ಬೈಕ್ ಮೇಲೆ ಮರ ಬಿದ್ದು ಮೃತಪಟ್ಟ ಮಂಜುನಾಥ ಕುಟುಂಬಕ್ಕೆ 5 ಲಕ್ಷ ರೂ. ಪರಿಹಾರ ವಿತರಿಸಿದ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್
ಪಡುಬಿದ್ರೆ, ಜು.8: ಎರಡು ದಿನಗಳ ಹಿಂದೆ ತಡರಾತ್ರಿ ಬೆಳ್ಮಣ್ ಪೇಟೆಯಲ್ಲಿ ಚಲಿಸುತಿದ್ದ ಬೈಕ್ ಮೇಲೆ ಬೃಹತ್ ಮರ ಬಿದ್ದು ಸ್ಥಳದಲ್ಲೇ ಮೃತಪಟ್ಟ ಪಿಲಾರು ಗ್ರಾಮದ ಮಂಜುನಾಥ ಪ್ರವೀಣ್ ಆಚಾರ್ಯರ ಕುಟುಂಬಕ್ಕೆ ಪ್ರಾಕೃತಿಕ ವಿಕೋಪ ನಿಧಿಯಿಂದ 5 ಲಕ್ಷ ರೂ.ಗಳ ಚೆಕ್‌ನ್ನು ಜಿಲ್ಲಾ ಉಸ್ತುವಾರಿ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ವಿತರಿಸಿದರು.
ಕಾರ್ಕಳದಿಂದ ಪಿಲಾರಿನ ಮನೆಯತ್ತ ತೆರಳುತಿದ್ದ ಮಂಜುನಾಥ ಆಚಾರ್ಯರ ಮೇಲೆ ಮರ ಬಿದ್ದಿತ್ತು. ಅವರ ಪತ್ನಿ ಇಂದು ಸಚಿವೆಯಿಂದ ಚೆಕ್‌ನ್ನು ಸ್ವೀಕರಿಸಿದ್ದು, ಬಳಿಕ ದು:ಖ ತಡೆಯಲಾರದೇ ಬಿಕ್ಕಿ ಬಿಕ್ಕಿ ಅತ್ತಾಗ ಸಚಿವೆ ಅವರನ್ನು ಎದೆಗೊರಗಿಸಿಕೊಂಡು ಸಾಂತ್ವನದ ಮಾತುಗಳನ್ನು ಆಡಿದರು.
ಅದೇ ರೀತಿ ಅಕಸ್ಮಿಕವಾಗಿ ನೀರಿಗೆ ಬಿದ್ದು ಮುಳುಗಿ ಮೃತಪಟ್ಟ ಪಾದೂರಿನ ಗುಲಾಬಿ ದೇವಾಡಿಗ ಅವರ ಕುಟುಂಬಕ್ಕೂ ಸಚಿವೆ ಪರಿಹಾರದ ಚೆಕ್‌ನ್ನು ವಿತರಿಸಿದರು.
ಸರಕಾರದ ಮಹತ್ವಾಕಾಂಕ್ಷಿ ಗ್ಯಾರಂಟಿ ಯೋಜನೆಗಳಲ್ಲಿ ಪ್ರಮುಖವಾದ ಗೃಹಲಕ್ಷ್ಮೀ ಯೋಜನೆಯನ್ನು ಮಹಿಳಾ ಹಾಗೂ ಮಕ್ಕಳ ಕಲ್ಯಾಣ ಇಲಾಖೆಯ ಮೂಲಕ ಅನುಷ್ಠಾನಗೊಳಿಸಲಾಗುತಿದ್ದು, ಇದರ ಅರ್ಜಿಗಳನ್ನು ಜು.14ರಿಂದಲೇ ಆಹ್ವಾನಿಸಲಾಗುವುದು ಎಂದು ಸಚಿವೆ ಪ್ರಕಟಿಸಿದರು.