ಸ್ವರ್ಣ ನದಿಯ ಬಜೆ ಡ್ಯಾಂನಲ್ಲಿ ಒಳಹರಿವು ಆರಂಭ: ರೇಷನ್ ಪದ್ಧತಿ ರದ್ದು
ದಿನದ 24 ಗಂಟೆ ಕುಡಿಯುವ ನೀರು ಪೂರೈಕೆ
ಉಡುಪಿ, ಜೂ.24: ಕಳೆದ ಕೆಲವು ದಿನಗಳಿಂದ ಪಶ್ಚಿಮ ಘಟ್ಟ, ಕಾರ್ಕಳ ಹಾಗೂ ಉಡುಪಿಯ ಸುತ್ತಮುತ್ತಲು ಮಳೆಯಾಗುತ್ತಿರುವ ಪರಿಣಾಮ ನಗರಕ್ಕೆ ನೀರು ಪೂರೈಸುತ್ತಿರುವ ಸ್ವರ್ಣ ನದಿಯ ಬಜೆ ಡ್ಯಾಂನಲ್ಲಿ ಜೂ.23ರಂದು ರಾತ್ರಿ ಒಳಹರಿವು ಆರಂಭಗೊಂಡಿದೆ. ಈ ಹಿನ್ನೆಲೆಯಲ್ಲಿ ಉಡುಪಿ ನಗರಸಭೆಯು ರೇಷನ್ ಪದ್ಧತಿಯನ್ನು ರದ್ದುಗೊಳಿಸಿ ಇಂದಿನಿಂದ ನಗರಕ್ಕೆ ದಿನದ 24 ಗಂಟೆ ಕುಡಿಯುವ ನೀರು ಪೂರೈಸಲು ಪ್ರಾರಂಭಿಸಿದೆ.
ಮುಂಗಾರು ಪೂರ್ವ ಹಾಗೂ ಮುಂಗಾರು ಮಳೆ ಕೈಕೊಟ್ಟ ಪರಿಣಾಮ ಕಳೆದ ಎರಡು ತಿಂಗಳುಗಳಿಂದ ನಗರದಲ್ಲಿ ಕುಡಿಯುವ ನೀರಿನ ಸಮಸ್ಯೆ ಸಾಕಷ್ಟು ಉಲ್ಬಣಗೊಂಡಿತು. ಬಜೆಯಲ್ಲಿ ನೀರಿನ ಸಂಗ್ರಹ ಇಲ್ಲದೆ ಆರಂಭದಲ್ಲಿ ಮೂರು ದಿನಗಳಿಗೊಮ್ಮೆ, ನಂತರ ಐದು ದಿನಗಳಿಗೊಮ್ಮೆ ನೀರು ಪೂರೈಸಲಾಗುತ್ತಿತ್ತು. ನೀರು ಪೂರೈಸಲು ಸಾಧ್ಯ ಇಲ್ಲದ ಪ್ರದೇಶಗಳಿಗೆ 10 ಟ್ಯಾಂಕರ್‌ಗಳಲ್ಲಿ ನೀರು ಸರಬರಾಜು ಮಾಡಲಾಗುತ್ತಿತ್ತು.
ಕಳೆದ ಕೆಲವು ದಿನಗಳಿಂದ ಉಡುಪಿ ಸುತ್ತಮುತ್ತ ಸಾದಾರಣ ಮಳೆಯಾ ಗುತ್ತಿರುವುದರಿಂದ ಜೂ.18ರಿಂದ ಸ್ವರ್ಣ ನದಿಯ ಕಾರ್ಕಳ ಮುಂಡ್ಲಿ ಅಣೆಕಟ್ಟಿನಲ್ಲಿ ನೀರಿನ ಹೊರ ಹರಿವು ಆರಂಭಗೊಂಡಿತ್ತು. ಇದೀಗ ಈ ನೀರು ಬಜೆಯವರೆಗೆ ಹರಿದು ಬರುತ್ತಿದ್ದು, ಇದರಿಂದ ಬಜೆ ಅಣೆಕಟ್ಟಿನಲ್ಲಿ ನೀರಿನ ಸಂಗ್ರಹ ಹೆಚ್ಚಾಗಿದೆ.
