ರಾಷ್ಟ್ರೀಯ ಕೈಮಗ್ಗ ದಿನಾಚರಣೆ: ಆಯೋಜನಾ ಸಮಿತಿ ರಚನೆ
ಉಡುಪಿ: ಪದ್ಮಶಾಲಿ ನೇಕಾರ ಪ್ರತಿಷ್ಠಾನ, ಕರ್ನಾಟಕ ರಾಜ್ಯ ನೇಕಾರರ ಒಕ್ಕೂಟ ಹಾಗೂ ಕರಾವಳಿಯ ಎಂಟು ಪ್ರಾಥಮಿಕ ನೇಕಾರರ ಸಹಕಾರ ಸಂಘಗಳ ಸಂಯುಕ್ತ ಆಶ್ರಯದಲ್ಲಿ ಆ. ೫, ೬ ಮತ್ತು ೭ರಂದು ಹಮ್ಮಿಕೊಳ್ಳಲಾಗಿರುವ ಮೂರು ದಿನಗಳ ರಾಷ್ಟ್ರೀಯ ಕೈಮಗ್ಗ ದಿನಾಚರಣೆಯ ಅಂಗವಾಗಿ ಕೈಮಗ್ಗ ಸೀರೆಗಳ ಉತ್ಸವ ಕಾರ್ಯಕ್ರಮದ ಆಯೋಜನ ಸಮಿತಿಯ ಗೌರವಾಧ್ಯಕ್ಷರಾಗಿ ಹಿರಿಯ ಆರ್ಥಿಕ ತಜ್ಞ ಡಾ.ಜಗದೀಶ್ ಶೆಟ್ಟಿಗಾರ್ ಅತ್ರಾಡಿ ಹಾಗೂ ಅಧ್ಯಕ್ಷರಾಗಿ ಉಡುಪಿ ನಗರಸಭಾ ಸದಸ್ಯ ಮಂಜುನಾಥ್ ಮಣಿಪಾಲ ಅವರನ್ನು ಆಯ್ಕೆ ಮಾಡಲಾಗಿದೆ.
ಕಲ್ಯಾಣಪುರ ಆದಿಶಕ್ತಿ ಬ್ರಹ್ಮಲಿಂಗ ವೀರಭದ್ರ ದೇವಸ್ಥಾನದಲ್ಲಿ ರವಿವಾರ ನಡೆದ ಪೂರ್ವಭಾವಿ ಸಭೆಯಲ್ಲಿ ಈ ಆಯ್ಕೆ ಮಾಡಲಾಯಿತು. ಉಪಾಧ್ಯಕ್ಷರಾಗಿ ಬೈಲೂರು ಆನಂದ್ ಶೆಟ್ಟಿಗಾರ್ ಮತ್ತು ಶೋಭಾ ಜ್ಯೋತಿಪ್ರಸಾದ್ ಕಿನ್ನಿಮೂಲ್ಕಿ, ಕಾರ್ಯದರ್ಶಿಯಾಗಿ ಅವಿನಾಶ್ ಮಾರ್ಪಳ್ಳಿ, ಕೋಶಾಧಿಕಾರಿಯಾಗಿ ಶ್ರೀನಿವಾಸ್ ಬೈಲೂರು ಆಯ್ಕೆಯಾದರು. ಬಳಿಕ ವಿವಿಧ ಸಮಿತಿಗಳನ್ನು ರಚನೆ ಮಾಡಲಾಯಿತು.
ಪ್ರತಿಷ್ಠಾನದ ಅಧ್ಯಕ್ಷ ರತ್ನಾಕರ್ ಇಂದ್ರಾಳಿ ಸಭೆಯ ಅಧ್ಯಕ್ಷತೆ ವಹಿಸಿದ್ದರು. ಕಲ್ಯಾಣಪುರ ದೇವಸ್ಥಾನದ ಪ್ರಧಾನ ಮೊಕ್ತೇಸರರಾದ ಜ್ಯೋತಿ ಪ್ರಸಾದ್ ಶೆಟ್ಟಿಗಾರ್ ಕಿನ್ನಿಮೂಲ್ಕಿ, ಬಾರ್ಕೂರು ದೇವಸ್ಥಾನದ ಆಡಳಿತ ಮೊಕ್ತೇಸರ ಡಾ. ಜಯರಾಮ್ ಶೆಟ್ಟಿಗಾರ್, ಪ್ರತಿಷ್ಠಾನದ ಉಪಾಧ್ಯಕ್ಷೆ ಸರೋಜಾ ಶೆಟ್ಟಿಗಾರ್, ಗೌರವ ಸಲಹೆಗಾರರಾದ ವಿಶ್ವನಾಥ್ ಶೆಟ್ಟಿಗಾರ್ ದೇರೆಬೈಲು, ಅಶೋಕ್ ಶೆಟ್ಟಿಗಾರ್ ಅಲೆವೂರು, ಪ್ರೇಮಾನಂದ ಸಿ. ಶೆಟ್ಟಿಗಾರ್, ದೇವರಾಯ ಶೆಟ್ಟಿಗಾರ್, ನೇಕಾರ ಸಂಪರ್ಕ ಅಧಿಕಾರಿ ಕೇಶವ ಶೆಟ್ಟಿಗಾರ್ ಕೊರಂಗ್ರಪಾಡಿ, ಕರ್ನಾಟಕ ರಾಜ್ಯ ಪದ್ಮಶಾಲಿ ಸಮಾಜ ಸೇವಾ ಸಂಘದ ಅಧ್ಯಕ್ಷರಾದ ಜಗದೀಶ್ ಬಲಭದ್ರ ಉಪಸ್ಥಿತರಿದ್ದರು.
ರಾಜ ಕೇಸರಿ ಸ್ವಾಗತಿಸಿ, ಅವಿನಾಶ್ ವಂದಿಸಿದರು. ನರೇಂದ್ರ ಹೆರ್ಗ ಕಾರ್ಯಕ್ರಮ ನಿರೂಪಿಸಿದರು.