ಉಡುಪಿ ಎಪಿಎಂಸಿ ನಿವೇಶನದ ಲೀಸ್ ಕಂ ಸೇಲ್‌ನಲ್ಲಿ ಅವ್ಯವಹಾರ: ಮಾಜಿ ಸದಸ್ಯರ ಆರೋಪ
"ಸರಕಾರಕ್ಕೆ 3.81 ಕೋಟಿ ರೂ. ನಷ್ಟ"
ಉಡುಪಿ, ಜೂ.21: ಉಡುಪಿ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಯ (ಎಪಿಎಂಸಿ) ಮುಖ್ಯ ಮಾರುಕಟ್ಟೆ ಪ್ರಾಂಗಣದಲ್ಲಿರುವ ಸಾಮಾನ್ಯ ನಿವೇಶನಗಳನ್ನು ಲೀಸ್ ಕಂ ಸೇಲ್ ಆಧಾರದ ಮೇಲೆ ಹಂಚಿಕೆಯ ವೇಳೆ ಅಧಿಕಾರಿಗಳು ಭಾರೀ ಅವ್ಯವಹಾರ ನಡೆಸಿದ್ದು, ಇದರಿಂದ ಸರಕಾರಕ್ಕೆ 3.81 ಕೋಟಿ ರೂ.ಗಳಷ್ಟು ನಷ್ಟ ಉಂಟಾಗಿದೆ ಎಂದು ಉಡುಪಿ ನರಸಭಾ ಸದಸ್ಯ ವಿಜಯ ಕೊಡವೂರು ಅವರು ಎಪಿಎಂಸಿಯ ಮಾಜಿ ಸದಸ್ಯರೊಂದಿಗೆ ನಡೆಸಿದ ಪತ್ರಿಕಾಗೋಷ್ಠಿಯಲ್ಲಿ ಆರೋಪಿಸಿದ್ದಾರೆ.
ಆದಿಉಡುಪಿಯಲ್ಲಿರುವ ಎಪಿಎಂಸಿ ಯಾರ್ಡ್‌ನಲ್ಲಿ ಕಳೆದ 20-25 ವರ್ಷಗಳಿಂದ ಚಿಲ್ಲರೆ ವರ್ತಕರು ವ್ಯಾಪಾರ ಮಾಡಿಕೊಂಡು ಬರುತಿದ್ದು, ಇದರ ಹೃದಯ ಭಾಗದಲ್ಲಿರುವ ಎಪಿಎಂಸಿ ಜಾಗವನ್ನು ಅಧಿಕಾರಿಗಳು ಚುನಾಯಿತ ಸಮಿತಿ ಅಸ್ತಿತ್ವದಲ್ಲಿ ಇಲ್ಲದ ಸಮಯದಲ್ಲಿ ಅತೀ ಕಡಿಮೆ ಬೆಲೆ ಮಾರಾಟ ಮಾಡಿದ್ದಾರೆ ಎಂದು ಕೊಡವೂರು ವಾರ್ಡಿನ ಸದಸ್ಯ ವಿಜಯ ಕೊಡವೂರು ದೂರಿದ್ದಾರೆ.
ಇಲ್ಲಿ ಜಾಗಕ್ಕೆ ಚದರ ಅಡಿಗೆ 2,000ರೂ. ದರ ಇದ್ದು, ಅಧಿಕಾರಿಗಳು ಇದನ್ನು ಚದರ ಅಡಿಗೆ ಕೇವಲ 376ರಂತೆ ಅವುಗಳನ್ನು ಖರೀದಿದಾರರಿಗೆ ನೀಡಿದ್ದಾರೆ. ಅಧಿಕಾರಿಗಳು ಈಗಾಗಲೇ 11 ಜಾಗವನ್ನು ಮಾರಾಟ ಮಾಡಿದ್ದಾರೆ. ಒಟ್ಟು 54 ಸೆನ್ಸ್ ಜಾಗದ ಮಾರಾಟವಾಗಿದ್ದು, ಮಾರುಕಟ್ಟೆಯ ಈಗಿನ ದರದಂತೆ ಒಟ್ಟು 4.69 ಕೋಟಿ ರೂ. ಸಂಗ್ರಹವಾಗಬೇಕಿದ್ದು, ಅಧಿಕಾರಿಗಳು ಕೇವಲ 88 ಲಕ್ಷ ರೂ.ಗಳನ್ನು ಪಡೆದು ಜಾಗವನ್ನು ವಿಕ್ರಯಿಸಿದ್ದಾರೆ. ಇದರಿಂದ ಸುಮಾರು 3.81 ಕೋಟಿ ರೂ.ಗಳಷ್ಟು ಸರಕಾರಕ್ಕೆ ನಷ್ಟವಾಗಿದೆ ಎಂದು ಎಪಿಎಂಸಿ ಮಾಜಿ ಅಧ್ಯಕ್ಷ ಸುಧಾಮ ಶೆಟ್ಟಿ ಹೇಳಿದರು.
ಈ ವ್ಯವಹಾರದಲ್ಲಿ ಸಾಕಷ್ಟು ಲೋಪದೋಷಗಳಾಗಿದ್ದು, ಸಮಿತಿಯ ಷರತ್ತು ಹಾಗೂ ನಿಬಂಧನೆಗಳಂತೆ ಇದು ನಡೆದಿಲ್ಲ. ಹೀಗಾಗಿ ಇಡೀ ವ್ಯವಹಾರ ಕಾನೂನು ಬಾಹಿರವಾಗಿದೆ, ಇದರಿಂದ ರೈತರು, ಕೃಷಿಕರು ಹಾಗೂ ವರ್ತಕರೆಲ್ಲರಿಗೂ ಅನ್ಯಾಯವಾಗಿದೆ ಎಂದವರು ಹೇಳಿದರು.
