ಮಂಗಳೂರು: ಬಾಡಿಗೆಗೆ ಕಾರು ಪಡೆದು ಮಾರಾಟ ಪ್ರಕರಣ; ಆರೋಪಿ ಸೆರೆ
ಮಂಗಳೂರು: ಕಾರನ್ನು ಬಾಡಿಗೆಗೆ ಪಡೆದು ಆ ಬಳಿಕ ಅದನ್ನು ಮಾರಾಟ ಮಾಡಿದ ಪ್ರಕರಣಕ್ಕೆ ಸಂಬಂಧಿಸಿ ಬಂಟ್ವಾಳ ತಾಲೂಕಿನ ವಗ್ಗ ನಿವಾಸಿ ಹರೀಶ್ ಯಾನೆ ಹರಿ (32) ಎಂಬಾತನನ್ನು ಬಂದರು ಪೊಲೀಸರು ಬಂಧಿಸಿದ್ದಾರೆ.
ನಗರದ ಪಳ್ನೀರ್‌ನ ಸಂಸ್ಥೆಯೊಂದರಿಂದ ಬಂಟ್ವಾಳದ ಯಕ್ಷಿತ್ ಎಂಬಾತನ ಕಾರನ್ನು ಆನ್‌ಲೈನ್ ಮೂಲಕ ಕಾಯ್ದಿರಿಸಿ 25 ಸಾವಿರ ರೂ. ಆನ್‌ಲೈನ್ ಮೂಲಕ ಪಾವತಿಸಿದ್ದ ಎನ್ನಲಾಗಿದೆ. ಬಾಕಿ 50 ಸಾವಿರ ರೂ. ನಗದು ನೀಡಿ ಅದರೊಂದಿಗೆ ಆಧಾರ್ ಕಾರ್ಡ್, ಚಾಲನಾ ಪರವಾನಗಿ ಮತ್ತು 3 ಬ್ಯಾಂಕ್ ಚೆಕ್‌ಗಳನ್ನು ನೀಡಿ 15 ದಿನಗಳಿಗೆ ಕಾರು ಬಾಡಿಗೆಗೆ ತೆಗೆದುಕೊಂಡು ಹೋಗಿದ್ದ ಎಂದು ದೂರಿನಲ್ಲಿ ತಿಳಿಸಲಾಗಿತ್ತು.
ಬುಕ್ಕಿಂಗ್ ಅವಧಿ ಮುಗಿದಿದ್ದರೂ ಕೂಡಾ ಕಾರನ್ನು ಹಿಂತಿರುಗಿಸದ ಕಾರಣ ಸಂಸ್ಥೆಯ ಮಾಲಕ ಮುಹಮ್ಮದ್ ಹುಸೈನಾರ್ ಕರೆ ಮಾಡಿದಾಗ ಆರೋಪಿಗಳು ಸ್ಪಂದಿಸಿರಲಿಲ್ಲ ಎನ್ನಲಾಗಿದೆ. ಜಿಪಿಎಸ್ ಮೂಲಕ ಪರಿಶೀಲಿಸಿದಾಗ ಕಾರು ವಿಜಯಪುರದಲ್ಲಿರುವುದು ಕಂಡು ಬಂದಿವಬೆ. ಕಾರನ್ನು ಯಕ್ಷಿತ್ ಮತ್ತು ಹರೀಶ್ ಎಂಬವರು ಆಧಾರ್ ಕಾರ್ಡನ್ನು ನಕಲು ಮಾಡಿ ವಿಜಯಪುರದ ವ್ಯಕ್ತಿಯೊಂದಿಗೆ ಮಾರಾಟದ ಒಪ್ಪಂದ ಮಾಡಿಕೊಂಡು 7 ಲಕ್ಷ ರೂ. ಪಡೆದಿದ್ದರು ಎನ್ನಲಾಗಿದೆ.
ಈ ಬಗ್ಗೆ ಬಂದರು ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ತನಿಖೆ ನಡೆಸಿದ ಬಂದರು ಇನ್‌ಸ್ಪೆಕ್ಟರ್ ರಾಘವೇಂದ್ರ ನೇತೃತ್ವದ ಪೊಲೀಸ್ ತಂಡವು ಹರೀಶ್‌ನನ್ನು ಬಂಧಿಸಿದ್ದಾರೆ. ಇನ್ನೊಬ್ಬ ತಲೆಮರೆಸಿಕೊಂಡಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.
ನಗರ ಪೊಲೀಸ್ ಕಮಿಷನರ್ ಕುಲದೀಪ್ ಆರ್. ಜೈನ್ ಮಾರ್ಗದರ್ಶನದಲ್ಲಿ ಡಿಸಿಪಿಗಳಾದ ಅಂಶುಕುಮಾರ್, ದಿನೇಶ್ ಕುಮಾರ್, ಕೇಂದ್ರ ಉಪವಿಭಾಗ ಎಸಿಪಿ ರಾಜೇಂದ್ರ ಅವರ ಸಲಹೆಯಂತೆ ಕಾರ್ಯಾಚರಣೆ ನಡೆಸಲಾಗಿತ್ತು.