ಉಡುಪಿ ಜಿಲ್ಲೆಯಾದ್ಯಂತ ಬಿರುಸಿನ ಮಳೆ; ಜು. 14ಕ್ಕೆ ಆರೆಂಜ್ ಅಲರ್ಟ್
ಉಡುಪಿ, ಜು.13: ಉಡುಪಿ ಜಿಲ್ಲೆಯಲ್ಲಿ ಬುಧವಾರದಿಂದ ಮತ್ತೆ ಧಾರಾಕಾರ ಮಳೆ ಸುರಿಯುತ್ತಿದೆ. ಇಂದು ಸಹ ದಿನವಿಡೀ ಮಳೆ ಇದ್ದು, ಹವಾಮಾನ ಇಲಾಖೆ ನಾಳೆಯವರೆಗೆ ಆರೆಂಜ್ ಅಲರ್ಟ್‌ನ್ನು ಘೋಷಿಸಿದೆ.
ಎರಡು ದಿನ ವಿರಳಗೊಂಡ ಮಳೆ, ಬುಧವಾರದಿಂದ ಮತ್ತೆ ಜೋರಾಗಿಯೇ ಸುರಿಯುತ್ತಿದೆ. ಇಂದು ಸಹ ಅದು ಮುಂದುವರಿದಿದೆ. ಇಂದು ಬೆಳಗ್ಗೆ 8:30ಕ್ಕೆ ಮುಕ್ತಾಯಗೊಂಡಂತೆ ಹಿಂದಿನ 24 ಗಂಟೆಗಳಲ್ಲಿ ಉಡುಪಿ ಜಿಲ್ಲೆಯಲ್ಲಿ ಸರಾಸರಿ 92.6ಮಿ.ಮೀ. ಮಳೆಯಾಗಿದೆ.
ಹೆಬ್ರಿಯಲ್ಲಿ ಅತ್ಯಧಿಕ 123.1ಮಿ.ಮೀ. ಮಳೆಯಾಗಿದ್ದರೆ,ಬೈಂದೂರಿನಲ್ಲಿ 109.1ಮಿ.ಮೀ., ಕುಂದಾಪುರದಲ್ಲಿ 108.0ಮಿ.ಮೀ., ಬ್ರಹ್ಮಾವರದಲ್ಲಿ 91.5ಮಿ.ಮೀ., ಉಡುಪಿಯಲ್ಲಿ 73.1ಮಿ.ಮೀ., ಕಾಪುವಿನಲ್ಲಿ 65.5 ಮಿ.ಮೀ. ಹಾಗೂ ಕಾರ್ಕಳದಲ್ಲಿ 60.6 ಮಿ.ಮೀ. ಮಳೆಯಾದ ವರದಿ ಬಂದಿದೆ. ಇದರಿಂದ ಹಿರಿಯಡ್ಕ ಸಮೀಪದ ಬಜೆ ಡ್ಯಾಂನಲ್ಲಿ ನೀರಿನ ಮಟ್ಟ 6.25ಮೀ.ಗೆ ಏರಿದ್ದರೆ, ಕಾರ್ಕಳದ ಮುಂಡ್ಲಿಯಲ್ಲಿ ನೀರಿನ ಮಟ್ಟ 5.48ಮೀ. ನಷ್ಟಿದೆ.
ಹವಾಮಾನ ಇಲಾಖೆಯು ನಾಳೆಗೆ ಆರೆಂಜ್ ಅಲರ್ಟ್ ಘೋಷಿಸಿದ್ದರೆ, ಶನಿವಾರ ಮತ್ತು ರವಿವಾರದಂದು ಎಲ್ಲೋ ಅಲರ್ಟ್ ನೀಡಿದೆ. ನಂತರದ ದಿನಗಳಲ್ಲಿ ಹಗುರದಿಂದ ಸಾಧಾರಣ ಮಳೆಯ ಮುನ್ಸೂಚನೆಯನ್ನು ಅದು ನೀಡಿದೆ.
ಮೂರು ಮನೆಗಳಿಗೆ ಹಾನಿ: ಭಾರೀ ಗಾಳಿ-ಮಳೆಯಿಂದಾಗಿ ಜಿಲ್ಲೆಯಲ್ಲಿ ಇನ್ನೂ ಮೂರು ಮನೆಗಳಿಗೆ ಹಾನಿಯಾದ ವರದಿ ಬಂದಿದ್ದು, ಒಂದು ಲಕ್ಷರೂ.ಗಳಷ್ಟು ನಷ್ಟದ ಅಂದಾಜು ಮಾಡಲಾಗಿದೆ. ಕಾಪು ತಾಲೂಕು ಪಾದೂರು ಗ್ರಾಮದ ವಿನ್ನಿ ಮೋನಿಸ್ ಅವರ ಮನೆಯ ಮೇಲ್ಚಾವಣಿ ನಿನ್ನೆಯ ಗಾಳಿಗೆ ಹಾರಿಹೋಗಿ ಭಾಗಶ: ಹಾನಿಯಾಗಿರುವುದಾಗಿ ವರದಿಯಾಗಿದೆ.
ಉಡುಪಿ ತಾಲೂಕು ಹೆರ್ಗ ಗ್ರಾಮದ ಆಲಿಸ್ ಫೆರ್ನಾಂಡೀಸ್ ಅವರ ವಾಸ್ತವ್ಯದ ಮನೆ ಭಾಗಶ: ಹಾನಿಯಾಗಿದ್ದು 40,000ರೂ.ನಷ್ಟವಾಗಿದ್ದರೆ, ಮೂಡುತೋನ್ಸೆ ಗ್ರಾಮದ ವಲೇರಿಯನ್ ಡಿಸಿಲ್ವ ಅವರು ಮನೆಯ ಗೋಡೆ ಕುಸಿದು 30ಸಾವಿರದಷ್ಟು ನಷ್ಟದ ಅಂದಾಜು ಮಾಡಲಾಗಿದೆ.