ಸಂತೆಕಟ್ಟೆ ಓವರ್‌ಪಾಸ್ ನಿರ್ಮಾಣ ಕಾಮಗಾರಿಯ ಮಣ್ಣು ಕುಸಿತ: ಉಡುಪಿ ಡಿಸಿ ಪರಿಶೀಲನೆ
ಉಡುಪಿ: ನಿರಂತರವಾಗಿ ಸುರಿಯುತ್ತಿರುವ ಮಳೆಯಿಂದಾಗಿ ಸಂತೆಕಟ್ಟೆ ರಾಷ್ಟ್ರೀಯ ಹೆದ್ದಾರಿ 66ರ ಓವರ್‌ಪಾಸ್ ನಿರ್ಮಾಣ ಕಾಮಗಾರಿಗಾಗಿ ತೋಡಿ ರುವ ಗುಂಡಿಯ ಮಣ್ಣು ಕುಸಿದಿದೆ. ಇದರಿಂದ ಹೆದ್ದಾರಿ ಸಂಚಾರಕ್ಕೆ ಅಪಾಯ ಉಂಟಾಗುವ ಭೀತಿ ಎದುರಾಗಿದೆ.
ಅರ್ಧ ಕಾಮಗಾರಿ ಆಗಿರುವುದರಿಂದ ಮಳೆಯಿಂದ ರಾಷ್ಟ್ರೀಯ ಹೆದ್ದಾರಿ ಸಮೀಪದಲ್ಲಿ ಮಣ್ಣು ಕುಸಿಯಬಾರದು ಎಂಬ ಮುನ್ನೆಚ್ಚರಿಕೆಯಿಂದ ಟಾರ್ಪಲ್ ಅಳವಡಿಸಲಾಗಿದೆ. ಆದರೂ ನಿರಂತರ ಗಾಳಿಮಳೆಗೆ ಟಾರ್ಪಾಲ್ ಜಾರಿ ಕೆಳಗೆ ಬಿದ್ದಿದ್ದು ಮಣ್ಣು ಕುಸಿದಿರುವುದು ಕಂಡುಬಂದಿದೆ. ಇದೇ ಪರಿಸ್ಥಿತಿ ಮುಂದು ವರೆದರೆ ಹೆದ್ದಾರಿಗೂ ಸಮಸ್ಯೆಯಾಗುವ ಸಾಧ್ಯತೆ ಇದೆ ಎಂದು ಸ್ಥಳೀಯರು ಆರೋಪಿಸಿದ್ದಾರೆ.
ಈ ಹಿನ್ನೆಲೆಯಲ್ಲಿ ಸ್ಥಳಕ್ಕೆ ಉಡುಪಿ ಜಿಲ್ಲಾಧಿಕಾರಿ ಕೂರ್ಮಾರಾವ್ ಹಾಗೂ ಜಿಲ್ಲಾ ಪೊಲೀಸ್ ಅಧೀಕ್ಷಕ ಅಕ್ಷಯ್ ಹಾಕೇ ಮಚ್ಚೀಂದ್ರ ಭೇಟಿ ನೀಡಿ ಹೆದ್ದಾರಿ ಕಾಮಗಾರಿಯನ್ನು ಪರಿಶೀಲಿಸಿ, ಅಗತ್ಯ ಕ್ರಮಗಳನ್ನು ತೆಗೆದುಕೊಳ್ಳುವಂತೆ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರಿದ ಅಧಿಕಾರಿಗಳಿಗೆ ಸೂಚನೆ ನೀಡಿದರು.
ಹೆದ್ದಾರಿಯ ಇನ್ನೊಂದು ಇನ್ನೊಂದು ಭಾಗದಲ್ಲಿ ಮಣ್ಣು ಕುಸಿದಿದ್ದು, ಇದರಿಂದ ರಸ್ತೆ ಸಂಚಾರಕ್ಕೆ ಯಾವುದೇ ಸಮಸ್ಯೆ ಆಗುವುದಿಲ್ಲ. ಕಾಮಗಾರಿ ಪ್ರದೇಶದಲ್ಲಿ ಮಣ್ಣು ಕುಸಿಯದಂತೆ ಟರ್ಪಾಲ್ ಅಳವಡಿಸಿ, ಮಣ್ಣುಗಳ ಚೀಲ ಗಳನ್ನು ಜೋಡಿಸಿ ಇಡಲಾಗಿದೆ. ಆದರೂ ಇಲಾಖೆಯ ತಾಂತ್ರಿಕವಾಗಿ ತಜ್ಞರಿಂದ ಮತ್ತೆ ಪರಿಶೀಲನೆ ನಡೆಸಿ ಮುನ್ನೆಚ್ಚರಿಕೆ ವಹಿಸುವಂತೆ ಸೂಚಿಸಿದ್ದೇವೆ ಎಂದು ಜಿಲ್ಲಾಧಿಕಾರಿ ತಿಳಿಸಿದರು.