ಜೂ.23ರಂದು ಸಂಜೆ ಬಜೆ ಡ್ಯಾಂನಲ್ಲಿ ನೀರಿನ ಸಂಗ್ರಹ 1.6 ಮೀಟರ್ ಇತ್ತು. ಹರಿವು ಆರಂಭಗೊಂಡ ನಂತರ ಸಂಜೆ ಅದರ ಪ್ರಮಾಣದಲ್ಲಿ 30 ಸೇ.ಮೀ.ನಷ್ಟು ಹೆಚ್ಚಳ ಕಂಡಿತ್ತು. ಇಂದು ಬೆಳಗ್ಗೆ 6 ಗಂಟೆಗೆ ಪರಿಶೀಲಿಸಿದಾಗ ಸುಮಾರು ಒಂದೂವರೆ ಮೀಟರ್ ನೀರು ಹೆಚ್ಚಳವಾಗಿದೆ. ಅಂದರೆ ರಾತ್ರಿ ವೇಳೆ ಬಜೆಯಲ್ಲಿ ಒಳ ಹರಿವು ಆರಂಭಗೊಂಡಿರುವುದು ದೃಢಪಟ್ಟಿದೆ ಎಂದು ಪೌರಾಯುಕ್ತ ರಮೇಶ್ ಪಿ.ನಾಯ್ಕ್ ತಿಳಿಸಿದ್ದಾರೆ.
ಸದ್ಯ ಬಜೆ ಡ್ಯಾಂನಲ್ಲಿ ನೀರಿನ ಪ್ರಮಾಣ 2.90 ಮೀಟರ್ ಇದೆ. ಈ ಹಿನ್ನೆಲೆಯಲ್ಲಿ ಸಂಜೆಯಿಂದ ಪಂಪಿಂಗ್ ಆರಂಭಿಸಲಾಗಿದೆ. ಇಂದಿನಿಂದಲೇ 24ಗಂಟೆ ನೀರು ಸರಬರಾಜು ಮಾಡಲು ವ್ಯವಸ್ಥೆ ಮಾಡಲಾಗುತ್ತಿದೆ. ಅದಕ್ಕಾಗಿ ರೇಷನ್ ಪದ್ಧತಿಯನ್ನು ರದ್ದುಗೊಳಿಸಲಾಗಿದೆ ಎಂದು ಅವರು ಮಾಹಿತಿ ನೀಡಿದರು.
"ಈವರೆಗೆ ನೀರು ಪೂರೈಸುತ್ತಿದ್ದ ನಗರಸಭೆಯ ಎರಡು ಟ್ಯಾಂಕರ್ ಹೊರತು ಪಡಿಸಿ ಉಳಿದ ಖಾಸಗಿ ಟ್ಯಾಂಕರ್‌ಗಳನ್ನು ಸ್ಥಗಿತಗೊಳಿಸಲಾಗಿದೆ. ಎರಡು ಟ್ಯಾಂಕರ್‌ನ್ನು ನಾಳೆ ಸಂಜೆ ಸ್ಥಗಿತಗೊಳಿಸಲಾಗುತ್ತದೆ. ಬಜೆಗೆ ಹರಿದು ಬರುತ್ತಿರುವ ನೀರಿನಲ್ಲಿ ಹೊಲಸು, ಕಸಗಳು ತುಂಬಿದ್ದು, ಈ ಹಿನ್ನೆಲೆಯಲ್ಲಿ ಇವುಗಳು ಕೊಚ್ಚಿ ಕೊಂಡು ಹೋಗಿ ನೀರು ಶುದ್ಧವಾಗಲು ಬಜೆಯ ಗೇಟನ್ನು ತೆರೆಯಲಾಗಿದೆ. ನೀರು ಶುದ್ಧಗೊಂಡ ಬಳಿಕ ಗೇಟು ಹಾಕಲಾಗುವುದು".
-ರಮೇಶ್ ಪಿ.ನಾಯ್ಕ್, ಪೌರಾಯುಕ್ತರು