ಮಂಗಳೂರು: 12 ಗಂಟೆ ತಡವಾಗಿ ದುಬೈಗೆ ತೆರಳಿದ ಏರ್ ಇಂಡಿಯಾ ಎಕ್ಸ್ಪ್ರೆಸ್ !
ಸಾಂದರ್ಭಿಕ ಚಿತ್ರ Photo: PTI
ಮಂಗಳೂರು, ಜು. 11: ಮಂಗಳೂರು ಅಂತಾರಾಷ್ಟ್ರೀಯ ವಿಮಾ ನಿಲ್ದಾಣದಿಂದ ಸೋಮವಾರ ರಾತ್ರಿ 11.05ಕ್ಕೆ ದುಬೈಗೆ ತೆರಳಬೇಕಾಗಿದ್ದ ಏರ್ ಇಂಡಿಯಾ ಎಕ್ಸ್ಪ್ರೆಸ್ ವಿಮಾನ ತಾಂತ್ರಿಕ ದೋಷದ ಕಾರಣ 12 ಗಂಟೆ ತಡವಾಗಿ ಮಂಗಳವಾರ ಮಧ್ಯಾಹ್ನ 12.10ಕ್ಕೆ ಪ್ರಯಾಣ ಬೆಳೆಸಿದ ಘಟನೆ ವರದಿಯಾಗಿದೆ.
ಪ್ರಯಾಣ ತೀವ್ರ ವಿಳಂಬದ ಹಿನ್ನೆಲೆಯಲ್ಲಿ ಸುಮಾರು ಏಳು ಮಂದಿ ಪ್ರಯಾಣಿಕರು ತಮ್ಮ ಪ್ರಯಾಣವನ್ನು ಸ್ಥಗಿತಗೊಳಿಸಿ ಮರು ಪ್ರಯಾಣಕ್ಕೆ ಮುಂದಾಗಿದ್ದರೆ, 161 ಮಂದಿ ಪ್ರಯಾಣಿಕರು ದುಬೈಗೆ ತೆರಳಿದ್ದಾರೆ.
ಸೋಮವಾರ ರಾತ್ರಿ 11.05ಕ್ಕೆ ನಿಗದಿಯಾಗಿದ್ದ IX813 ವಿಮಾನವು ತಾಂತ್ರಿಕ ದೋಷದ ಹಿನ್ನೆಲೆಯಲ್ಲಿ ಹೊಟೇಲ್ನಲ್ಲಿ ತಂಗುವ ವ್ಯವಸ್ಥೆಯೊಂದಿಗೆ ತಿರುವನಂತಪುರಕ್ಕೆ ತೆರಳಿ ಅಲ್ಲಿಂದ ದುಬೈಗೆ ತೆರಳುವುದಾಗಿ ಪ್ರಯಾಣಿಕರಿಗೆ ಮಾಹಿತಿ ನೀಡಲಾಗಿತ್ತು. ಆದರೆ ಬಹುತೇಕ ಪ್ರಯಾಣಿಕರು ತಿರುವನಂತಪುರದಿಂದ ಖಾಲಿ ವಿಮಾನ ಬಂದು ಇಲ್ಲಿಂದ ನೇರವಾಗಿ ಹೋಗಲು ಇಚ್ಚಿಸಿದ್ದರು. ಹಾಗಾಗಿ ಏರ್ ಇಂಡಿಯಾವು ತಿರುವನಂತಪುರದಿಂದ ಬದಲಿ ವಿಮಾನವನ್ನು ಮಂಗಳೂರು ವಿಮಾನ ನಿಲ್ದಾಣಕ್ಕೆ ತರಿಸಿಕೊಂಡು ಪ್ರಯಾಣಿಕರನ್ನು ದುಬೈಗೆ ಕಳುಹಿಸಿದೆ. ಇದೇ ವೇಳೆ ಮಂಗಳವಾರ ಬೆಳಗ್ಗೆ 9.15ಕ್ಕೆ ಹೊರಡಬೇಕಿದ್ದ IX383 ವಿಮಾನದ ಅವಧಿಯನ್ನು ಸಂಜೆ 6.45ಕ್ಕೆ ಮರುನಿಗದಿಪಡಿಸಲಾಗಿದೆ.
ಪ್ರಯಾಣಿಕರಿಗೆ ಇದರಿಂದ ಆಗಿರುವ ಅನಾನುಕೂಲಕ್ಕಾಗಿ ವಿಷಾದಿಸುತ್ತಿರುವುದಾಗಿ ಏರ್ ಇಂಡಿಯಾ ಪ್ರಕಟನೆ ತಿಳಿಸಿದೆ.
‘ಸೋಮವಾರ ರಾತ್ರಿ ದುಬೈ ಪ್ರಯಾಣಕ್ಕೆ ನಿಗದಿಯಾಗಿದ್ದ ವಿಮಾನ ತಿರುವನಂತಪುರದವರೆಗೆ ಹಾರಲು ಶಕ್ತವಾಗಿತ್ತು. ವಿಮಾನಗಳ ನಿರ್ವಹಣಾ ನೆಲೆ ತಿರುವನಂತಪುರದಲ್ಲಿರುವ ಕಾರಣ ಅಲ್ಲಿ ನಿರ್ವಹಣೆಯ ಬಳಿಕ ಅಲ್ಲಿಂದ ದುಬೈಗೆ ಆ ವಿಮಾನ ಪ್ರಯಾಣಿಸುವುದಾಗಿ ಪ್ರಯಾಣಿಕರಿಗೆ ತಿಳಿಸಲಾಗಿತ್ತು. ಆದರೆ ಆ ರೀತಿ ಪ್ರಯಾಣ ಬಯಸದೆ, ಪ್ರಯಾಣಿಕರು ಖಾಲಿ ವಿಮಾನ ತಿರುವನಂತಪುರದಿಂದ ಬರುವುದನ್ನು ಕಾಯಲು ಇಚ್ಚಿಸಿದ ಕಾರಣ ಆ ವಿಮಾನ ಅಲ್ಲಿಂದ ಬರುವಾಗ ತಡವಾಗಿ ಪ್ರಯಾಣಿಕರಿಗೆ ತೊಂದರೆಯಾಗಿದೆ. ಪ್ರಯಾಣಿಕರಿಗೆ ನಿರಂತರ ಊಟೋಪಚಾರದ ಬಗ್ಗೆ ಗಮನ ಹರಿಸಲಾಗಿದ್ದು, ಪ್ರಯಾಣಿಕರೂ ಸಹಕಾರ ನೀಡಿದ್ದಾರೆ’ ಎಂದು ಏರ್ ಇಂಡಿಯಾ ಪ್ರಕಟನೆಯಲ್ಲಿ ತಿಳಿಸಿದೆ.