ಮಂಗಳೂರು | ಮುಂದುವರಿದ ಮಳೆ; ನಗರದಲ್ಲಿ ಅಲ್ಲಲ್ಲಿ ಕೃತಕ ನೆರೆ ಸೃಷ್ಟಿ
ಮಂಗಳೂರು, ಜೂ.29: ದ.ಕ. ಜಿಲ್ಲೆಯಾದ್ಯಂತ ಗುರುವಾರವೂ ಮಳೆ ಮುಂದುವರಿದ್ದು, ಮಂಗಳೂರು ನಗರದ ಕೆಲವೆಡೆ ಕೃತಕ ನೆರೆಯ ಭೀತಿ ಸೃಷ್ಟಿಯಾಗಿದೆ. ನಗರದ ಎಂಪಾಯರ್ ಮಾಲ್ ಮತ್ತು ಟಿಎಂಎ ಪೈ ಇಂಟರ್ನ್ಯಾಷನಲ್ ಹಾಲ್ ನಡುವೆ ಹಾದುಹೋಗುವ ರಸ್ತೆಯಲ್ಲಿ ಸಿಗುವ ಕೊಡಿಯಾಲ್‍ಬೈಲ್ ಭಗವತಿ ನಗರದಲ್ಲಿ ನೆರೆ ನೀರು ತುಂಬಿದ್ದು, ಅನೇಕ ಮನೆಗಳಿಗೆ ನೀರು ಪ್ರವೇಶಿಸಿದೆ.
ನಗರದ ಮೀನುಗಾರಿಕಾ ಕಾಲೇಜು ಮತ್ತು ನಂತೂರು ಪದವು, ಪಂಪ್‍ವೆಲ್ ಪ್ರದೇಶಗಳಲ್ಲಿ ಹೆದ್ದಾರಿಯ ಇಕ್ಕೆಲಗಳಲ್ಲಿ ಮಳೆ ನೀರು ಸಂಗ್ರಹವಾಗಿ ವಾಹನಗಳ ಸಂಚಾರಕ್ಕೆ ಅಡ್ಡಿಯಾಗುತ್ತಿದೆ. ನಗರದ ಸಿಟಿ ಆಸ್ಪತ್ರೆ ಸಮೀಪ, ವೆಲೆನ್ಶಿಯಾ ರಸ್ತೆ, ಪಿವಿಎಸ್ ವೃತ್ತ- ಕರಂಗಲಪಾಡಿ ರಸ್ತೆ ಸಹಿತ ಕೆಲವು ಕಡೆ ಬಿರುಸಿನ ಮಳೆ ಸಂದರ್ಭ ನೆರೆ ನೀರಿನ ರಭಸಕ್ಕೆ ರಸ್ತೆಯಲ್ಲಿ ದ್ವಿಚಕ್ರ ಮಾತ್ರವಲ್ಲದೆ, ದೊಡ್ಡ ವಾಹನಗಳು ಸೇರಿದಂತೆ ಸುಗಮ ಸಂಚಾರಕ್ಕೆ ಅಡ್ಡಿಯಾಗುತ್ತಿದ್ದು, ಸಾರ್ವಜನಿಕರು ನಡೆದಾಡಲು ಸಾಧ್ಯವಾಗದ ಪರಿಸ್ಥಿತಿ ನಿರ್ಮಾಣವಾಗಿದೆ.
