ಭಾರೀ ಮಳೆ: ಪಡುಬಿದ್ರಿಯಲ್ಲಿ ಜಲಾವೃತ
ಪಡುಬಿದ್ರಿ: ಕಳೆದ ಎರಡು ದಿನಗಳಿಂದ ಭಾರೀ ಮಳೆಯಾಗುತಿದ್ದು, ಪಡುಬಿದ್ರಿಯಲ್ಲಿ ಕೃತಕ ನೆರೆ ಉಂಟಾಗಿದೆ.
ರಾಷ್ಟ್ರೀಯ ಹೆದ್ದಾರಿ 66ರ ಅವ್ಶೆಜ್ಞಾನಿಕ ಕಾಮಗಾರಿಯಿಂದ ಪಡುಬಿದ್ರಿ ಕೆಳಗಿನಪೇಟೆಯಲ್ಲಿ ಹಲವು ಮನೆಗಳಿಗೆ ನೀರು ನುಗ್ಗಿ ತೊಂದರೆಯಾಗಿದೆ. ರಸ್ತೆ ಜಲಾವೃತಗೊಂಡಿದೆ. ಇಲ್ಲಿನ ಬಂಟರ ಭವನದ ಬಳಿಯ ಕೊಂಬೆಟ್ಟು ಎಂಬಲ್ಲಿ ಮೂರು ಮನೆಗಳು ಜಲಾವೃತಗೊಂಡಿದೆ.
ಬುಧವಾರ ಸಂಜೆ ವೇಳೆ ಸುರಿದ ಮಳೆಯಿಂದ ಮಳೆ ನೀರು ಹರಿಯುವ ತೋಡುಗಳು ಉಕ್ಕಿ ಹರಿದು ಕೆಳಗಿನ ಪೇಟೆಯಲ್ಲಿ ಹಾದು ಹೋಗುವ ಹಳೆ ಎಂಬಿಸಿ ರಸ್ತೆ ಸುಮಾರು ಅರ್ಧ ಕಿಲೋಮೀಟರ್ ವ್ಯಾಪ್ತಿಯುಲ್ಲಿ ನೆರೆ ಉಂಟಾಗಿ ಸುತ್ತಮುತ್ತಲಿನ ಹಲವು ಮನೆಗಳು ಜಲಾವೃತವಾಗಿದೆ. ಇದೇ ಪ್ರದೇಶದ ಬ್ಯಾಂಕ್, ವಾಣಿಜ್ಯ ಮಳಿಗೆಗಳು ಹಾಗೂ ಪಡುಬಿದ್ರಿ ಶ್ರೀ ಮಹಾಲಿಂಗೇಶ್ವರ ಮಹಾಗಣಪತಿ ದೇವಸ್ಥಾನ ಹೊರ ಆವರಣದಲ್ಲಿ ನೀರು ತುಂಬಿದೆ.
ಈ ಪ್ರದೇಶದಲ್ಲಿ ಕಳೆದ ಕೆಲವರ್ಷಗಳಿಂದ ಕೃತಕ ನೆರೆ ಉಂಟಾಗುತ್ತಿದ್ದು, ನಾಗರಿಕರು ಗ್ರಾಮ ಪಂಚಾಯಿತಿ, ಹೆದ್ದಾರಿ ಇಲಾಖೆ ಸಹಿತ ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿದರೂ ಸಮಸ್ಯೆ ಪರಿಹಾರವಾಗಿಲ್ಲ ಎಂದು ದೂರಿದ್ದಾರೆ.
ಮಳೆ ಹಾನಿ: ತೆಂಕ ಗ್ರಾಮದ ಗುಣವತಿ ಎಂಬವರ ವಾಸ್ತವ್ಯದ ಮನೆಗೆ ಮರ ಬಿದ್ದು, ಸುಮಾರು 20ಸಾವಿರ ರೂ. ನಷ್ಟ ಉಂಟಾಗಿದೆ ಎಂದು ಅಂದಾಜಿಸಲಾಗಿದೆ.
