ಮಂಗಳೂರಿನ ಖಾಸಗಿ ಆಸ್ಪತ್ರೆ ವೈದ್ಯರ ನಿರ್ಲಕ್ಷ್ಯಕ್ಕೆ ಮಹಿಳೆಯ ಮೆದುಳು ನಿಷ್ಕ್ರಿಯ: ದ.ಕ. ಜಿಲ್ಲಾ ಡಿವೈಎಫ್ಐ ಆರೋಪ
ಸಾಂದರ್ಭಿಕ ಚಿತ್ರ
ಮಂಗಳೂರು: ನಗರದ ಖಾಸಗಿ ಆಸ್ಪತ್ರೆಯೊಂದರ ವೈದ್ಯರ ನಿರ್ಲಕ್ಷ್ಯಕ್ಕೆ ಮಹಿಳೆಯ ಮೆದುಳು ನಿಷ್ಕ್ರಿಯವಾಗಿದೆ ಎಂದು ಆರೋಪಿಸಿರುವ ದ.ಕ.ಜಿಲ್ಲಾ ಡಿವೈಎಫ್ಐ, ಈ ಬಗ್ಗೆ ದ.ಕ.ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಅಧಿಕಾರಿ ಗಮನ ಹರಿಸಿ ಪ್ರಕರಣಕ್ಕೆ ಸಂಬಂಧಿಸಿದವರ ವಿರುದ್ಧ ಕಠಿಣ ಕ್ರಮ ಜರಗಿಸಬೇಕು ಎಂದು ಕಾರ್ಯದರ್ಶಿ ಸಂತೋಷ್ ಬಜಾಲ್ ಒತ್ತಾಯಿಸಿದ್ದಾರೆ.
ಹೆರಿಗೆಗೆಂದು ದಾಖಲಾಗಿರುವ ಗರ್ಭಿಣಿ ಮಹಿಳೆ ಆಸ್ಪತ್ರೆಯ ಬೇಜವಾಬ್ದಾರಿ ಮತ್ತು ವೈದ್ಯರ ನಿರ್ಲಕ್ಷಕ್ಕೆ ಬಲಿಯಾಗಿದ್ದಾರೆ. ಹೆರಿಗೆಗಾಗಿ ನಡೆದ ಶಸ್ತ್ರಚಿಕಿತ್ಸೆಯಿಂದಾದ ಎಡವಟ್ಟಿಗೆ ಗರ್ಭಕೋಶವನ್ನು ಕಳೆದುಕೊಂಡಿದ್ದಲ್ಲದೆ ಮೆದುಳು ನಿಷ್ಕ್ರಿಯಗೊಂಡು ಕೋಮಕ್ಕೆ ಜಾರಿದ್ದರು ಎಂದು ಅವರು ತಿಳಿಸಿದ್ದಾರೆ.
ವೇಣೂರಿನ ಶಿಲ್ಪಾ ಎಂಬಾಕೆಯು ತನ್ನ ಎರಡನೇ ಮಗುವಿನ ಹೆರಿಗೆಗಾಗಿ ಜುಲೈ 2ರಂದು ಆಸ್ಪತ್ರೆಗೆ ದಾಖಲಾಗಿದ್ದರು. ಶಸ್ತ್ರಚಿಕಿತ್ಸೆಯ ಮೂಲಕ ಹೆಣ್ಣು ಮಗುವನ್ನು ಹೊರತೆಗೆದರೂ ಗರ್ಭಕೋಶದಲ್ಲಿ ಸಮಸ್ಯೆ ಇದೆ ಎಂದು ಹೇಳಿ ಬಳಿಕ ಅದರ ನಿವಾರಣೆಯ ಸಂದರ್ಭ ರಕ್ತಸ್ರಾವಾಗಿದೆ ಎನ್ನಲಾಗಿದೆ. ರಕ್ತದೊತ್ತಡದ ಏರಿಳಿತದಿಂದ ಸಮಸ್ಯೆ ಉಲ್ಬಣಗೊಂಡು ಮೆದುಳು ನಿಷ್ಕ್ರಿಯಗೊಂಡು ಕೋಮಾಕ್ಕೆ ತಲುಪಿದ್ದರು ಎಂದು ಆರೋಪಿಸಲಾಗಿದೆ.
ಆರೋಗ್ಯವಂತ ಗರ್ಭಿಣಿಗೆ ಆದ ಅನ್ಯಾಯಕ್ಕೆ ಯಾರು ಹೊಣೆ? ಇಂತಹ ಹಲವು ಪ್ರಕರಣಗಳು ಮೆಡಿಕಲ್ ಕಾಲೇಜು ಆಸ್ಪತ್ರೆಗಳಲ್ಲಿ ನಡೆಯುತ್ತಿದೆ. ಈ ಪ್ರಕರಣವನ್ನು ಜಿಲ್ಲಾಡಳಿತ, ಆರೋಗ್ಯ ಇಲಾಖೆಯು ಗಂಭೀರವಾಗಿ ಪರಿಗಣಿಸಿ ಸಮಗ್ರ ತನಿಖೆ ನಡೆಸಬೇಕು. ತಪ್ಪಿತಸ್ಥ ವೈದ್ಯರ ವಿರುದ್ಧ ಮತ್ತು ಜವಾಬ್ದಾರಿ ಮರೆತ ಆಸ್ಪತ್ರೆಯ ವಿರುದ್ಧ ಸೂಕ್ತ ಕ್ರಮಕೂಗೊಳ್ಳಬೇಕು ಎಂದು ಒತ್ತಾಯಿಸಿದ್ದಾರೆ.