ಭಾರೀ ಮಳೆ : ಬಟ್ಟಪ್ಪಾಡಿಯಲ್ಲಿ ಮನೆಗಳು ಅಪಾಯದಲ್ಲಿ
ಉಳ್ಳಾಲ: ಕಳೆದ ಕೆಲವು ದಿನಗಳಿಂದ ಎಡೆಬಿಡದೆ ಸುರಿಯುತ್ತಿರುವ ಮಳೆಯಿಂದಾಗಿ ಸೋಮೇಶ್ವರ ಪುರಸಭಾ ವ್ಯಾಪ್ತಿಯ ಬಟ್ಟಪ್ಪಾಡಿ ಯಲ್ಲಿ ಎರಡು ಮನೆಗಳು ಅಪಾಯ ದಂಚಿನಲ್ಲಿವೆ. ಇದರಿಂದ ಇಲ್ಲಿನ ನಿವಾಸಿಗಳಲ್ಲಿ ಆತಂಕ ಸೃಷ್ಟಿಸಿದೆ.
ಬೀಪಾತಿಮ್ಮ ಎಂಬವರ ಮನೆ ತಡೆಗೋಡೆ , ಬಾವಿ ಸಮುದ್ರ ಪಾಲಾಗಿದ್ದು, ಮನೆ ಖಾಲಿ ಮಾಡುವಂತೆ ಸೋಮೇಶ್ವರ ಪುರಸಭೆ ನೋಟೀಸ್ ನೀಡಿದೆ. ಆದರೆ ಬದಲಿ ವ್ಯವಸ್ಥೆಯನ್ನು ಸಂಬಂಧ ಪಟ್ಟ ಇಲಾಖೆ , ಅಧಿಕಾರಿಗಳು ಮಾಡಲಿಲ್ಲ ಎಂದು ಅವರ ತಮ್ಮ ಹಸೈನಾರ್ ಆರೋಪಿಸಿದ್ದಾರೆ.
'ನಮ್ಮ ಮನೆಯ ಕಾಂಪೌಂಡ್ ಸಮುದ್ರ ಪಾಲಾಗಿದೆ ಮನೆ ಅಪಾಯದಂಚಿನಲ್ಲಿದೆ. ರಸ್ತೆ ಇಲ್ಲ ದ ಕಾರಣ ಮನೆಗೆ ಸಾಮಾನು ತರಲು ಕಷ್ಟವಾಗುತ್ತದೆ.ನನ್ನ ಮಗ ಮುಂಬೈಯಲ್ಲಿದ್ದು, ನಾನೊಬ್ಬನೇ ಇದ್ದೇನೆ. ಇಲ್ಲಿ 10 ಮನೆಗಳು ಸುತ್ತ ಮುತ್ತ ಇವೆ. ನಮ್ಮ ಕಷ್ಟಗಳಿಗೆ ಸ್ಪಂದಿಸುವ ಅಧಿಕಾರಿಗಳು ಇಲ್ಲವಾಗಿದ್ದಾರೆ. ಸರ್ಕಾರ ಕೇವಲ ಭರವಸೆ ನೀಡಿ ಹೋಗುತ್ತದೆ ' ಎಂದು ರಂಜಿತ್ ರವರ ತಾಯಿ ದಯಾವತಿ ಅಳಲು ತೋಡಿಕೊಂಡಿದ್ದಾರೆ.
ತೆಂಗಿನ ಕಾಯಿ ಕೀಳುವ ಕೆಲಸ ಮಾಡುವ ಹಸೈನಾರ್ ಆರ್ಥಿಕ ವಾಗಿ ಸದೃಢ ವಾಗಿಲ್ಲ. ಅವರ ಅಕ್ಕ ಬೀಪಾತುಮ್ಮ ಅವರ ಮನೆ ಅಪಾಯ ದಲ್ಲಿದ್ದರೂ ಸರಿಯಾದ ವ್ಯವಸ್ಥೆ ಇನ್ನೂ ಆಗಿಲ್ಲ.ಸೋಮೇಶ್ವರ ಪುರಸಭೆ ಪರ್ಯಾಯ ವ್ಯವಸ್ಥೆ ಮಾಡಿಲ್ಲ. ಇದರಿಂದ ಬೀಪಾತುಮ್ಮ ರವರ ಕುಟುಂಬ ಕಂಗಾಲಾಗಿದೆ. ಕೇವಲ ಬೀಡಿ ಕಟ್ಟಿ ಜೊತೆಗೆ ದಾನಿಗಳ ನೆರವಿನಿಂದ ಬದುಕುವ ಬೀಪಾತುಮ್ಮ ಅವರಿಗೆ ಪರ್ಯಾಯ ವ್ಯವಸ್ಥೆ ಮಾಡಬೇಕಾಗಿದೆ.
ಕಳೆದ ವರ್ಷ ರಾಜೀವಿ ಅವರ ಮನೆ ಸಮುದ್ರ ಪಾಲಾಗಿತ್ತು. ಈ ಬಾರಿ ಬೀಪಾತುಮ್ಮ ಅವರ ಮನೆ ಸಮುದ್ರ ಪಾಲಾಗುವ ಹಂತಕ್ಕೆ ತಲುಪಿದ್ದು, ಅಧಿಕಾರಿಗಳು ಕ್ರಮ ಕೈಗೊಳ್ಳಬೇಕಾಗಿದೆ.
ಒಟ್ಟಿನಲ್ಲಿ 10 ತೆಂಗು, ಎರಡು ಬಾವಿ , ಮರಗಳು ಸಮುದ್ರ ಪಾಲಾಗಿವೆ. ನಾಲ್ಕು ಮನೆಗಳ ತಡೆಗೋಡೆ ಈಗಾಗಲೇ ಸಮುದ್ರ ಸೇರಿದೆ. ಇದರಿಂದ ಇಲ್ಲಿ ವಾಸವಿರುವ ಕುಟುಂಬ ಗಳಿಗೆ ದಾರಿ ಇಲ್ಲದೇ ಪರದಾಡುವ ಸ್ಥಿತಿ ನಿರ್ಮಾಣವಾಗಿದೆ.