ ಪ್ರತಿಭಟನೆ ಹಮ್ಮಿಕೊಳ್ಳ ಲಾಗುವುದು ಎಂದು ಉಡುಪಿ ಜಿಲ್ಲಾ ದಸಂಸ ಪ್ರಧಾನ ಸಂಚಾಲಕ ಸುಂದರ ಮಾಸ್ತರ್ ಎಚ್ಚರಿಕೆ ನೀಡಿದ್ದಾರೆ.
ಉಡುಪಿಯಲ್ಲಿಂದು ನಡೆದ ತುರ್ತು ಸಭೆಯಲ್ಲಿ ಮಾತನಾಡಿದ ಅವರು, ಪಡುಕುಡೂರು ಗ್ರಾಮದಲ್ಲಿ ಸರ್ವೇ ನಂಬರ್ ೭೪/೨ರಲ್ಲಿ ದಲಿತರಿಗಾಗಿ ಮೀಸ ಲಿಟ್ಟ ಡಿಸಿ ಮನ್ನಾ ಭೂಮಿಯಲ್ಲಿ ವಿಶ್ವನಾಥ ಪೂಜಾರಿ ಎಂಬವರು ಅಕ್ರಮವಾಗಿ ಅಂಗಡಿ ಕೋಣೆಗಳನ್ನು ನಿರ್ಮಿಸುತ್ತಿದ್ದು, ಇದರ ವಿರುದ್ಧ ಈಗಾಗಲೇ ಕರ್ನಾಟಕ ದಲಿತ ಸಂಘರ್ಷ ಸಮಿತಿ ಅಂಬೇಡ್ಕರ್ ವಾದ ದೂರು ದಾಖಲಿಸಿದೆ. ಇದರ ಪರಿಣಾಮವಾಗಿ ಕಟ್ಟಡ ತೆರವುಗೊಳಿಸಲು ತಹಶೀಲ್ದಾರರು ಮಾ.೨ರಂದು ಆದೇಶ ಹೊರಡಿಸಿದ್ದರು. ಆದರೆ ಇವರೆಗೂ ಅಕ್ರಮ ಕಟ್ಟಡವನ್ನು ತೆರವುಗೊಳಿಸಿಲ್ಲ. ಈ ಕೂಡಲೇ ಅಕ್ರಮ ಕಟ್ಟಡವನ್ನು ತೆರವುಗೊಳಿಸ ದಿದ್ದಲ್ಲಿ ಹೆಬ್ರಿ ತಾಲೂಕು ಕಛೇರಿ ಎದುರು ಬೃಹತ್ ಪ್ರತಿಭಟನೆ ಹಮ್ಮಿಕೊಳ್ಳಲಾಗುವುದು ಎಂದು ದೂರಿದರು.
ಸಭೆಯಲ್ಲಿ ದಸಂಸ ಜಿಲ್ಲಾ ಸಂಘಟನಾ ಸಂಚಾಲಕರಾದ ಶ್ಯಾಮರಾಜ್ ಬಿರ್ತಿ, ಪರಮೇಶ್ವರ ಉಪ್ಪೂರು, ಭಾಸ್ಕರ್ ಮಾಸ್ಟರ್ ಕುಂಜಿಬೆಟ್ಟು, ಮಂಜು ನಾಥ್ ಬಾಳ್ಕುದ್ರು, ಶ್ಯಾಮಸುಂದರ್ ತೆಕ್ಕಟ್ಟೆ, ಅಣ್ಣಪ್ಪನಕ್ರೆ, ಶ್ರೀಧರ ಕುಂಜಿಬೆಟ್ಟು, ಹೆಬ್ರಿ ತಾಲೂಕು ಸಂಚಾಲಕ ದೇವು ಹೆಬ್ರಿ, ಕಾರ್ಕಳ ತಾಲೂಕು ಸಂಚಾಲಕ ರಾಘವ ಕುಕುಜೆ ಉಪಸ್ಥಿತರಿದ್ದರು.