ಹೋಲಿಕೆಯಿಂದ ಮಕ್ಕಳಲ್ಲಿ ಕೀಳರಿಮೆ, ಖಿನ್ನತೆ: ಡಾ.ಪಿ.ವಿ.ಭಂಡಾರಿ
ಉಡುಪಿ, ಜೂ.27: ಮಕ್ಕಳು ಹದಿಹರೆಯದಲ್ಲಿ ಮೊಬೈಲ್ ಚಟ, ಮದ್ಯ ಪಾನ, ಮಾದಕ ವ್ಯಸನ, ವಿರುದ್ದ ಲಿಂಗದ ಆಕರ್ಷಣೆ ಮುಂತಾದ ಸಮಸ್ಯೆಗಳಿಗೆ ದಾಸರಾಗುವ ಮೊದಲೇ ಸೂಕ್ತ ಸಮಯದಲ್ಲಿ ಮಕ್ಕಳ ಸಮಸ್ಯೆಯನ್ನು ಗುರುತಿಸಿ ಅಗತ್ಯ ಬಿದ್ದಲ್ಲಿ ಮಾನಸಿಕ ತಜ್ಞರಲ್ಲಿ ಸಲಹೆ ಪಡೆಯಬೇಕು ಎಂದು ಮನೋ ತಜ್ಞ ಡಾ.ಪಿ.ವಿ.ಭಂಡಾರಿ ಹೇಳಿದ್ದಾರೆ.
ಬಂಟಕಲ್ ಶ್ರೀಮಧ್ವವಾದಿರಾಜ ತಾಂತ್ರಿಕ ಮಹಾವಿದ್ಯಾಲಯದ ಕೌನ್ಸಿಲಿಂಗ್ ಘಟಕದ ವತಿಯಿಂದ ವಿದ್ಯಾರ್ಥಿಗಳ ಪೋಷಕರಿಗಾಗಿ ಕಾಲೇಜಿನ ಆವರಣದಲ್ಲಿ ಇತ್ತೀಚೆಗೆ ನಡೆದ ಹದಿಹರೆಯದವರ ಪಾಲನೆ ಎಂಬ ವಿಷಯದ ಕುರಿತ ಮಾಹಿತಿ ಕಾರ್ಯಕ್ರಮದಲ್ಲಿ ಅವರು ಮಾತನಾಡುತಿದ್ದರು.
ಮಗು ಬೆಳೆದಂತೆ ಪೋಷಕರು ಅವರನ್ನು ನಿಭಾಯಿಸುವ ತಮ್ಮ ಕೌಶಲ್ಯವನ್ನು ಬದಲಾಯಿಸಿಕೊಳ್ಳಬೇಕು. ಅವರ ಮೂಲಭೂತ ಅಗತ್ಯಗಳನ್ನು ಅರ್ಥ ಮಾಡಿ ಕೊಳ್ಳುವುದು ಮತ್ತು ಸಮಾಜದಲ್ಲಿ ಉತ್ತಮ ನಡವಳಿಕೆಯನ್ನು ತೋರಿಸಲು ಅವರಿಗೆ ಮಾರ್ಗದರ್ಶನ ನೀಡಬೇಕು ಎಂದರು.
ಪಾಲಕರು ಮಕ್ಕಳನ್ನು ಇತರ ಮಕ್ಕಳೊಂದಿಗೆ ಹೋಲಿಕೆ ಮಾಡಬಾರದು. ಪ್ರತಿಯೊಬ್ಬರಿಗೂ ಅವರದೇ ಆದ ವ್ಯಕ್ತಿತ್ವ ಇರುತ್ತದೆ. ಹೋಲಿಕೆ ಮಾಡು ವುದರಿಂದ ಮಕ್ಕಳಲ್ಲಿ ಕೀಳರಿಮೆ, ಮಾನಸಿಕ ಒತ್ತಡ, ಖಿನ್ನತೆ ಮುಂತಾದ ಸಮಸ್ಯೆ ಬೆಳೆಯಲು ಕಾರಣವಾಗುತ್ತದೆ. ಹದಿಹರೆಯದಲ್ಲಿ ಮಕ್ಕಳು ದೈಹಿಕ ಮತ್ತು ಮಾನಸಿಕ ಬದಲಾವಣೆಯನ್ನು ಹೊಂದುತ್ತಾರೆ. ಈ ಸಮಯದಲ್ಲಿ ಮಕ್ಕಳಿಗೆ ನೀಡುವ ಮೊಬೈಲ್, ಹಣ ಮತ್ತು ಬೈಕ್‌ಗಳ ಬಗ್ಗೆ ಜಾಗೃತೆ ವಹಿಸಬೇಕು ಎಂದು ಅವರು ಸಲಹೆ ನೀಡಿದರು.
ವಿದ್ಯುನ್ಮಾನ ಮತುತಿ ಸಂವಹನ ವಿಭಾಗದ ಪ್ರಾಧ್ಯಾಪಕಿ ಅಕ್ಷತಾ ರಾವ್ ಸ್ವಾಗತಿಸಿದರು. ಆರ್ಟಿಫಿಶಿಯಲ್ ಇಂಟೆಲಿಜೆನ್ಸ್ ಆ್ಯಂಡ್ ಮೆಶಿನ್ ಲರ್ನಿಂಗ್ ಮತ್ತು ಆರ್ಟಿಫಿಶಿಯಲ್ ಇಂಟೆಲಿಜೆನ್ಸ್ ಆ್ಯಂಡ್ ಡಾಟಾ ಸೈನ್ಸ್‌ನ ಮುಖ್ಯಸ್ಥ ನಾಗರಾಜ್ ರಾವ್ ಕಾರ್ಯಕ್ರಮ ಆಯೋಜಿಸಿದರು. ವಿದ್ಯುನ್ಮಾನ ಮತ್ತು ಸಂವಹನ ವಿಭಾಗದ ಪ್ರಾಧ್ಯಾಪಕಿ ಶಶಿಕಲಾ ಕಾರ್ಯಕ್ರಮ ನಿರೂಪಿಸಿದರು.