ಲಕ್ಷೀಂದ್ರನಗರ ಕಾಮಾಕ್ಷಿ ದೇವಸ್ಥಾನ ರಸ್ತೆ ಕೆಸರುಮಯ
ಮಣಿಪಾಲ : ಜನಪ್ರತಿನಿಧಿ ಹಾಗೂ ಅಧಿಕಾರಿಗಳ ನಿರ್ಲಕ್ಷ್ಯದಿಂದ ಲಕ್ಷೀಂದ್ರ ನಗರದಿಂದ ಕಾಮಾಕ್ಷಿ ದೇವಸ್ಥಾನಕ್ಕೆ ಹೋಗುವ ರಸ್ತೆ ಸಂಪೂರ್ಣ ಕೆಸರು ಮಯವಾಗಿದ್ದು, ಈ ರಸ್ತೆಯಲ್ಲಿ ಸ್ಥಳೀಯರು ನಡೆದಾಡಲು ಹಾಗೂ ವಾಹನಗಳು ಸಂಚರಿಸಲು ಪರದಾಡುವಂತಹ ಸ್ಥಿತಿ ನಿರ್ಮಾಣವಾಗಿದೆ.
ಉಡುಪಿ-ಮಣಿಪಾಲ ರಾಷ್ಟ್ರೀಯ ಹೆದ್ದಾರಿ ಲಕ್ಷ್ಮೀಂದ್ರ ನಗರದಿಂದ ದೇವಸ್ಥಾನಕ್ಕೆ ವಿ.ಪಿ.ನಗರ ಕ್ರಾಸ್‌ನಿಂದ ಕಾಮಾಕ್ಷಿ ದೇವಸ್ಥಾನಕ್ಕೆ ಹೋಗುವ ರಸ್ತೆಯ ಕಾಂಕ್ರೀಟ್ ಕಾಮಗಾರಿಯನ್ನು ಚುನಾವಣೆ ಪೂರ್ವದಲ್ಲಿ ನಡೆಸ ಲಾಗಿತ್ತು. ಆದರೆ ಈ ರಸ್ತೆ ಕಾಮಗಾರಿಯನ್ನು ಪೂರ್ಣಗೊಳಿಸುವ ಬದಲು ಅರ್ಧಂಬರ್ಧ ಮಾಡಿ ಸ್ಥಳೀಯರನ್ನು ತೊಂದರೆಗೆ ಸಿಲುಕಿಸಲಾಗಿದೆ.
ಈ ಕಾಂಕ್ರೀಟ್ ರಸ್ತೆಯು ಮುಂದೆ ಇರುವ ಡಾಮರು ರಸ್ತೆಗೆ ಸಂಪರ್ಕಿಸಲು ಕೇವಲ ೨೦ ಅಡಿ ದೂರ ಇದೆ. ಆದರೆ ಅಧಿಕಾರಿಗಳು ಅಷ್ಟು ಕಾಮಗಾರಿ ಯನ್ನು ನಡೆಸದೆ ಬಾಕಿ ಬಿಟ್ಟಿದ್ದಾರೆ. ಕಳೆದ ಕೆಲವು ದಿನಗಳಿಂದ ಸುರಿಯುತ್ತಿರುವ ಮಳೆ ಯಿಂದಾಗಿ ಆ ರಸ್ತೆಯ ಬದಿಯಲ್ಲೇ ಇರುವ ಗುಡ್ಡದ ಮಣ್ಣು ಕುಸಿದ ಪರಿಣಾಮ ಈ ೨೦ ಅಡಿ ಉದ್ದದ ರಸ್ತೆ ಸಂಪೂರ್ಣ ಕೆಸರಿನಿಂದ ಕೂಡಿದೆ. ಕೇವಲ ೨೦ ಅಡಿ ರಸ್ತೆಯ ಅವ್ಯವಸ್ಥೆಯಿಂದ ಸಮಸ್ಯೆಯನ್ನು ಎದುರಿಸುವಂತಾಗಿದೆ ಎಂದು ಸ್ಥಳೀಯರು ದೂರಿದ್ದಾರೆ.
ಸುಮಾರು ೪೦೦ ಕುಟುಂಬಗಳು ಈ ರಸ್ತೆಯನ್ನು ಅವಲಂಬಿಸಿಕೊಂಡಿದೆ. ಇಲ್ಲಿ ಶೇ.೮೦ ಮಂದಿ ನಡೆದುಕೊಂಡೇ ಹೋಗುತ್ತಾರೆ. ಕೆಲಸಕ್ಕೆ ಹೋಗುವವರು, ವಿದ್ಯಾರ್ಥಿಗಳು ಈ ರಸ್ತೆಯಲ್ಲಿ ನಡೆದರೆ ಕಚೇರಿಗೂ, ಶಾಲೆಗೂ ಹೋಗದ ಪರಿಸ್ಥಿತಿ ಎದುರಾಗುತ್ತದೆ. ಅದಕ್ಕಾಗಿ ಸ್ಥಳೀಯರು ಶಾಲಾ ವಿದ್ಯಾರ್ಥಿಗಳನ್ನು ತಮ್ಮ ಬೈಕಿನಲ್ಲಿ ಈ ಕೆಸರಿನ ರಸ್ತೆಯನ್ನು ದಾಟಿಸುವ ಕಾರ್ಯ ಮಾಡುತ್ತಿದ್ದಾರೆ. ಕೆಲವು ಬೈಕ್ ಸವಾರರೂ ಈ ಕೆಸರುಮಯ ರಸ್ತೆಯಲ್ಲಿ ಬಿದ್ದಿರುವ ಘಟನೆಗಳು ನಡೆದಿವೆ.
"ಇಲ್ಲಿನ ಕಾಂಕ್ರೀಟ್ ರಸ್ತೆಯನ್ನು ಸಂಪೂರ್ಣಗೊಳಿಸಿದ್ದರೆ ನಾವೆಲ್ಲ ತೊಂದರೆ ಅನುಭವಿಸುವ ಸ್ಥಿತಿ ಎದುರಾಗುತ್ತಿರಲಿಲ್ಲ. ಈ ಕೆಸರುಮಯವಾಗಿರುವ ರಸ್ತೆ ಯಿಂದ ಸಮೀಪದ ಮನೆಗಳು ಕೂಡ ಕೆಸರುಮಯವಾಗಿದೆ. ಬೈಕ್, ಕಾರು ಗಳಿಗೂ ಪ್ರತಿದಿನ ಕೆಸರಿನ ಅಭಿಷೇಕವಾಗುತ್ತಿದೆ. ಸಂಬಂಧಪಟ್ಟವರು ಕೂಡಲೇ ಎಚ್ಚೆತ್ತು ಈ ಸಮಸ್ಯೆಯನ್ನು ಬಗೆಹರಿಸಬೇಕು".
- ಫಾನ್ಸಿಸ್ ರೋಡಿಗ್ರಸ್, ಸ್ಥಳೀಯರು