ಪುತ್ತೂರಿನಲ್ಲಿ ಮೆಡಿಕಲ್ ಕಾಲೇಜು ಮಾಡಿಯೇ ಸಿದ್ಧ: ಶಾಸಕ ಅಶೋಕ್ ರೈ
ಬನ್ನೂರಿನಲ್ಲಿ ಸರ್ಕಾರಿ ಮೆಡಿಕಲ್ ಕಾಲೇಜ್‍ನ ಸ್ಥಳ ವೀಕ್ಷಣೆ
ಪುತ್ತೂರು: ಪುತ್ತೂರಿನಲ್ಲಿ ಮೆಡಿಕಲ್ ಕಾಲೇಜು ಆಗಬೇಕು ಎಂಬ ಮಹದಾಸೆ ನನಗೆ ಮೊದಲಿನಿಂದಲೂ ಇತ್ತು. ಪುತ್ತೂರು ಸಮಗ್ರ ಅಭಿವೃದ್ಧಿ ಪೂರ್ಣ ಗೊಳ್ಳಬೇಕಾದರೆ ಮೆಡಿಕಲ್ ಕಾಲೇಜ್ ಕೂಡಾ ಅಗತ್ಯ. ಈ ಯೋಜನೆಯನ್ನು ಜಾರಿಗೊಳಿಸಲು ಬಹುತೇಕ ಸಿದ್ಧತೆಗಳು ಈಗಾಗಲೇ ಪೂರ್ಣಗೊಂಡಿವೆ. ಕ್ಯಾಬಿನೆಟ್ ನಲ್ಲಿ ಅನುಮೋದನೆ ಮಾಡಿಸಿ ಪುತ್ತೂರಿನಲ್ಲಿ ಮೆಡಿಕಲ್ ಕಾಲೇಜ್ ಮಾಡಿಯೇ ಸಿದ್ಧ ಎಂದು ಶಾಸಕ ಅಶೋಕ್ ರೈ ಘೋಷಿಸಿದರು.
ಅವರು ರವಿವಾರ ಪುತ್ತೂರು ತಾಲೂಕಿನ ಬನ್ನೂರು ಗ್ರಾಮದ ಸೇಡಿಯಾಪು ಎಂಬಲ್ಲಿ ಮೆಡಿಕಲ್ ಕಾಲೇಜ್ ನಿರ್ಮಾಣಕ್ಕೆಂದು ಕಾಯ್ದಿರಿಸಿದ ಜಾಗವನ್ನು ವೀಕ್ಷಣೆ ಮಾಡಿದರು.
ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿ ಅವರು ಇಲ್ಲಿ ಸುಮಾರು 40 ಎಕ್ರೆ ಸರ್ಕಾರಿ ಜಾಗವನ್ನು ಕಾಲೇಜು ನಿರ್ಮಾಣಕ್ಕೆ ಕಾಯ್ದಿರಿಸಲಾಗಿದೆ. ಆಗಿನ ಜಿಲ್ಲಾಧಿಕಾರಿಯಾಗಿದ್ದ ಎ.ಬಿ. ಇಬ್ರಾಹಿಂ ಅವರ ಅವಧಿಯಲ್ಲಿ ಈ ಜಾಗವನ್ನು ಗುರುತಿಸಿ ಸರ್ಕಾರದ ಸ್ವಾಧೀನಕ್ಕೊಳಪಡಿಸಲಾಗಿತ್ತು. ಈ ಸ್ಥಳದಲ್ಲಿ ಮುಂದೆ ಮೆಡಿಕಲ್ ಕಾಲೇಜು ನಿರ್ಮಾಣ ಕಾರ್ಯ ಶೀಘ್ರವಾಗಿ ನಡೆಯಲಿದೆ. ಅಭಿವೃದ್ಧಿಯಾಗುತ್ತಿರುವ ಪುತ್ತೂರಿಗೆ ಈ ಯೋಜನೆಯನ್ನು ಜಾರಿಗೆ ತರಲು ಈಗಾಗಲೇ ಎಲ್ಲಾ ಸಿದ್ಧತೆಗಳು ಪೂರ್ಣಗೊಂಡಿದ್ದು ಕ್ಯಾಬಿನೆಟ್‍ನಲ್ಲಿ ಅನುಮೋದನೆ ಮಾಡಿಸಿ ಮೆಡಿಕಲ್ ಕಾಲೇಜು ನಿರ್ಮಾಣ ಮಾಡಿಸಿಯೇ ಸಿದ್ಧ ಎಂದು ಹೇಳಿದರು.
ಪುತ್ತೂರು ಕ್ಷೇತ್ರ ಅಭಿವೃದ್ಧಿ ಕಾಣಬೇಕಾದರೆ ಬೃಹತ್ ಯೋಜನೆಗಳು ಕ್ಷೇತ್ರಕ್ಕೆ ಬರಬೇಕು. ಹೆಚ್ಚು ಹೆಚ್ಚು ಅನುದಾನಗಳೂ ಬರಬೇಕಿದೆ. ಉದ್ಯಮಗಳು ಆರಂಭವಾದೊಡನೆ ಸಾವಿರಾರು ಜನರಿಗೆ ಉದ್ಯೋಗವೂ ದೊರೆಯಲಿದೆ. ಮೆಡಿಕಲ್ ಕಾಲೇಜು ನಿರ್ಮಾಣದ ಕಡತವು ಈ ತನಕ ಇಲಾಖೆಯಲ್ಲಿ ತಲುಪುವಲ್ಲಿಗೆ ತಲುಪಿರಲಿಲ್ಲ, ಪುತ್ತೂರು ತಾಪಂ ಕಚೇರಿಯಲ್ಲಿ ಕೊಳೆಯುತ್ತಿದ್ದ ಈ ಕಡತವನ್ನು ಮುಟ್ಟಿಸುವಲ್ಲಿಗೆ ಮುಟ್ಟಿಸುವ ಕೆಲಸವನ್ನು ಮಾಡಿದ್ದೇನೆ ಮೊದಲ ಅಧ್ಯತೆಯಲ್ಲೇ ಕಾಲೇಜು ಸ್ಥಾಪನೆಯಾಗಲಿದೆ ಎಂದು ಶಾಸಕರು ಭರವಸೆ ನೀಡಿದರು.
ಈ ಸಂದರ್ಭದಲ್ಲಿ ಪುತ್ತೂರಿನ ಮಾಜಿ ಶಾಸಕಿ ಶಕುಂತಳಾ ಟಿ ಶೆಟ್ಟಿ, ಪುತ್ತೂರು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಎಂ.ಬಿ ವಿಶ್ವನಾಥ ರೈ, ವಿಟ್ಲ ಉಪ್ಪಿನಂಘಡಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಡಾ. ರಾಜಾರಾಂ ಕೆ.ಬಿ, ಕಾಂಗ್ರೆಸ್ ಜಿಲ್ಲಾ ವಕ್ತಾರ ಮುರಳೀದರ್ ರೈ ಮಠಂತಬೆಟ್ಟು, ಇಂಟಕ್ ಅಧ್ಯಕ್ಷ ಜಯಪ್ರಕಾಶ್ ಬದಿನಾರ್ ಮತ್ತಿತರರು ಉಪಸ್ಥಿತರಿದ್ದರು.