ಮಾನಸಿಕ ಆರೋಗ್ಯಕ್ಕೆ ಹೆಚ್ಚಿನ ಒತ್ತು ನೀಡಲು ನ್ಯಾಯಾಧೀಶೆ ಶೋಭಾ ಕರೆ
ಮಂಗಳೂರು, ಜು.5: ದೈಹಿಕ ಸಮಸ್ಯೆಗಳಂತೆಯೇ ಮಾನಸಿಕ ಆರೋಗ್ಯಕ್ಕೂ ಹೆಚ್ಚಿನ ಮಹತ್ವ ನೀಡಬೇಕು. ಮಾನಸಿಕ ಆರೋಗ್ಯದಲ್ಲಿ ಏರಪೇರು ಕಂಡುಬಂದ ಕೂಡಲೇ ವೈದ್ಯರನ್ನು ಕಂಡು ಚಿಕಿತ್ಸೆ ಪಡೆಯಬೇಕು ಎಂದು ಹಿರಿಯ ನ್ಯಾಯಾಧೀಶೆ ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಶೋಭಾ ಬಿ.ಜಿ. ಕರೆ ನೀಡಿದರು.
ದ.ಕ.ಜಿಲ್ಲಾಡಳಿತ, ಜಿಪಂ, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಜಿಲ್ಲಾ ಮಾನಸಿಕ ಆರೋಗ್ಯ ಕಾರ್ಯಕ್ರಮ ಹಾಗೂ ಜಿಲ್ಲಾ ವಕೀಲರ ಸಂಘದ ಆಶ್ರಯದಲ್ಲಿ ನಗರದ ಕೊಟ್ಟಾರದಲ್ಲಿರುವ ದ.ಕ.ಜಿಪಂ ನೇತ್ರಾವತಿ ಸಭಾಂಗಣದಲ್ಲಿ ಬುಧವಾರ ನಡೆದ ಮಾನಸಿಕ ಆರೋಗ್ಯ ಕಾಳಜಿ ಕಾಯ್ದೆ -2017 ಮತ್ತು ವಿಕಲಾಂಗ ಚೇತನರ ಹಕ್ಕುಗಳ ಕಾಯ್ದೆ- 2016ರ ಕುರಿತು ಕಾರ್ಯಾಗಾರ ಉದ್ಘಾಟಿಸಿ ಅವರು ಮಾತನಾಡಿದರು.
ಮಾನಸಿಕ ಆರೋಗ್ಯದ ಲಕ್ಷಣಗಳು ಬೇಗನೆ ಕಂಡು ಬರುವುದಿಲ್ಲ, ದೈಹಿಕ ಸಮಸ್ಯೆಗಳು ಬಂದಾಗ ತಕ್ಷಣ ವೈದ್ಯರನ್ನು ಭೇಟಿ ಮಾಡಿ ಚಿಕಿತ್ಸೆ ಪಡೆಯಲು ನೀಡುವ ಪ್ರಾಮುಖ್ಯತೆಯನ್ನು ಉತ್ತಮ ಮಾನಸಿಕ ಆರೋಗ್ಯ ಕಾಪಾಡಿಕೊಳ್ಳುವುದಕ್ಕೂ ನೀಡುವುದು ಅತೀ ಮುಖ್ಯ ಎಂದು ನ್ಯಾಯಾಧೀಶೆ ಶೋಭಾ ಹೇಳಿದರು.
ದ.ಕ.ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಕಿಶೋರ್ ಕುಮಾರ್ ಮಾತನಾಡಿ ದೈಹಿಕ ಆರೋಗ್ಯ ಹಾಗೂ ಮಾನಸಿಕ ಆರೋಗ್ಯಕ್ಕೆ ಬಹಳ ಹತ್ತಿರದ ಸಂಬಂಧವಿದ್ದು, ಮಾನಸಿಕ ಆರೋಗ್ಯ ಸಮಸ್ಯೆಯದಾಗ ದೈಹಿಕ ಆರೋಗ್ಯ ಕೂಡ ಹದಗೆಡುತ್ತದೆ. ಮಾನಸಿಕ ಆರೋಗ್ಯ ಸಮಸ್ಯೆ ಹೆಚ್ಚದಂತೆ ಉದ್ವೇಗ, ಖಿನ್ನತೆಯಂತಹ ಸ್ಥಿತಿಗಳು ನಿರ್ಮಾಣವಾಗುತ್ತದೆ. ಇಂತಹವರ ಕುರಿತು ಕಾಳಜಿಯನ್ನು ಅವರ ಜತೆಗಿದ್ದವರು ಹೊಂದಿರಬೇಕು ಎಂದು ಶೋಭಾ ಹೇಳಿದರು.
ಜಿಪಂ ಉಪ ಕಾರ್ಯದರ್ಶಿ ಕೆ. ಆನಂದ್ ಕುಮಾರ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಸಂಪನ್ಮೂಲ ವ್ಯಕ್ತಿಯಾಗಿ ಪಾನೆಲ್ ಅಡ್ವಕೇಟ್ ಪ್ರತಿಮಾ ಎಸ್. ಹಾಗೂ ಮನೋರೋಗ ತಜ್ಞ ಡಾ. ಸುಪ್ರಿತಾ ಭಾಗವಹಿಸಿದ್ದರು.
ವೇದಿಕೆಯಲ್ಲಿ ಸಂಚಾರ ಎಸಿಪಿ ಗೀತಾ ಕುಲಕರ್ಣಿ, ವಿಕಲಚೇತನ ಇಲಾಖೆಯ ಉಪ ನಿರ್ದೇಶಕ ಗೋಪಾಲಕೃಷ್ಣ ಹಾಗೂ ವಕೀಲರ ಸಂಘದ ಅಧ್ಯಕ್ಷ ಪೃಥ್ವಿರಾಜ್ ರೈ ಉಪಸ್ಥಿತರಿದ್ದರು.
ಜಿಲ್ಲಾ ಮಾನಸಿಕ ಆರೋಗ್ಯ ಕಾರ್ಯಕ್ರಮ ನಿವಾರಣಾಧಿಕಾರಿ ಡಾ. ಸುದರ್ಶನ್ ಸ್ವಾಗತಿಸಿದರು. ಜಿಲ್ಲಾ ಆರೋಗ್ಯ ಶಿಕ್ಷಣಾಧಿಕಾರಿ ಜ್ಯೋತಿ ಕೆ. ಉಳೆಪಾಡಿ ಕಾರ್ಯಕ್ರಮ ನಿರೂಪಿಸಿದರು.