ಅಲ್ ಬಿರ್ರ್ ಸ್ಕೂಲ್‌ನಲ್ಲಿ ಸಮಸ್ತ ಸ್ಥಾಪಕ ದಿನಾಚರಣೆ
ಪುತ್ತೂರು: ಪಾರಂಪರಿಕ ಮೌಲ್ಯಗಳನ್ನು ಕಾಪಾಡುವ ಗುರಿಯೊಂದಿಗೆ ೧೯೨೬ರಲ್ಲಿ ಸ್ಥಾಪಿತವಾದ ಸಮಸ್ತ ಸಂಘಟನೆಯು ತಳಹಂತದವರೆಗೆ ಸಮಾಜದ ಧಾರ್ಮಿಕ, ಶೈಕ್ಷಣಿಕ, ಸಾಮಾಜಿಕ ಬೇಡಿಕೆಗಳಿಗೆ ಸ್ಪಂದಿಸುತ್ತಾ ಬರುತ್ತಿದೆ. ನೂರಾರು ಸವಾಲುಗಳ ಮುಂದೆ ಸತ್ಯ ಮತ್ತು ನಿಷ್ಠೆಯ ನಿಲುವುಗಳಲ್ಲಿ ಯಾವುದೇ ರಾಜಿಯಾಗದೆ ತನ್ನ ತತ್ವಗಳನ್ನು ಎತ್ತಿ ಹಿಡಿದು ದೇಶದ ಮತ್ತು ಸಮಾಜದ ಒಳಿತಿಗೆ ಒತ್ತು ಕೊಟ್ಟು ಮೌಲ್ಯಯುತ ಪ್ರಾಮಾಣಿಕ ಸಮಾಜ ವನ್ನು ನಿರ್ಮಿಸುವುದು ಸಮಸ್ತದ ಗುರಿಯಾಗಿದೆ ಎಂದು ಸಮಸ್ತ ವಿದ್ಯಾಭ್ಯಾಸ ಬೋರ್ಡ್‌ನ ಶಿಕ್ಷಣಾಧಿಕಾರಿ ಮುಫತ್ತಿಶ್ ಉಮರ್ ದಾರಿಮಿ ಸಾಲ್ಮರ ಹೇಳಿದರು.
ನಗರದ ಮುರ ಅಲ್ ಬಿರ್ರ್ ಸ್ಕೂಲ್‌ನಲ್ಲಿ ಸೋಮವಾರ ನಡೆದ ಸಮಸ್ತ ಸ್ಥಾಪಕ ದಿನಾಚರಣೆ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಅವರು ಸಂದೇಶ ಭಾಷಣಗೈದರು.
ಸಮಸ್ತ ಕೇಂದ್ರ ಮುಶಾವರ ಸದಸ್ಯ ಉಸ್ಮಾನುಲ್ ಫೈಝಿ ತೋಡಾರು ಧ್ವಜಾರೋಹಣಗೈದರು. ಎಂಪಿಎಂ ಪಿಯು ಕಾಲೇಜಿನ ಪ್ರಾಂಶುಪಾಲ ಅಡ್ವಕೇಟ್ ಎಂಪಿ ಅಬೂಬಕರ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಸಮಸ್ತ ವಿದ್ಯಾಭ್ಯಾಸ ಬೋರ್ಡ್ ಸದಸ್ಯ ಅಬ್ದುಲ್ ರಶೀದ್ ಹಾಜಿ ಪರ್ಲಡ್ಕ, ಎಸ್ಕೆಎಸೆಸ್ಸೆಫ್ ಪುತ್ತೂರು ವಲಯ ಅಧ್ಯಕ್ಷ ಇಬ್ರಾಹಿಂ ಬಾತಿಷಾ ಹಾಜಿ ಪಾಟ್ರಕೋಡಿ, ವಿಖಾಯ ಮುಖಂಡರಾದ ಇಬ್ರಾಹಿಂ ಕಡವ, ಅಶ್ರಫ್ ಕುಕ್ಕಾಜೆ, ಆದಂ ಕಲ್ಲೆಗ, ಇಬ್ರಾಹಿಂ ಕೆಎಂ ಸ್ಟೋರ್ ಭಾಗವಹಿಸಿದ್ದರು.
ಕಾರ್ಯಕ್ರಮದ ಭಾಗವಾಗಿ ಅಲ್ ಬಿರ್ರ್ ಸ್ಕೂಲಿನ ಪುಟಾಣಿಗಳಿಂದ ವಿವಿಧ ಕಾರ್ಯಕ್ರಮಗಳು ಹಾಗೂ ಪೋಷಕರಿಗೆ ತರಬೇತಿ ಶಿಬಿರ ನಡೆಸಲಾಯಿತು. ಅಲ್ ಬಿರ್ರ್ ಶಿಕ್ಷಕಿಯರಾದ ಫಾತಿಮತ್ ಯಾಸ್ಮೀನ್ ಮತ್ತು ಮುಬೀನಾ ತರಗತಿಗೆ ನೇತೃತ್ವ ನೀಡಿದರು.