ಕಾಪು ಹೊಸ ಮಾರಿಗುಡಿ ಹಾಗೂ ಮಜೂರು ಕೊಂಬಗುಡ್ಡೆಯಲ್ಲಿ ವಿದ್ಯುತ್ ಕಂಬ ಉರುಳಿ ಸುಮಾರು 50ಸಾವಿರ ರು. ನಷ್ಟ ಉಂಟಾಗಿದೆ ಎಂದು ಅಂದಾಜಿಸಲಾಗಿದೆ. ಈ ಪರಿಸರದಲ್ಲಿ ಮೆಸ್ಕಾಂ ಸಿಬ್ಬಂದಿಗಳು ಬಿದ್ದು, ಹಾನಿಯಾದ ಕಂಬವನ್ನು ತೆರವುಗೊಳಿಸಿ ಹೊಸ ಕಂಬವನ್ನು ಅಳವಡಿಸುವ ಕಾರ್ಯದಲ್ಲಿ ನಿರತರಾಗಿದ್ದಾರೆ.
ಮೆಸ್ಕಾಂ ಸಿಬ್ಬಂದಿ ಕಾರ್ಯಕ್ಕೆ ಶ್ಲಾಘನೆ: ಪಡುಬಿದ್ರಿಯ ಬಂಟರ ಭವನದ ಬಳಿಯ ಕೊಂಬೆಟ್ಟು ಪರಿಸರದಲ್ಲಿ ಬುಧವಾರ ಸಂಜೆ ಜಲಾವೃತಗೊಂಡಿದೆ. ಈ ಪರಿಸರದಲ್ಲಿ ಮೆಸ್ಕಾಂ ಸಿಬ್ಬಂದಿವೊಬ್ಬರು ಜಲಾವೃತಗೊಂಡ ಕೊಂಬೆಟ್ಟುವಿನಲ್ಲಿ ತನ್ನ ಕಾರ್ಯವನ್ನು ಸುರಿಯುವ ಮಳೆಯಲ್ಲೂ ನಿರ್ವಹಿಸುತ್ತಿದ್ದರು. ಸಿಬ್ಬಂದಿಯ ಕಾರ್ಯಕ್ಕೆ ಸ್ಥಳೀಯರು ಮೆಚ್ಚುಗೆಗೆ ವ್ಯಕ್ತಪಡಿಸಿದ್ದಾರೆ.
ಹೆಜಮಾಡಿ ಕಡವಿನ ಬಾಗಿಲುವಿನಲ್ಲೂ ಮಂಗಳವಾರ ಮೂರು ವಿದ್ಯುತ್ ಕಂಬಗಳು ಧರೆಗೆ ಉರುಳಿದ್ದು, ಮೆಸ್ಕಾಂ ಅಧಿಕಾರಿಗಳುಇ ಹಾಗೂ ಸಿಬ್ಬಂದಿಗಳು ಕೂಡಲೇ ಸ್ಥಳಕ್ಕೆ ಧಾವಿಸಿ ಉರುಳಿದ ಕಂಬಗಳನ್ನು ತೆರವುಗೊಳಿಸಿ ಹೊಸ ಕಂಬವನ್ನು ಅಳವಡಿಸುವ ಮೂಲಕ ತಕ್ಷಣ ಸ್ಪಂಧಿಸಿದ್ದಾರೆ ಎಂದು ಹೆಜಮಾಡಿ ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷ ಪ್ರಾಣೇಶ್ ಹೆಜಮಾಡಿ ತಿಳಿಸಿದ್ದಾರೆ. ಇವರ ಕಾರ್ಯಕ್ಕೆ ಇಲ್ಲಿನ ಸ್ಥಳೀಯರು ಶ್ಲಾಘಿಸಿದ್ದಾರೆ.