ಇಲ್ಲಿ ಕಳೆದ ಒಂದೂವರೆ ವರ್ಷದಿಂದ ಚುನಾಯಿತ ಸಮಿತಿ ಅಸ್ತಿತ್ವದಲ್ಲಿಲ್ಲ. ತಹಶೀಲ್ದಾರರು ಇದರ ಆಡಳಿತಾಧಿ ಕಾರಿಯಾಗಿ ಕಾರ್ಯ ನಿರ್ವಹಿಸಬೇಕಿತ್ತು. ಆದರೆ ಕೆಲವೇ ದಿನಗಳ ಬಳಿಕ ಇಲಾಖೆಯ ಒಬ್ಬ ಅಧಿಕಾರಿಯೇ ಇಲ್ಲಿ ಆಡಳಿತಾಧಿಕಾರಿಯಾಗಿ ಕಾರ್ಯನಿರ್ವಹಿಸುತಿದ್ದಾರೆ. ಇದರಿಂದಾಗಿಯೇ ಇಲ್ಲಿ ಈ ರೀತಿಯ ಅವ್ಯವಹಾರ ನಡೆಸಲು ಸಾಧ್ಯವಾಗಿದೆ ಎಂದು ಸುಧಾಮ ಶೆಟ್ಟಿ ತಿಳಿಸಿದರು.
ಈ ಅವ್ಯವಹಾರವನ್ನು ರದ್ದುಗೊಳಿಸಿ, ಸೂಕ್ತ ತನಿಖೆ ನಡೆಸಬೇಕೆಂದು ಒತ್ತಾಯಿಸಿ ಈಗಾಗಲೇ ಎಪಿಎಂಸಿ ಮುಂದೆ ಎರಡು ಬಾರಿ ಪ್ರತಿಭಟನೆ ನಡೆಸಿದ್ದೇವೆ. ಶಾಸಕರು ಸೇರಿದಂತೆ ಸಂಬಂಧಿತರಿಗೆಲ್ಲಾ ಮನವಿ ಸಲ್ಲಿಸಿ ಒತ್ತಾಯಿಸಲಾಗಿದೆ. ಆದರೆ ಯಾವುದಕ್ಕೂ ಸ್ಪಂದನೆಯೇ ಇಲ್ಲವಾಗಿದೆ. ಈ ನಡುವೆ ಪ್ರತಿಭಟನೆಯಲ್ಲಿ ಪಾಲ್ಗೊಂಡ ಅಲ್ಲಿನ ವರ್ತಕರೊಬ್ಬರಿಗೆ ಎಪಿಎಂಸಿ ಲೆಕ್ಕ ಅಧೀಕ್ಷಕರೊಬ್ಬರು ನಿನ್ನೆ ಗೂಂಡಾಗಳೊಂದಿಗೆ ಬಂದು ಕೊಲೆ ಬೆದರಿಕೆ ಹಾಕಿದ್ದಾರೆ ಎಂದು ವಿಜಯ ಕೊಡವೂರು ತಿಳಿಸಿದ್ದಾರೆ.
ಇಡೀ ವ್ಯವಹಾರವನ್ನು ರದ್ದುಗೊಳಿಸಿ ಪ್ರಕರಣದ ತನಿಖೆ ನಡೆಸುವ ನಮ್ಮ ಬೇಡಿಕೆಗೆ ಸ್ಪಂಧಿಸದಿದ್ದರೆ, ಜೂ.28ರ ಬುಧವಾರದಂದು ರೈತರು, ವರ್ತಕರು ಹಾಗೂ ಎಪಿಎಂಸಿ ಮಾಜಿ ಅಧ್ಯಕ್ಷರು ಮತ್ತು ಸದಸ್ಯರ ಸಭೆಯನ್ನು ಕರೆದು ಮುಂದಿನ ಕ್ರಮದ ಬಗ್ಗೆ ನಿರ್ಧರಿಸುತ್ತೇವೆ ಎಂದು ಅವರು ಹೇಳಿದರು.
ಪತ್ರಿಕಾಗೋಷ್ಠಿಯಲ್ಲಿ ಎಪಿಎಂಸಿಯ ಮಾಜಿ ಅಧ್ಯಕ್ಷರಾದ ವಿಜಯ ಕುಮಾರ್ ಉದ್ಯಾವರ, ಮಾಜಿ ಸದಸ್ಯ ರಮಾಕಾಂತ್ ಕಾಮತ್, ರಾಜ್ಯ ರೈತ ಮೋರ್ಚಾ ಕಾರ್ಯಕಾರಣಿ ಸದಸ್ಯ ರಾಘವೇಂದ್ರ ಕಿಣಿ, ತಾಲೂಕು ಕೃಷಿಕ ಸಮಾಜದ ಅಧ್ಯಕ್ಷ ಸುಭಾಷಿತ ಕುಮಾರ್, ಎಂಪಿಎಂಸಿ ವರ್ತಕರಾದ ಫಯಾಝ್ ಅಹ್ಮದ್, ಲಕ್ಷ್ಮಣ, ವಿರೂಪಾಕ್ಷ, ಕೃಷ್ಣ ಮುಂತಾದವರು ಉಪಸ್ಥಿತರಿದ್ದರು.