ರಸ್ತೆಗಳ ನಿರ್ಮಾಣ ಸಂದರ್ಭ ಮಳೆ ನೀರು ಹರಿದು ಹೋಗುವ ನಿಟ್ಟಿನಲ್ಲಿ ರಸ್ತೆಗಳನ್ನು ನಿರ್ಮಿಸದಿರುವುದು ಹಾಗೂ ಮಳೆ ನೀರು ಹರಿದು ಹೋಗುವ ಚರಂಡಿಗಳು ಸಮರ್ಪಕವಾಗಿಲ್ಲದಿರುವುದು ಈ ಸಮಸ್ಯೆಗೆ ಕಾರಣವಾಗಿದೆ. ಇದಲ್ಲದೆ ನಗರದ ಹಲವು ಕಡೆಗಳಲ್ಲಿ ಮಳೆ ನೀರು ಒಳಚರಂಡಿಗಳಲ್ಲಿ (ಡ್ರೈನೇಜ್) ಹರಿಯುತ್ತಿದ್ದು, ವಾಹನಗಳ ಸಂಚಾರದ ವೇಳೆ ಮಳೆ ನೀರಿನ ಜತೆ ಒಳಚರಂಡಿ ನೀರಿನ ಸಿಂಚನವನ್ನೂ ಅನುಭವಿಸುವಂತಾಗಿದೆ.
ಮಳೆ ನೀರು ರಸ್ತೆಗಳಲ್ಲೇ ಹರಿಯುತ್ತಿರುವುದರಿಂದ ಡಾಮರು ರಸ್ತೆಗಳು ಹದಗೆಡುವ ಭೀತಿಯೂ ಎದುರಾಗಿದೆ. ಮಲ್ಲಿಕಟ್ಟೆ, ಬಜ್ಜೋಡಿ, ಪಾಂಡೇಶ್ವರ ಸಹಿತ ಅನೇಕ ಕಡೆ ಜೋರಾಗಿ ಸುರಿಯುವ ಮಳೆಯ ನೀರು ನೆರೆಯ ವಾತಾವರಣವನ್ನು ಸೃಷ್ಟಿಸುತ್ತಿದೆ. ಮಂಗಳೂರು ಮಹಾನಗರ ಪಾಲಿಕೆ ಆಯುಕ್ತ ಆನಂದ ಸಿ.ಎಲ್ ಸಮಸ್ಯೆ ಸೃಷ್ಟಿಯಾದ ಕೆಲ ಪ್ರದೇಶಗಳಿಗೆ ಭೇಟಿ ನೀಡಿ ಪರಿಶೀಲಿಸಿದರು.
ಮಂಗಳೂರು ನಗರದ ಯೆಯ್ಯಾಡಿ ಬಳಿ ಗುರುವಾರ ಬೆಳಗ್ಗೆ ಬೃಹತ್ ಮರ ಹಾಗೂ ವಿದ್ಯುತ್ ಕಂಬ ವಾಣಿಜ್ಯ ಕಟ್ಟಡ ಮೇಲೆ ಬಿದ್ದಿದ್ದು, ಘಟನೆ ಸಂದರ್ಭ ಜನ ಸಂಚಾರವಿಲ್ಲದ ಕಾರಣ ಭಾರೀ ಅಪಾಯ ತಪ್ಪಿದೆ. ಬೃಹತ್ ಅಶ್ವಥ ಮರ ವಿದ್ಯುತ್ ತಂತಿ ಮೇಲೆ ಬಿದ್ದ ರಭಸಕ್ಕೆ ತಂತಿ ಕಂಬ ಕೂಡ ಉರುಳಿದೆ. ಈ ಸಂದರ್ಭ ಸ್ಥಳದಲ್ಲಿ ನಿಲ್ಲಿಸಿದ್ದ ದ್ವಿಚಕ್ರ ವಾಹನವೊಂದು ಜಖಂಗೊಡಿದೆ. ಅಗ್ನಿಶಾಮಕ ದಳ ಸ್ಥಳಕ್ಕೆ ಭೇಟಿ ನೀಡಿ ಮರಗಳನ್ನು ತೆರವುಗೊಳಿಸುವ ಕಾರ್ಯ ನಡೆಸಿದೆ. ಘಟನೆಯಿಂದ ಸಮೀಪದ ವಾಣಿಜ್ಯ ಕಟ್ಟಡಗಳಿಗೆ ಹಾನಿಯಾಗಿದೆ.